ಹೊಸದಿಲ್ಲಿ : ಇಸ್ಲಾಮಾಬಾದ್ ನಲ್ಲಿ ನಡೆಯಲಿಕ್ಕಿರುವ ಸಾರ್ಕ್ ಶೃಂಗ ಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಪಾಕಿಸ್ಥಾನದ ವಿದೇಶ ಕಾರ್ಯಾಲಯ ಹೇಳಿರುವುದನ್ನು ಉಲ್ಲೇಖೀಸಿ ಡಾನ್ ವರದಿ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಡಾ. ಮೊಹಮ್ಮದ್ ಫೈಸಲ್, “ಭಾರತ ಒಂದು ಹೆಜ್ಜೆ ಮುಂದೆ ಇಟ್ಟರೆ ಪಾಕಿಸ್ಥಾನ ಎರಡು ಹೆಜ್ಜೆ ಮುಂದಿಡುತ್ತದೆ” ಎಂದು ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೇಳಿದ್ದನ್ನು ಸ್ಮರಿಸಿದರು.
ಸಾರ್ಕ್ ಶೃಂಗ ಸಭೆಗಳನ್ನು ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಇದರ ಆತಿಥೇಯತ್ವವು ಸಾರ್ಕ್ ಸದಸ್ಯ ರಾಷ್ಟ್ರಗಳಿಗೆ ವರ್ಣಮಾಲೆ ಕ್ರಮಾಂಕದಲ್ಲಿ ಲಭಿಸುತ್ತದೆ. ಆತಿಥೇಯತ್ವ ವಹಿಸುವ ಸದಸ್ಯ ರಾಷ್ಟ್ರವು ಆ ಸರದಿಯಲ್ಲಿ ಸಾರ್ಕ್ ಅಧ್ಯಕ್ಷತೆಯನ್ನು ಹೊಂದಿರುತ್ತದೆ.
ಹಿಂದಿನ ಸಾರ್ಕ್ ಶೃಂಗ ಸಭೆ 2014ರಲ್ಲಿ ನೇಪಾಲದ ಕಾಠ್ಮಂಡುವಿನಲ್ಲಿ ನಡೆದಿತ್ತು; ಪ್ರಧಾನಿ ಮೋದಿ ಅದರಲ್ಲಿ ಪಾಲ್ಗೊಂಡಿದ್ದರು.
2016ರ ಶೃಂಗ ಸಭೆ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿತ್ತು. ಆದರೆ ಆ ವರ್ಷ ಸೆ.18ರಂದು ಜಮ್ಮು ಕಾಶ್ಮೀರದ ಉರಿ ಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಪಾಕ್ ಉಗ್ರರಿಂದ ದಾಳಿ ನಡೆದಿತ್ತು. ಉಗ್ರರ ದಾಳಿಗೆ 19 ಮಂದಿ ಭಾರತೀಯ ಯೋಧರು ಬಲಿಯಾಗಿದ್ದರು.
ಆ ಸನ್ನಿವೇಶದಲ್ಲಿ ತನಗೆ ಸಾರ್ಕ್ ಶೃಂಗದಲ್ಲಿ ಪಾಲ್ಗೊಳ್ಳಲು ಅಸಾಧ್ಯವೆಂದು ಭಾರತ ಹೇಳಿತ್ತಲ್ಲದೆ ಪಾಕಿಸ್ಥಾನದ ಮೇಲೆ ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಿತ್ತು.