ದುಬೈ : ಎಮಿರೇಟ್ ಪರಿಸರ ಸಮೂಹ ದೇಶಾದ್ಯಂತ ನಡೆಸುತ್ತಿರುವ ರದ್ದಿ ಕಾಗದ ಪುನರ್ ಬಳಕೆ ಆಂದೋಲನದ ಭಾಗವಾಗಿ ಎಂಟು ವರ್ಷದ ಭಾರತೀಯ ವಿದ್ಯಾರ್ಥಿನಿ ನಿಯಾ ಟೋನಿ 15,000 ಕಿಲೋ ರದ್ದಿ ಪೇಪರ್ ಸಂಗ್ರಹಿಸುವ ಮೂಲಕ ಸಮ್ಮಾನಕ್ಕೆ ಪಾತ್ರಳಾಗಿದ್ದಾಳೆ.
ನಿಯಾ ಟೋನಿ ಪ್ರತೀ ವಾರ ರದ್ದಿ ಕಾಗದವನ್ನು ಸಂಗ್ರಹಿಸುತ್ತಾ ಪರಿಸರ ನೈರ್ಮಲ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಲ್ಲದೆ ಸುಮಾರು 15,000 ಕಿಲೋ ರದ್ದಿ ಪೇಪರ್ ಸಂಗ್ರಹಿಸಿರುವುದು ಗಮನಾರ್ಹವಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಪರಿಸರ ನೈರ್ಮಲ್ಯ ಕಾಪಿಡುವ ನಿಟ್ಟಿನಲ್ಲಿ ತಾನು ಮಾಡಿರುವ ಪ್ರಯತ್ನವನ್ನು ನಿಯಾ ಟೋನಿ ವಿವರಿಸಿರುವುದು ಹೀಗೆ :
“ನಾನಿರುವ ಪ್ರದೇಶದಲ್ಲಿ ರದ್ದಿ ಪೇಪರ್ ಪುನರ್ ಬಳಕೆಯ ಮಹತ್ವವನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದೆ. ಆ ಪ್ರಕಾರ ನಾನು ಪ್ರತೀ ವಾರ ಸುದ್ದಿ ಪತ್ರಿಕಗಳು, ನಿಯತಕಾಲಿಕಗಳು ಮತ್ತು ಇತರ ಬಗೆಯ ಪೇಪರ್‌ಗಳನ್ನು ಸಂಗ್ರಹಿಸಲು ಹೋಗುತ್ತಿದ್ದೆ; ಜನರು ಈ ಬಗೆಯ ಪೇಪರ್‌ಗಳನ್ನು ಒಂದೋ ಬಿಸಾಡುತ್ತಿದ್ದರು ಇಲ್ಲವೇ ತಮ್ಮಲ್ಲಿ ಇರಿಸಿಕೊಳ್ಳಲು ಬಯಸುತ್ತಿರಲಿಲ್ಲ’
“ನನ್ನಂತಹ ಮಕ್ಕಳು ಪೇಪರ್ ಪುನರ್ ಬಳಕೆಯ ಮಹತ್ವವನ್ನು ಅರಿತು ಜನಜಾಗೃತಿ ಉಂಟು ಮಾಡುವ ಮೂಲಕ ಪರಿಸರ ನೈರ್ಮಲ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುವುದನ್ನು ಸಣ್ಣ ವಯಸ್ಸಿನಲ್ಲೇ ಆರಂಭಿಸಬೇಕು ಎಂದು ನಾನು ಭಾವಿಸುತ್ತೇನೆ’.