ವಾಷಿಂಗ್ಟನ್: ಅಮೆರಿಕ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯರ ನೇಮಕ ಸತತವಾಗಿ ಹೆಚ್ಚುತ್ತಿದೆ. ಇದೀಗ ಭಾರತ ಮೂಲದ ಸಿಖ್ ಮಹಿಳೆ ಲೆಫ್ಟಿನೆಂಟ್ ಮನ್ಮೀತ್ ಕೊಲನ್, ಕನೆಕ್ಟಿಕಟ್ ರಾಜ್ಯ ಸಹಾಯಕ ಪೊಲೀಸ್ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಪೊಲೀಸ್ ಇಲಾಖೆಯ 2ನೇ ದೊಡ್ಡ ಹುದ್ದೆಗೇರಿದ ಏಷ್ಯಾ ಮೂಲದ ಮೊದಲ ಮಹಿಳೆ ಎಂಬ ಖ್ಯಾತಿಗೂ ಮನ್ಮೀತ್ ಪಾತ್ರರಾಗಿದ್ದಾರೆ.
ನ್ಯೂ ಹೆವೆನ್ ಪೊಲೀಸ್ ಇಲಾಖೆಯಲ್ಲಿ ಕಳೆದ 15 ವರ್ಷಗಳಿಂದ ಸೇವಾನುಭವ ಹೊಂದಿರುವ ಮನ್ಮೀತ್, ನಗರದ ಮೂರನೇ ಸಹಾಯಕ ಪೊಲೀಸ್ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಹುದ್ದೆಗೇರಿದ 2ನೇ ಮಹಿಳೆ ಇವರಾಗಿದ್ದು, ಏಷ್ಯಾ ಮೂಲದ ಮೊದಲ ಮಹಿಳೆಯೂ ಆಗಿದ್ದಾರೆ. ಭಾರತದ ಮುಂಬೈ ಮೂಲದವರಾದ ಮನ್ಮೀತ್, ಅವರ 11ನೇ ವಯಸ್ಸಿನಲ್ಲೇ ಕುಟುಂಬದೊಂದಿಗೆ ಅಮೆರಿಕಕ್ಕೆ ವಲಸೆಬಂದಿದ್ದಾರೆ.