ಹೂಸ್ಟನ್(ವಾಷಿಂಗ್ಟನ್): ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು ಅಂತಿಮ ಘಟ್ಟದ ಹಂತಕ್ಕೆ ತಲುಪಿದೆ. ಏತನ್ಮಧ್ಯೆ ಮಿಚಿಗನ್ ನಿಂದ ಕರ್ನಾಟಕದ ಬೆಳಗಾವಿ ಮೂಲದ ಅಮೆರಿಕನ್ ಉದ್ಯಮಿ ಶ್ರೀ ಥಾಣೇದಾರ್ ಶೇ.93ರಷ್ಟು ಮತ ಪಡೆಯುವ ಮೂಲಕ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
65ವರ್ಷದ ಥಾಣೇದಾರ್ ವಿಜ್ಞಾನಿಯಾಗಿದ್ದು, ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿ ಮಿಚಿಗನ್ ನಲ್ಲಿ ಶೇ.93ರಷ್ಟು ಮತಗಳಿಂದ ಆಯ್ಕೆಯಾಗಿದ್ದಾರೆ. ಥಾಣೇದಾರ್ ಮೂಲತಃ ಬೆಳಗಾವಿ ಜಿಲ್ಲೆಯವರು. ತಮ್ಮ 18ನೇ ವಯಸ್ಸಿನಲ್ಲಿಯೇ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಾಂಬೆ ಯೂನಿರ್ವಸಿಟಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದ ಥಾಣೇದಾರ್ 1979ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.
ಅಮೆರಿಕದ ಅಕ್ರೋನ್ ಯೂನಿರ್ವಸಿಟಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ಕರ್ನಾಟಕದಿಂದ ತೆರಳಿದ್ದು, ನಂತರ ಮಿಚಿಗನ್ ಯೂನಿರ್ವಸಿಟಿಯಲ್ಲಿ ವ್ಯಾಸಂಗ ಮಾಡಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಪ್ರೀತಿಸಿ ಮದುವೆಯಾದ ಪತ್ನಿಯಿಂದ ಕಿರುಕುಳ! ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ
ಈಗಾಗಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆಯಲ್ಲಿ ಡೆಮೋಕ್ರಟಿಕ್ ಪಕ್ಷದ ಜೋ ಬೈಡೆನ್ ಅವರು 264 ಎಲೆಕ್ಟೋರಲ್ ಮತ ಪಡೆದಿದ್ದು ಮುನ್ನಡೆ ಸಾಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 214 ಎಲೆಕ್ಟೋರಲ್ ಪ್ರತಿನಿಧಿಗಳ ಬೆಂಬಲ ಪಡೆದಿದ್ದಾರೆ. ಒಂದು ವೇಳೆ ಜಾರ್ಜಿಯಾ ಅಥವಾ ಪೆನೆಸ್ಲೇವೇನಿಯಾದಲ್ಲಿ ಬೈಡೆನ್ ಹೆಚ್ಚು ಬೆಂಬಲ ಗಳಿಸಿದರೆ ಶ್ವೇತಭವನ ಪ್ರವೇಶಿಸಲು ದಾರಿ ಸುಲಭವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ.