Advertisement

ನ್ಯೂಯಾರ್ಕ್: 7 ಕೋಟಿ ರೂ. ಬಂಪರ್ ಬಹುಮಾನದ ಟಿಕೆಟ್ ಹಿಂದಿರುಗಿಸಿದ ಭಾರತೀಯ ಕುಟುಂಬ

05:27 PM May 25, 2021 | Team Udayavani |

ನ್ಯೂಯಾರ್ಕ್: ಬರೋಬ್ಬರಿ ಒಂದು ಮಿಲಿಯನ್ ಡಾಲರ್ (7,27,80,500 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದ ಲಕ್ಕಿ ಡ್ರಾ ಲಾಟರಿ ಟಿಕೆಟ್ ಅನ್ನು ಸರಿಯಾಗಿ ನೋಡದೆ ಮಹಿಳೆಯೊಬ್ಬರು ಬಿಸಾಡಿ ಹೋಗಿದ್ದು, ಕೊನೆಗೆ ಆ ಟಿಕೆಟ್ ಅನ್ನು ಮಹಿಳೆಗೆ ವಾಪಸ್ ನೀಡುವ ಮೂಲಕ ಭಾರತೀಯ ಮೂಲದ ಕುಟುಂಬ ಪ್ರಾಮಾಣಿಕತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ನ್ಯೂಯಾರ್ಕ್ ಸಿನಿಮೋತ್ಸವಕ್ಕೆ ಕುಂದಾಪ್ರ ಕನ್ನಡದ ‘ಕೋಳಿ ತಾಳ್’ ಚಿತ್ರ ಆಯ್ಕೆ

ನಡೆದಿದ್ದೇನು?
ಇಲ್ಲಿನ ಮೆಸಾಚುಸೆಟ್ಸ್ ನ ಸೌತ್ ವಿಕ್ ನಲ್ಲಿ ಭಾರತೀಯ ಕುಟುಂಬವೊಂದು ಲಕ್ಕಿ ಸ್ಪಾಟ್ ಸ್ಟೋರ್ ಅನ್ನು ನಡಸುತ್ತಿದ್ದರು. ಈ ಸ್ಟೋರ್ ನಲ್ಲಿ ಲೀ ರೋಸ್ ಎಂಬಾಕೆ ಡೈಮಂಡ್ ಮಿಲಿಯನ್ ಸ್ಕ್ರಾಚ್ ಆಫ್ ಲಾಟರಿ ಟಿಕೆಟ್ ಖರೀದಿಸಿದ್ದರು. ಆದರೆ ಈ ಟಿಕೆಟ್ ಅನ್ನು ಸರಿಯಾಗಿ ಸ್ಕ್ರಾಚ್ ಮಾಡದೇ ಲೀ ಅದನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದರು.

ಆದರೆ ಸ್ಟೋರ್ ಮಾಲೀಕ ಮೌನೀಶ್ ಶಾ ಅವರ ಪುತ್ರ ಅಭಿ ಶಾ ಕಸದ ಬುಟ್ಟಿಯಲ್ಲಿದ್ದ ಟಿಕೆಟ್ ಗಮನಿಸಿ ಸರಿಯಾಗಿ ತಿಕ್ಕಿ ನೋಡಿದಾಗ…ಆ ಟಿಕೆಟ್ ಗೆ 7.2 ಕೋಟಿ ರೂಪಾಯಿ ಬಂಪರ್ ಬಹುಮಾನ ಬಂದಿರುವುದು ತಿಳಿಯಿತು. ಅಬ್ಬಾ ತಾನು ರಾತ್ರೋರಾತ್ರಿ ಕೋಟ್ಯಧೀಶ್ವರನಾಗಿದ್ದೇನೆ ಎಂದು ಖುಷಿಯಿಂದ ಹಿಗ್ಗಿ, ಈ ಹಣದಿಂದ ಟೆಸ್ಲಾ ಕಾರು ಕೊಳ್ಳಬೇಕೆಂಬ ಬಯಕೆಯೂ ಆಗಿತ್ತು ಎಂದು ಅಭಿ ಸ್ಥಳೀಯ ಚಾನೆಲ್ ವೊಂದರ ಜತೆ ಮಾತನಾಡುತ್ತ ತಿಳಿಸಿದ್ದಾನೆ.

ತಾಯಿ ಅರುಣಾ ಅವರ ಬಳಿ ವಿಚಾರಿಸಿದಾಗ ಈ ಟಿಕೆಟ್ ತಮ್ಮ ಅಂಗಡಿಯ ಖಾಯಂ ಗ್ರಾಹಕರೊಬ್ಬರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದರು. ಆದರೆ ಆ ಟಿಕೆಟ್ ನಮಗೆ ಸಿಕ್ಕಿದ ಮೇಲೆ ಎರಡು ರಾತ್ರಿ ನಿದ್ದೆ ಬಂದಿರಲಿಲ್ಲವಾಗಿತ್ತು. ನಂತರ ಅಭಿ ಭಾರತದಲ್ಲಿರುವ ಅಜ್ಜಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ತಿಳಿಸಿದ್ದ.

Advertisement

ಅದಕ್ಕೆ ಅಜ್ಜಿ, ಆ ಟಿಕೆಟ್ ನೀನು ಇಟ್ಟುಕೊಳ್ಳಬೇಡ, ಇದು ಒಳ್ಳೆಯ ಗುಣವಲ್ಲ. ಆ ಟಿಕೆಟ್ ವಾಪಸ್ ಕೊಟ್ಟು ಬಿಡು. ನಿನಗೆ ಅದೃಷ್ಟ ಇದ್ದರೆ, ನಿನಗೆ ಹೇಗಾದರೂ ಹಣ ಸಿಗುತ್ತದೆ ಎಂದು ಸಲಹೆ ನೀಡಿರುವುದಾಗಿ ಮೌನೀಶ್ ಶಾ ತಿಳಿಸಿರುವುದಾಗಿ ಡಬ್ಲ್ಯುಬಿಝಡ್ ಟಿವಿ ವರದಿ ಮಾಡಿದೆ.

ಬಳಿಕ ಅಭಿ 7.2 ಕೋಟಿ ಬಂಪರ್ ಬಹುಮಾನ ಪಡೆದ ಲಾಟರಿ ಟಿಕೆಟ್ ಅನ್ನು ರೋಸ್ ಅವರಿಗೆ ಹಿಂದಿರುಗಿಸಲು ನಿರ್ಧರಿಸಿದ್ದ. ಕೊನೆಗೆ ಆಕೆ ಕೆಲಸ ಮಾಡುತ್ತಿದ್ದ ಕಚೇರಿಗೆ ಹೋಗಿ ಬಂಪರ್ ಬಹುಮಾನ ಬಂದ ಲಾಟರಿ ಟಿಕೆಟ್ ಕೊಟ್ಟಿದ್ದರು. ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಬಂದಿರುವುದು ನನಗೆ ನಂಬಲು ಸಾಧ್ಯವಾಗಲಿಲ್ಲ. ಬಹುಮಾನ ಬಂದ ಟಿಕೆಟ್ ವಾಪಸ್ ಕೊಟ್ಟ ಖುಷಿಗೆ ರೋಸ್ ಕುಣಿದು ಕುಪ್ಪಳಿಸಿ, ಕಣ್ಣೀರು ಹಾಕಿರುವುದಾಗಿ ವರದಿ ತಿಳಿಸಿದೆ.

ಒಂದು ಮಿಲಿಯನ್ ಡಾಲರ್ ಮೊತ್ತದ ಟಿಕೆಟ್ ಅನ್ನು ಕೊಟ್ಟಾಗ ಆಕೆ ಮಗುವಿನಂತೆ ಕಣ್ಣೀರು ಹಾಕಿ, ನೆಲದ ಮೇಲೆ ಕುಳಿತು ನಿಟ್ಟುಸಿರು ಬಿಟ್ಟಿರುವುದಾಗಿ ಮೌನೀಶ್ ಶಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಒಂದು ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಲಾಟರಿ ಟಿಕೆಟ್ ವಾಪಸ್ ನೀಡಿರುವ ಭಾರತೀಯ ಕುಟುಂಬಕ್ಕೆ ಇದೀಗ ಎಲ್ಲೆಡೆಯಿಂದ ಕೃತಜ್ಞತೆ, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next