Advertisement

ಸುಳ್ಳು ಸುದ್ದಿ ಪತ್ತೆಗೆ ಮೈಸೂರಿನ ಟೆಕ್ಕಿಯ ಲಾಜಿಕಲಿ ಟೂಲ್‌

06:00 AM Jul 23, 2018 | Team Udayavani |

ಲಂಡನ್‌: ಜಗತ್ತಿನಾದ್ಯಂತ ಈಗ ಸುಳ್ಳು ಸುದ್ದಿಗಳದ್ದೇ ಸುದ್ದಿ. ಸರ್ಕಾರಗಳು, ನ್ಯಾಯಾಲಯಗಳು, ಸಾಮಾಜಿಕ ಜಾಲತಾಣಗಳು ಈ ಫೇಕ್‌ನ್ಯೂಸ್ಗಳ ಹಿಂದೆ ಬಿದ್ದಿದ್ದು, ಅವುಗಳ ತಡೆಗೆ ಹರಸಾಹಸ ಪಡುತ್ತಿವೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸಂದೇಶಗಳ ಪೈಕಿ ನಿಜ ಯಾವುದು ಹಾಗೂ ಸುಳ್ಳು ಯಾವುದು ಎಂಬುದನ್ನು ಪತ್ತೆ ಮಾಡುವುದೇ ಒಂದು ದೊಡ್ಡ ಸವಾಲಿನ ಸಂಗತಿಯಾಗಿರುವ ಇಂಥ ಸನ್ನಿವೇಶದಲ್ಲೇ ಮೈಸೂರು ಮೂಲದ ಲಿರಿಕ್‌ ಜೈನ್‌ ಇಂಗ್ಲೆಂಡ್‌ನ‌ಲ್ಲಿ ವಿನೂತನ ಸ್ಟಾರ್ಟಪ್‌ವೊಂದನ್ನು ಸ್ಥಾಪಿಸಿದ್ದಾರೆ.

Advertisement

ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಗಳಲ್ಲಿರುವ ಸುಳ್ಳನ್ನು ಪತ್ತೆ ಮಾಡುವ ಕೆಲಸವನ್ನು ಈ ನವೋದ್ಯಮ ಮಾಡಲಿದೆ. ಕೇಂಬ್ರಿಜ್‌ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರುವ ಲಿರಿಕ್‌ ಜೈನ್‌, “ಮಶಿನ್‌ ಲರ್ನಿಂಗ್‌ ಅಲ್ಗೊರಿದಂ’ ಅನ್ನು ಬಳಸಿ ಲಾಜಿಕಲಿ ಎಂಬ ಟೂಲ್‌ ಸಿದ್ಧಪಡಿಸಿದ್ದಾರೆ.ಇದನ್ನು ಅಮೆರಿಕ ಹಾಗೂ ಇಂಗ್ಲೆಂಡ್‌ನ‌ಲ್ಲಿ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಗುತ್ತಿದ್ದು, ಭಾರತದಲ್ಲಿ ಅಕ್ಟೋಬರ್‌ ವೇಳೆಗೆ ಅನಾವರಣಗೊಳ್ಳಲಿದೆ.

ಮಾನವ ಹಸ್ತಕ್ಷೇಪ ಇರಲ್ಲ:
ಸುಮಾರು 70 ಸಾವಿರ ಡೊಮೇನ್‌ಗಳಿಂದ ಸುದ್ದಿಗಳನ್ನು ಗ್ರಹಿಸುವ ಲಾಜಿಕಲಿ ಪ್ಲಾಟ್‌ಫಾರಂ, ಪ್ರತಿ ಲೇಖನದಲ್ಲಿರುವ ಎಲ್ಲ ಮಾಹಿತಿಯನ್ನೂ ಪರಿಶೀಲಿಸುತ್ತದೆ. ಇದರಲ್ಲಿ ಇರಬಹುದಾದ ತಪ್ಪುಗಳನ್ನು ಈ ಪ್ಲಾಟ್‌ಫಾರಂ ಕಂಡುಹಿಡಿಯಲಿದೆ. ಇದರಿಂದ ಜನರು ಈ ಸುದ್ದಿ ವಿಶ್ವಾಸಾರ್ಹವೇ ಎಂಬುದನ್ನು ತಕ್ಷಣ ಅರಿಯಬಹುದು. ಈ ರೀತಿಯ ಸಂಗತಿಗಳನ್ನು ಕಂಡುಕೊಳ್ಳಲೆಂದೇ ಮಶಿನ್‌ ಲರ್ನಿಂಗ್‌ ಅಲ್ಗೊರಿದಂ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌(ಕೃತಕ ಬುದ್ಧಿಮತ್ತೆ) ಕೂಡ ಇಲ್ಲಿ ಕೆಲಸ ಮಾಡುತ್ತದೆ. ಹೀಗಾಗಿ ಇಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರುವುದಿಲ್ಲ. ಅಲ್ಲದೆ ಲಕ್ಷಾಂತರ ಸುದ್ದಿಗಳು ಪ್ರತಿನಿತ್ಯ ಜನರೇಟ್‌ ಆಗುವುದರಿಂದ ಇವುಗಳಲ್ಲಿ ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ಕಂಡುಕೊಳ್ಳುವುದು ಮ್ಯಾನ್ಯುಅಲ್‌ ವಿಧಾನದಲ್ಲಿ ಸಾಧ್ಯವಿಲ್ಲ.

10 ಕೋಟಿ ರೂ. ಬಂಡವಾಳ:
ಲಾಜಿಕಲಿ ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳ ಪದವೀಧರರನ್ನು ನೇಮಿಸಿಕೊಂಡಿದ್ದು, 10 ಕೋಟಿ ರೂ. ಬಂಡವಾಳವನ್ನೂ ಹೂಡಿಕೆ ಮಾಡಲಾಗಿದೆ. ಅಮೆರಿಕ, ಇಂಗ್ಲೆಂಡ್‌ ಹಾಗೂ ಭಾರತದಲ್ಲಿನ ಕಚೇರಿಯಲ್ಲಿ ಒಟ್ಟು 38 ಜನರು ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಉದ್ಯೋಗಿಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಈ ತಂತ್ರಜ್ಞಾನವು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಸ್‌ ಆದರೆ, ಫೇಕ್‌ ನ್ಯೂಸ್‌ಗಳಿಗೆ ಬ್ರೇಕ್‌ ಹಾಕುವುದು ಸುಲಭವಾಗಲಿದೆ.

ಸಂಕೀರ್ಣ ಹಾಗೂ ಗೊಂದಲಕಾರಿ ಮಾಹಿತಿಯನ್ನು ಅರ್ಥ ಮಾಡಿಕೊಂಡು ಅದರಲ್ಲಿರುವ ವಾಸ್ತವ ಮತ್ತು ಸುಳ್ಳನ್ನು ಬೇರ್ಪಡಿಸಲು ನಮ್ಮ ತಂತ್ರಜ್ಞಾನ ನೆರವಾಗಲಿದೆ. ಇದೆಲ್ಲದರಾಚೆಗೆ ತಪ್ಪು ಮಾಹಿತಿಯಿಂದಾಗುವ ನಿಜವಾದ ಅಪಾಯಗಳ ಬಗ್ಗೆ ಜನರಿಗೆ ಸರ್ಕಾರವೂ ಅರಿವು ಮೂಡಿಸಬೇಕಿದೆ.
– ಲಿರಿಕ್‌ ಜೈನ್‌, ಲಾಜಿಕಲಿ ಸಂಸ್ಥಾಪಕ

Advertisement
Advertisement

Udayavani is now on Telegram. Click here to join our channel and stay updated with the latest news.

Next