ವಾಷಿಂಗ್ಟನ್: ಭಾರತೀಯ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ರಾಜಾ ಕೃಷ್ಣಮೂರ್ತಿ ಅವರು ಸತತ ಮೂರನೇ ಬಾರಿಗೆ ಅಮೆರಿಕ ಸಂಸತ್ ನ ಜನಪ್ರತಿನಿಧಿಯಾಗಿ ಪುನರಾಯ್ಕೆಗೊಂಡಿರುವುದಾಗಿ ವರದಿ ತಿಳಿಸಿದೆ.
ತೀವ್ರ ಪೈಪೋಟಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಸ್ಪರ್ಧೆ ಇದ್ದು, ಯಾರು ಅಧ್ಯಕ್ಷ ಗದ್ದುಗೆ ಏರಲಿದ್ದಾರೆ ಎಂಬುದು ಬುಧವಾರ (ನವೆಂಬರ್ 4, 2020) ಸಂಜೆಯೊಳಗೆ ಬಹಿರಂಗವಾಗಲಿದೆ.
ನವದೆಹಲಿಯಲ್ಲಿ ಜನಿಸಿದ್ದ ಕೃಷ್ಣಮೂರ್ತಿ (47ವರ್ಷ) ಅವರು ತುಂಬ ಸುಲಭವಾಗಿ ತನ್ನ ಪ್ರತಿಸ್ಪರ್ಧಿ ಲಿಬರ್ಟೇರಿಯನ್ ಪಕ್ಷದ ಪ್ರಿಸ್ಟನ್ ನೆಲ್ಸನ್ ಅವರನ್ನು ಪರಾಜಯಗೊಳಿಸಿದ್ದಾರೆ. ಇತ್ತೀಚೆಗಿನ ವರದಿ ಪ್ರಕಾರ, ಕೃಷ್ಣಮೂರ್ತಿ ಒಟ್ಟು ಲೆಕ್ಕಾಚಾರಗೊಂಡ ಮತಎಣಿಕೆಯಲ್ಲಿ ಶೇ.71ರಷ್ಟು ಮತ ಪಡೆದಿರುವುದಾಗಿ ವಿವರಿಸಿದೆ.
ಕೃಷ್ಣಮೂರ್ತಿ ಪೋಷಕರು ತಮಿಳುನಾಡಿನ ಮೂಲದವರು. 2016ರಲ್ಲಿ ಮೊದಲ ಬಾರಿಗೆ ಅಮೆರಿಕ ಸಂಸತ್ ನ ಜನಪ್ರತಿನಿಧಿಯಾಗಿ ಕೃಷ್ಣಮೂರ್ತಿ ಆಯ್ಕೆಯಾಗಿದ್ದರು.
ಅದೇ ರೀತಿ ಕಾಂಗ್ರೆಸ್ ಮ್ಯಾನ್ ಅಮಿ ಬೇರಾ ಅವರು ಕ್ಯಾಲಿಫೋರ್ನಿಯಾದಿಂದ ಸಸತ ಐದನೇ ಬಾರಿ ಗೆಲುವು ಸಾಧಿಸಲು ಬಯಸಿದ್ದು. ರೋ ಖನ್ನಾ ಕೂಡಾ ಕ್ಯಾಲಿಫೋರ್ನಿಯಾದಿಂದ ಮೂರನೇ ಬಾರಿಗೆ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.