ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮದಂತೆ ಪ್ರಚಲಿತದಲ್ಲಿದೆ. ಇಲ್ಲಿನ ಬಹುತೇಕ ಮನೆಯ ಹುಡುಗರು ಚೆಂಡು ದಾಂಡಿನ ಆಟವನ್ನೇ ಮೈಗೂಡಿಸಿಕೊಂಡವರೇ. ಅದೇ ರೀತಿ ದೇಶದ ಹೊರಗಿದ್ದರೂ ಭಾರತೀಯರು ಕ್ರಿಕೆಟ್ ಆಟದ ಬಗ್ಗೆ ಹೆಚ್ಚು ಪ್ರಭಾವಿತರಾಗುತ್ತಾರೆ. ಹೀಗೆ ಬೇರೆ ದೇಶದ ಪರ ಆಡಿದ ಭಾರತೀಯ ಮೂಲದ ಹಲವರಿದ್ದಾರೆ. ಆ ಪಟ್ಟಿಗೆ ಇದೀಗ ಮತ್ತೊಂದು ಹೆಸರು ಸೇರಿದೆ. ಅವರೆ ತನ್ವೀರ್ ಸಂಘಾ.
ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಬುಧವಾರ ರಾತ್ರಿ ನಡೆದ ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಕ್ರಿಕೆಟ್ ವಿಶ್ವಕ್ಕೆ ಹೊಸ ಲೆಗ್ ಸ್ಪಿನ್ನರ್ ಒಬ್ಬರ ಪರಿಚಯವಾಯಿತು. ಆಸ್ಟ್ರೇಲಿಯಾ ಪರ ಆಡಿದ 21 ವರ್ಷದ ತನ್ವೀರ್ ಸಂಘಾ ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಡರ್ಬನ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯುವುದು ಬಿಡಿ, ತಾನು ಆಡಲಿದ್ದೇನೆ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದೇನೆ ಎಂದೇ ಸಂಘಾಗೆ ತಿಳಿದಿರಲಿಲ್ಲ. ಇಂಗ್ಲೆಂಡ್ ನಲ್ಲಿ ನಡೆದಿದ್ದ ಹಂಡ್ರೆಡ್ ಲೀಗ್ ನಲ್ಲಿ ಆಡಿದ್ದ ಸಂಘಾ, ಡರ್ಬನ್ ಪಂದ್ಯಾರಂಭಕ್ಕೆ ಕೇವಲ 24ಗಂಟೆಗಳ ಮೊದಲಷ್ಟೇ ಹರಿಣಗಳ ನಾಡಿಗೆ ಬಂದಿಳಿದಿದ್ದರು. ಬುಧವಾರ ಬೆಳಗ್ಗೆ ಜಿಮ್ ನಲ್ಲಿರುವಾಗಲೇ ಸಂಘಾಗೆ ತಾನು ಪಂದ್ಯವಾಡುತ್ತಿರುವ ವಿಚಾರ ಗೊತ್ತಾಗಿದ್ದು. ಕಾಂಗರೂಗಳ ತಂಡದ ಪ್ರಮುಖ ಸ್ಪಿನ್ನರ್ ಆ್ಯಡಂ ಜಂಪಾ ಹಠಾತ್ ಅನಾರೋಗ್ಯಕ್ಕೆ ಒಳಗಾದ ಕಾರಣ ಸಂಘಾ ಅವಕಾಶದ ಬಾಗಿಲು ತೆರೆದಿತ್ತು.
ಯಾರು ಈ ತನ್ವೀರ್ ಸಂಘಾ?
2020ರ ಐಸಿಸಿ ಅಂಡರ್ 19 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದ ಲೆಗ್ಗಿ ತನ್ವೀರ್ ಸಂಘಾ ಜನಿಸಿದ್ದು 2001ರ ಜನವರಿ 26ರಂದು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹುಟ್ಟಿ ಬೆಳೆದ ತನ್ವೀರ್ ತಂದೆ – ತಾಯಿ ಭಾರತ ಮೂಲದವರು. ತಂದೆ ಜೋಗಾ ಸಂಘಾ ಜಲಂಧರ್ ಬಳಿಯ ಹಳ್ಳಿಯಾದ ರಹಿಂಪುರದಿಂದ ಬಂದವರು. ಜೋಗಾ ಸಿಡ್ನಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ತಾಯಿ ಅಪ್ನೀತ್ ಅಕೌಂಟೆಂಟ್ ಆಗಿ ದುಡಿಯುತ್ತಿದ್ದಾರೆ. ತನ್ವೀರ್ ತನ್ನ ಶಿಕ್ಷಣವನ್ನು ಪನೇನಿಯಾದ ಈಸ್ಟ್ ಹಿಲ್ಸ್ ಬಾಯ್ಸ್ ಹೈಸ್ಕೂಲ್ ನಲ್ಲಿ ಪಡೆದಿದ್ದರು.
ತನ್ವೀರ್ 2020 ಡಿಸೆಂಬರ್ 12ರಂದು ಬಿಗ್ ಬ್ಯಾಷ್ ಲೀಗ್ ಪಂದ್ಯದಲ್ಲಿ ಸಿಡ್ನಿ ಥಂಡರ್ ಗಾಗಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, ಅವರು ಮೊದಲು 2020 ರ ಅಂಡರ್-19 ಕ್ರಿಕೆಟ್ ವಿಶ್ವಕಪ್ ನಲ್ಲಿ ಅಭಿಮಾನಿಗಳ ಗಮನ ಸೆಳೆದರು. ಅಲ್ಲಿ ಅವರು 15 ವಿಕೆಟ್ ಗಳನ್ನು ಪಡೆದಿದ್ದರು.
ಬಿಬಿಎಲ್ ನಲ್ಲಿ ಪರಿಣಾಮಕಾರಿ ಚೊಚ್ಚಲ ಋತುವಿನ ನಂತರ, ತನ್ವೀರ್ 2021 ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟ್ರಾನ್ಸ್-ಟಾಸ್ಮನ್ ಟಿ20 ಸರಣಿಗೆ ಮೊದಲ ಬಾರಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಕರೆ ಪಡೆದರು. ಅದೇ ವರ್ಷದಲ್ಲಿ ಅವರು ನ್ಯೂ ಸೌತ್ ವೇಲ್ಸ್ ಪರವಾಗಿ ಶೆಫೀಲ್ಡ್ ಶೀಲ್ಡ್ ನಲ್ಲಿ ತಮ್ಮ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು.
ಕೇವಲ 21 ವರ್ಷ ವಯಸ್ಸಿನ ಲೆಗ್ ಸ್ಪಿನ್ನರ್ 31 ಟಿ20 ಪಂದ್ಯಗಳನ್ನು ಆಡಿ 7.46 ರ ಎಕಾನಮಿ ದರದಲ್ಲಿ 42 ವಿಕೆಟ್ ಗಳನ್ನು ಪಡೆದಿದ್ದಾರೆ.
ಡರ್ಬನ್ ನ ಕಿಂಗ್ಸ್ ಮೇಡ್ ಕ್ರಿಕೆಟ್ ಮೈದಾನದಲ್ಲಿ ಸೂಪರ್ ಮೂನ್ ದಿನವಾದ ಬುಧವಾರ ರಾತ್ರಿ ತನ್ವೀರ್ ಸಂಘಾ ಬಾಳಲ್ಲಿ ನಿಜವಾದ ಚಂದ್ರೋದಯವಾಗಿತ್ತು. ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಇತರ ನಾಲ್ವರಿಗಿಂತ (ಡೆವಾಲ್ಡ್ ಬ್ರೆವಿಸ್, ಸ್ಪೆನ್ಸರ್ ಜಾನ್ಸನ್, ಆ್ಯರೋನ್ ಹಾರ್ಡಿ ಮತ್ತು ಮ್ಯಾಥ್ಯೂ ಶಾರ್ಟ್) ಗಿಂತ ತನ್ವೀರ್ ಸಂಘಾ ಪಾಲಿಗೆ ಇದು ಮರೆಯಲಾಗದ ಸೂಪರ್ ಮೂನ್ ಆಗಿತ್ತು. ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಆರನೇ ಎಸೆತದಲ್ಲಿ ಸಂಘಾ ಮೊದಲ ವಿಕೆಟ್ ಪಡೆದಿದ್ದರು. ಅದೂ ಎದುರಾಳಿ ತಂಡದ ನಾಯಕ ಏಡನ್ ಮಾಕ್ರಮ್ ಅವರದ್ದು.
ನಾಲ್ಕು ಓವರ್ ಎಸೆದ ತನ್ವೀರ್ ಕೇವಲ 31 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ಮಾಕ್ರಮ್ ಜತೆಗೆ ಡೆವಾಲ್ಡ್ ಬ್ರೆವಿಸ್, ಟ್ರಿಸ್ಟನ್ ಸ್ಟಬ್ಸ್ ಮತ್ತು ಮ್ಯಾಕ್ರೊ ಜೆನ್ಸನ್ ಅವರು ಸಂಘಾ ಸ್ಪಿನ್ ಜಾಲಕ್ಕೆ ಬಲಿಯಾದರು. ಸಂಘಾರ 31 ರನ್ ಗೆ ನಾಲ್ಕು ವಿಕೆಟ್ ಟಿ20 ಪದಾರ್ಪಣೆ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಒಬ್ಬರ ಎರಡನೇ ಅತ್ಯುತ್ತಮ ಸಾಧನೆಯಾಗಿದೆ. ಈ ಹಿಂದೆ 2005ರಲ್ಲಿ ಮೈಕೆಲ್ ಕಾಸ್ಪ್ರೋವಿಚ್ 29 ರನ್ ನೀಡಿ 4 ವಿಕೆಟ್ ಕಿತ್ತಿದ್ದರು.
ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ಆಸ್ಟ್ರೇಲಿಯಾದ ಸಂಭಾವ್ಯ ಸದಸ್ಯರ ಪಟ್ಟಿಯಲ್ಲಿ ತನ್ವೀರ್ ಸಂಘಾ ಸ್ಥಾನ ಪಡೆದಿದ್ದಾರೆ. ಭಾರತದ ನೆಲದಲ್ಲಿ ಭಾರತ ಮೂಲದ ಆಟಗಾರ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.