ಮಂಗಳೂರು: ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಂಗಳೂರು ಸಮೀಪದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಶುಕ್ರವಾರ ಚಾಲನೆ ದೊರಕಲಿದೆ.
ಮೂರು ದಿನಗಳ ಕಾಲ ನಡೆಯುವ ಸರ್ಫಿಂಗ್ ಕ್ರೀಡಾಕೂಟ ಬೆಳಗ್ಗೆ 7.30ಕ್ಕೆ ಪ್ರಾರಂಭವಾಗಲಿದ್ದು, 10 ಗಂಟೆಗೆ ಉದ್ಘಾಟನೆ ನಡೆಯಲಿದೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಸರ್ಫಿಂಗ್‌ಗೆ ಚಾಲನೆ ನೀಡಲಿದ್ದಾರೆ. 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಬಾಲಿವುಡ್ ಚಿತ್ರನಟ ಸುನಿಲ್ ಶೆಟ್ಟಿ ರಾಯಭಾರಿಯಾಗಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರ ವರೆಗೆ ಸಮುದ್ರದಲ್ಲಿ ಸಾಹಸಮಯ, ರೋಮಾಂಚನಕಾರಿ ಕ್ರೀಡೆ ನಡೆಯಲಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ 120ಕ್ಕೂ ಅಧಿಕ ಕ್ರೀಡಾಪಟುಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸರ್ಫಿಂಗ್ ಒಕ್ಕೂಟ ಹಾಗೂ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಈ ಸಂಸ್ಥೆಗಳು 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಾನ್ಯತೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೆನರಾ ಸರ್ಫಿಂಗ್ ಮತ್ತು ಜಲಕ್ರೀಡೆ ಉತ್ತೇಜನಾ ಸಂಸ್ಥೆ, ಮಂತ್ರ ಸರ್ಫ್ ಕ್ಲಬ್ ಜಂಟಿಯಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿವೆ. ಸಾರ್ವಜನಿಕರಿಗೆ ಈ ಕ್ರೀಡಾಕೂಟ ವೀಕ್ಷಿಸಲು ಮುಕ್ತ ಅವಕಾಶವಿದೆ.
ಸರ್ಫಿಂಗ್ ಕ್ರೀಡಾಕೂಟದೊಂದಿಗೆ ಸಸಿಹಿತ್ಲು ಕಡಲಕಿನಾರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜತೆಗೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಸರ್ಫಿಂಗ್ ಕ್ರೀಡಾಕೂಟವನ್ನು ಪ್ರತೀವರ್ಷವೂ ನಿಗದಿತ ದಿನಾಂಕದಲ್ಲಿ ಏರ್ಪಡಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸರ್ಫಿಂಗ್ ಕೇಂದ್ರವನ್ನಾಗಿಸಲು ಕರ್ನಾಟಕ ಸರಕಾರವು ಪ್ರವಾಸೋದ್ಯಮ ಇಲಾಖೆಯ ಮೂಲಕ ವಿವಿಧ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಪ್ರಕಟನೆ ತಿಳಿಸಿದೆ.