Advertisement

ಭಾರತೀಯ ಒಲಿಂಪಿಕ್ಸ್‌ಗೆ ಗೋವಿಂದ ರಾಜ್‌ ಉಪಾಧ್ಯಕ್ಷ

06:20 AM Dec 15, 2017 | |

ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಫಿಬಾ ಸ್ಪರ್ಧಾತ್ಮಕ ಸಮಿತಿಗೆ ಸದಸ್ಯರಾಗಿ ನೇಮಕರಾಗಿದ್ದ ಭಾರತೀಯ ಬಾಸ್ಕೆಟ್‌ಬಾಲ್‌ ಸಂಸ್ಥೆ (ಬಿಎಫ್ಐ) ಅಧ್ಯಕ್ಷ ಕೆ.ಗೋವಿಂದರಾಜ್‌ ಇದೀಗ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ)ಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಗುರುವಾರ ನಡೆದ ಸಾಮಾನ್ಯ ಸಭೆಯ ಚುನಾವಣೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಗೋವಿಂದರಾಜ್‌ ಅವರು ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ (ಕೆಒಎ) ಹಾಲಿ ಅಧ್ಯಕ್ಷ ಕೂಡ ಹೌದು. ಗೋವಿಂದರಾಜ್‌ ಅವರು ಹಲವಾರು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ದಾರಿ ಮೂಲಕ ಸಾಗಿದ್ದರು. ಹಲವಾರು ಕ್ರೀಡಾಪಟುಗಳಿಗೆ ನೆರವಾಗಿದ್ದಾರೆ. ರಾಜ್ಯದಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಪ್ರಶಸ್ತಿಯನ್ನು ಸ್ಥಾಪಿಸಿ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಅವರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ
ಬಾಸ್ಕೆಟ್‌ಬಾಲ್‌ ಅಧ್ಯಕ್ಷರಾದ ಮೇಲೆ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಹಿಳಾ ಅಂತಾರಾಷ್ಟ್ರೀಯ ಕೂಟವನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಗೋವಿಂದರಾಜ್‌ಗೆ ಹೊಸ ಜವಾಬ್ದಾರಿ: ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್ವೆಲ್ತ್‌ ಗೇಮ್ಸ್‌ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕೂಟಗಳಿಗೆ ಭಾರತೀಯ ಆಟಗಾರರನ್ನು ಆಯ್ಕೆ ಮಾಡುವ ಜವಾಬ್ದಾರಿಯಲ್ಲಿ ಗೋವಿಂದರಾಜ್‌ ಕೂಡ ಪಾಲ್ಗೊಳ್ಳಲಿದ್ದಾರೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಕೂಟಗಳಲ್ಲಿ ದೇಶದ ಪ್ರತಿನಿಧಿಯಾಗಿ ಸಭೆಗಳಲ್ಲಿ ಪಾಲ್ಗೊಂಡು ಸಲಹೆ, ಸೂಚನೆ ನೀಡುವ ಅವಕಾಶ ಕೂಡ ಅವರಿಗಿದೆ.

ಸಂತಸದ ವಿಷಯ: ಒಟ್ಟೊಟ್ಟಿಗೆ ಇಂತಹದೊಂದು ಗೌರವ ಬರುತ್ತಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಗೋವಿಂದರಾಜ್‌ ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನದಿಂದ ಕ್ರೀಡಾ ಕ್ಷೇತ್ರಕ್ಕೆ ನನ್ನಿಂದಾದ ಕೊಡುಗೆ ನೀಡಿದ್ದೇನೆ. ಇದನ್ನು ಗಮನಿಸಿ ನನಗೆ ಗೌರವ ನೀಡಲಾಗಿದೆ. ಇದನ್ನು ಉಳಿಸಿಕೊಂಡು ಹೋಗುವ, ಕ್ರೀಡಾಪಟುಗಳಿಗೆ ಸೂಕ್ತ ಸಮಯದಲ್ಲಿ ನೆರವಾಗುವ ಹಂಬಲ ನನಗಿದೆ. ಕ್ರೀಡಾಪಟುಗಳ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದರಿಂದ ಹುದ್ದೆ ನಿಭಾಯಿಸುವುದು ಕಷ್ಟವಾಗಲಾರದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next