ನವದೆಹಲಿ: ಸಮುದ್ರ ಭಾಗದಲ್ಲಿ ಭಾರತದ ರಕ್ಷಣಾ ತಂತ್ರಗಳನ್ನು ಕದ್ದುನೋಡಲು ಚೀನಾ ಹಡಗನ್ನು ಕಳಿಸಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ. ಮಲಾಕ್ಕ ಜಲಸಂಧಿ ಮೂಲಕ ಯುವಾನ್ ವ್ಯಾಂಗ್ ಎಂಬ ರಿಸರ್ಚ್‌ಶಿಪ್ ಅನ್ನು ಆಗಸ್ಟ್‌ನ ಬೇರೆ ಬೇರೆ ಅವಧಿಯಲ್ಲಿ ಚೀನಾ ಕಳಿಸಿಕೊಟ್ಟಿತ್ತು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಚೀನಾ ಸಮುದ್ರ ಗಡಿಯಲ್ಲಿ ಭಾರತೀಯ ನೌಕಾಪಡೆಯ ನಿಯೋಜನೆಗಳನ್ನು ಯುವಾನ್ ವ್ಯಾಂಗ್ ರಹಸ್ಯವಾಗಿ ವೀಕ್ಷಿಸಿದೆ. ಭಾರತೀಯ ನೌಕಾಪಡೆಯ
ರೇಡಾರ್ ಕಣ್ಣಿಗೆ ಬಿದ್ದ ಕೂಡಲೇ ಈ ಹಡಗು ವಾಪಸು ಚೀನಾದತ್ತ ಮುಖ ಮಾಡಿದೆ. 2019ರಲ್ಲೂ ಇದೇ ಮಾದರಿಯ ಹಡಗು, ಭಾರತೀಯ ಸಮುದ್ರ
ಚಟುವಟಿಕೆಗಳನ್ನು ಕದ್ದು ವೀಕ್ಷಿಸಿತ್ತು.ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಇದು ಪ್ರತ್ಯಕ್ಷವಾಗಿತ್ತು.
ಸಜ್ಜಾದ ಸೇನೆ: ಲಡಾಖ್ ಗಡಿಯಲ್ಲಿ ಭಾರತ ಯಾವುದೇ ಕುಂದು ಕೊರತೆ ಇಲ್ಲದೆ ಸೇನೆಯನ್ನು ಬಲಪಡಿಸುತ್ತಿದೆ.ಎಲ್‌ಎಸಿಯಲ್ಲಿ ಏನಿಲ್ಲವೆಂದರೂ ಈಗಿರುವ ಸೇನೆಗಿಂತ 5 ಪಟ್ಟು ಹೆಚ್ಚು ಅಂದರೆ, 50 ಸಾವಿರ ತುಕಡಿಗಳಿಗೆ ಅಗತ್ಯ ಸೇನಾ ಸಾಮಗ್ರಿಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸೇನೆ ದುರ್ಗಮ ಹವಾಮಾನಕ್ಕೆ ಹೊಂದುವ ರಕ್ಷಾ ಉಡುಪು, ಶೂ, ಪೋರ್ಟೆಬಲ್ ಹೀಟರ್, ಟೆಂಟ್ ಗಳನ್ನು ಹೆಚ್ಚೆಚ್ಚು ಖರೀದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಂಜಾಬಿ ಹಾಡನ್ನು ಪ್ಲೇ ಮಾಡಿದ ಚೀನಾ: ಇನ್ನೊಂದೆಡೆ ಪ್ಯಾಂಗಾಂಗ್ ತ್ಸೋ ದಕ್ಷಿಣ ತೀರದಲ್ಲಿ ಚೀನಾ ಸೇನೆ ಪಂಜಾಬಿ ಹಾಡುಗಳನ್ನು ಜೋರಾಗಿ ಹಾಕಿ ವಿಲಕ್ಷಣವಾಗಿ ವರ್ತಿಸುತ್ತಿದೆ. ಫಿಂಗರ್ 4ನ ಉನ್ನತ ಶಿಖರಗಳ ಮೇಲೆ ಕುಳಿತ ಭಾರತೀಯ ತುಕಡಿಗಳ ಗಮನವನ್ನು ಬೇರೆಡೆ ಹರಿಸುವಂತೆ ಮಾಡಲು ಪಿಎಲ್‌ಎ ಸೈನಿಕರು ಹೀಗೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ.
ಇದು ಚೀನಾದ ಮನೋಯುದ್ಧ ತಂತ್ರ. ಈ ವರ್ತನೆ ಹೊಸತೇನೂ ಅಲ್ಲ. 1962ರ ಯುದ್ಧದ ವೇಳೆಯೂ ಬಾಲಿವುಡ್ ಹಾಡುಗಳನ್ನು ಪಿಎಲ್‌ಎ ಹಾಕಿತ್ತು. “ನಿಮ್ಮ
ಭಾಷೆಗಳೆಲ್ಲ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ರಹಸ್ಯ ಬಲ್ಲೆವು’ ಎನ್ನುವ ಸಂದೇಶ ರವಾನಿಸಲು ಚೀನಾ ಹೀಗೆ ವರ್ತಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.