ನವದೆಹಲಿ: ಕಳೆದ ಏಳು ವರ್ಷಗಳಲ್ಲಿ ಕಾಂಗ್ರೆಸ್‌ನಿಂದಲೇ ಅತಿ ಹೆಚ್ಚು ಶಾಸಕರು ಮತ್ತು ಸಂಸದರು, ಆ ಪಕ್ಷವನ್ನು ಬಿಟ್ಟು ಇತರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಅಲ್ಲದೆ, 2014ರಲ್ಲಿ ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದ ನಂತರ ಬಿಜೆಪಿ, ಈ ಏಳು ವರ್ಷಗಳಲ್ಲಿ ಅತಿ ಹೆಚ್ಚಿನ ರಾಜಕೀಯ ಲಾಭ ಗಳಿಸಿದ ಪಕ್ಷವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನ್ಯಾಷನಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ.
2014ರಿಂದ 2021ರ ಅವಧಿಯಲ್ಲಿ, ಚುನಾವಣೆಗಳನ್ನು ಗೆಲ್ಲಬಹುದಾದಂಥ 222 ಮಂದಿ ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ 117 ಮಂದಿ ಸಂಸದರು ಹಾಗೂ ಶಾಸಕರಾಗಿದ್ದವರಾಗಿದ್ದರು. ಈ ಅವಧಿಯಲ್ಲಿ ಪಕ್ಷ, ಒಟ್ಟಾರೆ 399 ನಾಯಕರನ್ನು ಕಳೆದುಕೊಂಡಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ನಿಂತಿದ್ದ ಟ್ರಕ್ಕಿನಿಂದ ಬಿದ್ದ ಚಾಲಕ-ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ
ಇದೇ ಅವಧಿಯಲ್ಲಿ, ಬಿಜೆಪಿ ಕೂಡ 111 ನಾಯಕರನ್ನು ಕಳೆದುಕೊಂಡಿದೆ. ಅವರಲ್ಲಿ 33 ಮಂದಿ ಸಂಸದರು ಹಾಗೂ ಶಾಸಕರಾಗಿದ್ದವರು. ಆದರೂ, ಬಿಜೆಪಿಗೆ ಇತರ ಪಕ್ಷಗಳಿಂದ 253 ನಾಯಕರು ವಲಸೆ ಬಂದಿದ್ದಾರೆ. ಅವರಲ್ಲಿ 173 ಮಂದಿ ಶಾಸಕ ಅಥವಾ ಸಂಸದರಾಗಿದ್ದವರು ಎಂದು ವರದಿಯಲ್ಲಿ ಹೇಳಲಾಗಿದೆ.