Advertisement

ಜಿನ್ನಾಗೂ ಭಾರತೀಯ ಮುಸ್ಲಿಮರಿಗೂ ಸಂಬಂಧವಿಲ್ಲ : ಅಖಿಲೇಶ್ ಗೆ ಓವೈಸಿ ತಿರುಗೇಟು

04:22 PM Nov 01, 2021 | Team Udayavani |

ಲಕ್ನೋ : ‘ಮುಹಮ್ಮದ್ ಅಲಿ ಜಿನ್ನಾ ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕ’ ಎಂದು ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸೋಮವಾರ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ”ಮುಹಮ್ಮದ್ ಅಲಿ ಜಿನ್ನಾಗೂ ಭಾರತೀಯ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಅಖಿಲೇಶ್ ಯಾದವ್ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನಮ್ಮ ಹಿರಿಯರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿ ಭಾರತವನ್ನು ತಮ್ಮ ದೇಶವನ್ನಾಗಿ ಆರಿಸಿಕೊಂಡಿದ್ದರು” ಎಂದರು.

ಯೋಗಿ ಆದಿತ್ಯನಾಥ್ ಕೆಂಡಾಮಂಡಲ
‘ಅಖಿಲೇಶ್  ತಕ್ಷಣ ದೇಶದ ಜನರ ಕ್ಷಮೆಯಾಚನೆ ಮಾಡಬೇಕು , ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ದೇಶ ವಿಭಜಕ ಜಿನ್ನಾ ಹೋಲಿಕೆ ಯಾವ ಅರ್ಥದಲ್ಲಿ ಸರಿ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಿಡಿ ಕಾರಿದ್ದಾರೆ.

ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಸಮಾವೇಶದಲ್ಲಿ , ”ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಜಿನ್ನಾ ಸೇರಿದಂತೆ ಬಹುತೇಕರು ಒಂದೇ ಸಂಸ್ಥೆಯಿಂದ ಹೊರಬಂದವರು. ಅವರೆಲ್ಲಾ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಜಿನ್ನಾ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕ” ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next