Advertisement

ಭಾರತೀಯ ಸಂಗೀತ ರಾಷ್ಟ್ರೀಯ ಸಂಪತ್ತು: ಪೇಜಾವರಶ್ರೀ

12:44 AM May 06, 2019 | Lakshmi GovindaRaj |

ಬೆಂಗಳೂರು: ಭಾರತೀಯ ಸಂಗೀತ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್‌ (ರಿ) ವತಿಯಿಂದ ನಗರದ ಉತ್ತರಾದಿ ಮಠದ ಶ್ರೀ ಸತ್ಯ ಪ್ರಮೋದ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಎಸ್‌.ವಿ. ನಾರಾಯಣರಾವ್‌ ಸ್ವಾಮಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2019′ ಇದರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ವಿಶ್ವಕ್ಕೆ ಭಾರತ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ಅದರಲ್ಲಿ ಭಾರತೀಯ ಸಂಗೀತದ ಕೊಡುಗೆ ಬಹಳ ದೊಡ್ಡದು. ನಮ್ಮಲ್ಲಿ ಪಾಶ್ಚಾತ್ಯ ಸಂಗೀತವಿದೆ. ಸಿನಿಮಾ ಸಂಗೀತವಿದೆ. ಈ ಸಂಗೀತಗಳು ಮನಸ್ಸನ್ನು ಕೆರಳಿಸಿದರೆ, ಭಾರತೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ. ಪಾಶ್ಚತ್ಯ ಸಂಗೀತ ಮಾದಕವಾದರೆ, ಭಾರತೀಯ ಸಂಗೀತ ಮೋದಕ. ಈ ನಮ್ಮ ಸಂಪತ್ತು ಅದರ ರಕ್ಷಣೆ ಆಗಬೇಕು ಎಂದರು.

ಶಾಸ್ತ್ರದ ವಿದ್ವಾಂಸರು, ಪಂಡಿತರೂ ಸಂಗೀತ ಹಾಡಿದ್ದಾರೆ. ರಾಘವೇಂದ್ರ ಸ್ವಾಮಿ, ಜಗದ್ಗುರು ಮಧ್ವಾಚಾರ್ಯರು ಸಂಗೀತ ಹಾಡಿದ್ದಾರೆ. ಮಧ್ವಚಾರ್ಯರ ಸಂಗೀತ ಪ್ರಕೃತಿ ಮೇಲೆ ಪರಿಣಾಮ ಬೀರಿದೆ. ಆ ಏಕಾಗ್ರತೆ ಸಂಗೀತ ಬರುತ್ತದೆ. ಹಾಗಾಗಿ ಆಧ್ಯಾತ್ಮದ ಸಾಧನೆಯಲ್ಲಿ ಸಂಗೀತ ಅವಶ್ಯಕ ಎಂದು ಪೇಜಾವರಶ್ರೀ ಪ್ರತಿಪಾದಿಸಿದರು.

ಪ್ರಶಸ್ತಿ ಪ್ರದಾನ: ಪದ್ಮಶ್ರೀ ಪುರಸ್ಕೃತ, ಸಂಗೀತ ಕಲಾನಿಧಿ ವಿದ್ವಾನ ವಲಯಪಟ್ಟಿ ಎ.ಆರ್‌. ಸುಬ್ರಮಣ್ಯಂ ಅವರಿಗೆ ಪೇಜಾವರ ಶ್ರೀಗಳು 2019ನೇ ಸಾಲಿನ ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 50 ಸಾವಿರ ರೂ. ನಗದು, ಭಿನ್ನವತ್ತಳೆ, 40 ಸಾವಿರ ರೂ. ಮೌಲ್ಯದ ಪಂಚಲೋಹದ ಪ್ರತಿಮೆಯನ್ನೊಳಗೊಂಡಿದೆ.

Advertisement

ಪ್ರಶಸ್ತಿ ಪುರಸ್ಕೃತ ವಿದ್ವಾನ್‌ ವಲಯಪಟ್ಟಿ ಎ.ಆರ್‌. ಸುಬ್ರಮಣ್ಯಂ, ವಿದ್ವಾನ್‌ ಡಾ. ಕದ್ರಿ ಗೋಪಾಲನಾಥ್‌, ಉತ್ತರಾದಿ ಮಠದ ಆಡಳಿತಾಧಿಕಾರಿ ವಿದ್ವಾನ್‌ ಶ್ರೀ ಸತ್ಯಧ್ಯಾನ ಆಚಾರ್ಯ ಕಟ್ಟಿ, ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್‌ನ ಅಧ್ಯಕ್ಷ ಮಣಿ ನಾರಾಯಣಸ್ವಾಮಿ, ಟ್ರಸ್ಟಿ ಎ. ರವೀಂದ್ರ ಇತರರಿದ್ದರು.

ಸಂಗೀತ ಜಾತ್ಯಾತೀತ: ಸಂಗೀತಕ್ಕೆ ಗಡಿ, ಭಾಷೆ, ಧರ್ಮ ಇಲ್ಲ. ನಿಜ ಅರ್ಥದಲ್ಲಿ ಸಂಗೀತ ಜಾತ್ಯಾತೀತ ಮತ್ತು ಭಾಷಾತೀತ. ಸಂಗೀತಕ್ಕೆ ಕನ್ನಡ-ತಮಿಳು, ಹಿಂದೂ-ಮುಸ್ಲಿಂ ಎಂಬುದು ಇಲ್ಲ. ಅನೇಕು ಮುಸ್ಲಿಮರು ಭಾರತೀಯ ಶಾಸ್ತ್ರೀಯ ಸಂಗೀತದ ದೊಡ್ಡ ಕಲಾವಿದರಿದ್ದಾರೆ.

ಎಲ್ಲರನ್ನೂ ಒಂದುಗೂಡಿಸುವ, ಶಾಂತಿ-ಸೌಹಾರ್ದತೆ ಸಾರುವ ಶಕ್ತಿ ಸಂಗೀತಕ್ಕೆ ಇದೆ. ಸಂಗೀತದ ವಾದ್ಯಗಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಅದು ಸಂಗೀತವಾಗುತ್ತದೆ. ಇಲ್ಲದಿದ್ದರೆ ಅದು ಅಪಸ್ವರವಾಗುತ್ತದೆ ಎಂದು ಪೇಜಾವರ ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next