ಹೊಸದಿಲ್ಲಿ: ದೇಶದ ವಿವಿಧ ಟೆಲಿಕಾಂ ಕಂಪೆನಿಗಳು ತಮ್ಮ ಸೇವಾ ಶುಲ್ಕಗಳನ್ನು 10 ರಿಂದ 45 ಪ್ರತಿಶತದಷ್ಟು ಹೆಚ್ಚಿಸಿದ ಬಳಿಕವೂ ವಿಶ್ವದ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲೇ ಮೊಬೈಲ್ ಸೇವಾ ದರಗಳು ಅಗ್ಗದಲ್ಲಿ ಗ್ರಾಹಕರಿಗೆ ಲಭಿಸುತ್ತಿವೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಖಾಸಗಿ ನೆಟ್ ವರ್ಕ್ ಕಂಪೆನಿಗಳು ತಮ್ಮ ಶುಲ್ಕವನ್ನು ಹೆಚ್ಚಿಸಿದ್ದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಟ್ವಿಟ್ಟರ್ ಮೂಲಕ ಖಂಡಿಸಿದ್ದರು ಮತ್ತು ಕೇಂದ್ರ ಸರಕಾರವು ಖಾಸಗಿಯವರಿಗೆ ಶುಲ್ಕ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಾರ್ವಜನಿಕ ರಂಗದ ಮೊಬೈಲ್ ನೆಟ್ ವರ್ಕ್ ಸೇವಾ ಸಂಸ್ಥೆ ಬಿ.ಎಸ್.ಎನ್.ಎಲ್. ಮತ್ತು ಎಂ.ಟಿ.ಎನ್.ಎಲ್.ಗಳನ್ನು ನಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದ್ದರು.
ಆದರೆ ಇದಕ್ಕೆ ತಿರುಗೇಟು ನೀಡಿರುವ ಸಚಿವ ರವಿಶಂಕರ್ ಪ್ರಸಾದ್ ಅವರು ಯುಪಿಎ ಅವಧಿಗಿಂತ ನರೇಂದ್ರ ಮೋದಿ ಅಧಿಕಾರಾವಧಿಯಲ್ಲಿ ದೇಶದ ಇಂಟರ್ನೆಟ್ ಬಳಕೆದಾರರಿಗೆ ಕಡಿಮೆ ದರದಲ್ಲಿ ಇಂಟರ್ನೆಟ್ ಲಭ್ಯವಾಗುತ್ತಿದೆ ಎಂದು ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. 2014ರಲ್ಲಿ ಪ್ರತೀ ಒಂದು ಜಿಬಿ ಇಂಟರ್ನೆಟ್ ಗೆ 268.97 ರೂಪಾಯಿಗಳಿದ್ದರೆ ಇದೀಗ 11.78 ರೂಪಾಯಿಗಳಿಗೆ ಒಂದು ಜಿಬಿ ಇಂಟರ್ನೆಟ್ ಡಾಟಾ ಗ್ರಾಹಕರಿಗೆ ಲಭ್ಯವಿದೆ ಎಂದು ಅವರು ಪ್ರಿಯಾಂಕ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ವಿಶ್ವದಲ್ಲಿನ ಮೊಬೈಲ್ ತಾರೀಫಿಗೆ ಸಂಬಂಧಿಸಿದಂತೆ ಇಂಗ್ಲೆಡ್ ಮೂಲದ ಕೇಬಲ್.ಕೋ.ಯುಕೆ ಎಂಬ ಸಂಸ್ಥೆ ಸಮೀಕ್ಷೆಯೊಂದನ್ನು ನಡೆಸಿದೆ. ಆ ಸಮೀಕ್ಷೆಯ ಪ್ರಕಾರ ರಷ್ಯಾದಲ್ಲಿ 0.91 ಡಾಲರ್‌ಗೆ ಒಂದು ಜಿಬಿ ಡೇಟಾ ಸಿಕ್ಕರೆ, ಇಟಲಿಯಲ್ಲಿ 1.73 ಡಾಲರ್, ನೈಜಿರಿಯಾದಲ್ಲಿ 2.2 ಡಾಲರ್, ಆಸ್ಟ್ರೇಲಿಯಾದಲ್ಲಿ 2.47 ಡಾಲರ್, ಇಂಗ್ಲೆಂಡ್‌ನಲ್ಲಿ 6.66 ಡಾಲರ್, ಅಮೆರಿಕಾದಲ್ಲಿ 12.37 ಡಾಲರ್ ಹಾಗೂ ಸ್ವಿಝರ್ಲ್ಯಾಂಡ್ ನಲ್ಲಿ 20.22 ಡಾಲರ್‌ಗಳಿಗೆ ಒಂದು ಬಿಜಿ ಡೇಟಾ ಗ್ರಾಹಕರಿಗೆ ಸಿಗುತ್ತಿದೆ ಎಂದು ಯುಕೆ ಸಂಸ್ಥೆಯೊಂದು ಸಮೀಕ್ಷೆಯಲ್ಲಿ ಹೇಳಿದೆ.