ಭಾರತೀಯ ವೈದ್ಯ ಪದ್ಧತಿಯ ಬಹುತೇಕ ಕೋರ್ಸುಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ರ್‍ಯಾಂಕ್ ಆಧಾರದಲ್ಲೇ ಸೀಟು ಹಂಚಿಕೆ ಮಾಡಲಾಗುತ್ತದೆ. ಭಾರತೀಯ ವೈದ್ಯ ಪದ್ಧತಿ (ಆಯುಷ್)ಯಡಿ ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪಥಿ ಹಾಗೂ ಯೋಗ ಕೋರ್ಸ್‌ಗಳು ಸೇರಿವೆ.
2018-19ರಲ್ಲಿ ಆಯುಷ್‌ನ ಎಲ್ಲ ಕೋರ್ಸ್‌ಗಳ ಸೀಟು ಹಂಚಿಕೆಯನ್ನು ನೀಟ್ ರ್‍ಯಾಂಕಿಂಗ್ ಆಧಾರದಲ್ಲಿ ಮಾಡಲಾಗಿತ್ತು. ಸರ್ಕಾರದಿಂದ ಸೀಟ್ ಮ್ಯಾಟ್ರಿಕ್ಸ್ ಬರುವಾಗಲೂ ವಿಳಂಬವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಸೀಟು ಆಯ್ಕೆಗೂ ತೊಂದರೆಯಾಗಿತ್ತು. 2019-20ನೇ ಸಾಲಿನ ಆಯುಷ್ ಸೀಟ್ ಮ್ಯಾಟ್ರಿಕ್ಸ್ ಸೂಕ್ತ ಸಮಯಕ್ಕೆ ಬರುವ ಸಾಧ್ಯತೆ ಇದೆ.
2019-20ನೇ ಸಾಲಿನಲ್ಲಿ ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪಥಿ ಕೋರ್ಸ್‌ಗಳ ಸೀಟನ್ನು ಮಾತ್ರ ನೀಟ್ ರ್‍ಯಾಂಕಿಂಗ್ ಆಧಾರದಲ್ಲೇ ಹಂಚಿಕೆ ಮಾಡಲಾಗುತ್ತದೆ. ಯೋಗ ಮತ್ತು ನ್ಯಾಚುರೋಪಥಿ ಕೋರ್ಸ್‌ಗಳ ಸೀಟನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ರ್‍ಯಾಂಕ್ ಆಧಾರದಲ್ಲಿ ಹಂಚಿಕೆ ಮಾಡುವ ಸಾಧ್ಯತೆ ಇದೆ.
ಆಯುರ್ವೇದ, ಯುನಾನಿ, ಹೋಮಿಯೋಪಥಿ ಒಂದಕ್ಕೊಂದು ಪೂರಕ ಚಿಕಿತ್ಸಾ ಪದ್ಧತಿಗಳಾಗಿರುವುದರಿಂದ ಕೇಂದ್ರ ಸರ್ಕಾರ ವೈದ್ಯಕೀಯ, ದಂತವೈದ್ಯಕೀಯದ ಜತೆಗೆ ಆಯುಷ್‌ನ ಈ ಮೂರು ಕೋರ್ಸ್‌ಗಳಿಗೂ ನೀಟ್ ಕಡ್ಡಾಯಗೊಳಿಸಿದೆ.
ರಾಜ್ಯದಲ್ಲಿ ಮೂರು ಸರ್ಕಾರಿ, 85 ಅನುದಾನಿತ ಹಾಗೂ 50 ಅನುದಾನ ರಹಿತ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಆಯುರ್ವೇದ, ಯುನಾನಿ, ಹೋಮಿಯೋಪಥಿ, ನ್ಯಾಚುರೋಪಥಿ ಮತ್ತು ಯೋಗ ಕಾಲೇಜುಗಳಿವೆ. 2,270 ಸೀಟುಗಳಲ್ಲಿ 860 ಸರ್ಕಾರಿ ಕೋಟಾದ ಸೀಟುಗಳು 2018-19ರಲ್ಲಿ ಲಭ್ಯವಾಗಿತ್ತು. 1 ಸರ್ಕಾರಿ, ಮೂರು ಅನುದಾನಿತ ಯುನಾನಿ ಕಾಲೇಜುಗಳ 170 ಸೀಟುಗಳಲ್ಲಿ 74 ಸರ್ಕಾರಿ ಸೀಟು ವಿದ್ಯಾರ್ಥಿಗಳಿಗೆ ಸಿಕ್ಕಿತ್ತು.
ತಲಾ ಒಂದು ಸರ್ಕಾರಿ ಹೋಮಿಯೋಪಥಿ, ಯೋಗ, ನ್ಯಾಚುರೋಪಥಿ ಕಾಲೇಜು, 1 ಖಾಸಗಿ ಹೋಮಿಯೋಪಥಿ ಹಾಗೂ ಎರಡು ಖಾಸಗಿ ಯೋಗ, ನ್ಯಾಚುರೋಪಥಿ ಕಾಲೇಜುಗಳಿವೆ. ಹೋಮಿಯೋಪಥಿಯಲ್ಲಿ 805 ಸೀಟುಗಳಿದ್ದು, ಅದರಲ್ಲಿ 193 ಸರ್ಕಾರಿ ಸೀಟು, ಯೋಗ ನ್ಯಾಚುರೋಪಥಿಯಲ್ಲಿ 145 ಸೀಟುಗಳಿದ್ದು, 49 ಸರ್ಕಾರಿ ಸೀಟು 2018-19ರಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕಿತ್ತು.
2019-20ರ ಸೀಟ್ ಮ್ಯಾಟ್ರಿಕ್ ಇನ್ನಷ್ಟೇ ಬರಬೇಕಿದ್ದು, ಸೀಟುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಜತೆಗೆ ಅರ್ಹ ವಿದ್ಯಾರ್ಥಿಗಳು ಭಾರತೀಯ ವೈದ್ಯ ಪದ್ಧತಿಯ ಕೋರ್ಸ್‌ಗಳನ್ನು ಪಡೆಯಲು ವಿಫುಲ ಅವಕಾಶ ಇದೆ.