ದುಬೈ: ಎರಡು ವರ್ಷಗಳ ಹಿಂದೆ ಪ್ರಯಾಣಿಕರೊಬ್ಬರ ಲಗೇಜ್ ನಿಂದ ಎರಡು ಮಾವಿನ ಹಣ್ಣುಗಳನ್ನು ಕದ್ದ ಆರೋಪದಡಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಯುಎಇ ಕೋರ್ಟ್ ಗಡಿಪಾರು ಮಾಡಲು ಆದೇಶ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
2017ರ ಆಗಸ್ಟ್ 11ರಂದು ಭಾರತದ ಮೂಲದ 27 ವರ್ಷದ ಯುವಕ ಆರು ಧೀರಮ್ ಬೆಲೆಯ ಎರಡು ಮಾವಿನಹಣ್ಣುಗಳನ್ನು ಕದ್ದಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುಎಇ ಕೋರ್ಟ್ 5ಸಾವಿರ ಧೀರಮ್ ದಂಡ ವಿಧಿಸಿದ್ದು, ಅದನ್ನು ಪಾವತಿಸಿದ ನಂತರ ಭಾರತಕ್ಕೆ ಗಡಿಪಾರು ಮಾಡುವಂತೆ ಆದೇಶ ನೀಡಿರುವುದಾಗಿ ದ ಖಲೀಜ್ ಟೈಮ್ಸ್ ವರದಿ ಮಾಡಿದೆ.
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಯುವಕ ಕಂಟೈನರ್ ನಲ್ಲಿ ಬರುವ ಪ್ರಯಾಣಿಕರ ಲಗ್ಗೇಜ್ ಗಳನ್ನು ಲೋಡಿಂಗ್ ಮಾಡುತ್ತಿದ್ದಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ವರದಿ ತಿಳಿಸಿದೆ.
2017ರ ಆಗಸ್ಟ್ 11ರಂದು ತಾನು ಭಾರತಕ್ಕೆ ಕಳುಹಿಸಲಿರುವ ಹಣ್ಣಿನ ಬಾಕ್ಸ್ ನಿಂದ ಎರಡು ಮಾವಿನ ಹಣ್ಣುಗಳನ್ನು ತೆಗೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಏಪ್ರಿಲ್ 2018ರಲ್ಲಿ ದುಬೈ ಪೊಲೀಸರು ವಿಚಾರಣೆಗೆ ಸಮನ್ಸ್ ನೀಡಿದ್ದರು ಎಂದು ವರದಿ ಹೇಳಿದೆ.
ವೇರ್ ಹೌಸ್ ನಲ್ಲಿದ್ದ ಸಿಸಿಟಿವಿಯಲ್ಲಿ ಈತ ಪ್ರಯಾಣಿಕರ ಲಗ್ಗೇಜ್ ಓಪನ್ ಮಾಡಿ ಮಾವಿನ ಹಣ್ಣು ತೆಗೆಯುತ್ತಿರುವುದು ಸೆರೆಯಾಗಿತ್ತು ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.