Advertisement
ರಷ್ಯಾದಲ್ಲಿ ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ತರಬೇತಿ ಪಡೆದಿರುವ ಭಾರತೀಯ ಗಗನಯಾತ್ರಿಗಳು, ಪ್ರಸ್ತುತ ಭಾರತದಲ್ಲಿರುವ ಒಂದು ಇಸ್ರೋದ ನೆಲೆಯಲ್ಲಿ ಯೋಜನೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. 2025ರ ಆರಂಭದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಯೋಜನೆಯ ಮೂಲಕ, ಭಾರತ ಅಮೆರಿಕಾ, ರಷ್ಯಾ, ಮತ್ತು ಚೀನಾಗಳ ನಂತರ ಬಾಹ್ಯಾಕಾಶಕ್ಕೆ ಸ್ವತಂತ್ರವಾಗಿ ಮಾನವರನ್ನು ಕಳುಹಿಸಿದ ಸಾಧನೆ ನಿರ್ಮಿಸಿರುವ ನಾಲ್ಕನೇ ದೇಶ ಎಂಬ ಸಾಧನೆಗೆ ಪಾತ್ರವಾಗುವಂತೆ ಮಾಡಲಿದೆ.
Related Articles
Advertisement
ಭಾರತದ ನಾಲ್ವರು ಗಗನಯಾತ್ರಿಗಳು ಹೇಗೆ ಈ ಮಹತ್ತರ ಮೈಲಿಗಲ್ಲನ್ನು ಸಾಧಿಸಿದರು? ಅವರ ಆಯ್ಕೆಯ ಹಿಂದೆ ಇದ್ದ ಪ್ರಕ್ರಿಯೆ ಏನು? ಅವರು ಗಗನಯಾನ ಯೋಜನೆಯನ್ನು ಯಶಸ್ವಿಯಾಗಿ ನೆರವೇರಿಸಲು ಹೇಗೆ ಸಿದ್ಧತೆ ನಡೆಸುತ್ತಾರೆ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಸಹಜವಾಗಿಯೇ ಮೂಡಿರುತ್ತವೆ.
ಈಗ ಆಯ್ಕೆಗೊಂಡಿರುವ ಗಗನಯಾತ್ರಿಗಳು ಭಾರತೀಯ ವಾಯುಪಡೆಯ ಸದಸ್ಯರಾಗಿದ್ದು, ಟೆಸ್ಟ್ ಪೈಲಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರ ಆಯ್ಕೆಯ ಹಿಂದೆ ಅತ್ಯಂತ ತೀವ್ರವಾದ ಆಯ್ಕೆ ಪ್ರಕ್ರಿಯೆ ಕಾರ್ಯಾಚರಿಸಿದೆ.
ಭಾರತೀಯ ವಾಯುಪಡೆಯ ಅಡಿಯಲ್ಲಿ ಕಾರ್ಯಾಚರಿಸುವ, ಬೆಂಗಳೂರಿನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದೆ.
ಬಹಳಷ್ಟು ಸಂಖ್ಯೆಯಲ್ಲಿ ವಾಯುಪಡೆಯ ಪೈಲಟ್‌ಗಳು ಗಗನಯಾತ್ರಿಗಳಾಗಿ ಆಯ್ಕೆಗೊಳ್ಳುವ ಸಲುವಾಗಿ ಪರೀಕ್ಷೆಗಳನ್ನು ಎದುರಿಸಿದರು. ಸೆಪ್ಟೆಂಬರ್ 2019ರ ಆರಂಭಿಕ ಹಂತದ ಅಯ್ಕೆ ಪ್ರಕ್ರಿಯೆಯ ಬಳಿಕ, ಒಟ್ಟು 12 ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಆರಂಭಿಕ ಆಯ್ಕೆ ಪ್ರಕ್ರಿಯೆಯ ಬಳಿಕ, 12 ಆಯ್ಕೆಗೊಂಡ ಅಭ್ಯರ್ಥಿಗಳು ವಿವಿಧ ವೈದ್ಯಕೀಯ, ಏರೋಮೆಡಿಕಲ್, ಮತ್ತು ಮಾನಸಿಕ ಮೌಲ್ಯಮಾಪನಗಳಿಗೆ ಒಳಗಾದರು.
ವಿವಿಧ ಹಂತಗಳ ಆಯ್ಕೆ ಪ್ರಕ್ರಿಯೆಯ ಬಳಿಕ, ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ಆರಂಭದ ಹಂತದಲ್ಲಿ ಆಯ್ಕೆಗೊಂಡಿದ್ದ 12 ಜನರಲ್ಲಿ ನಾಲ್ವರನ್ನು ಗುರುತಿಸಿತು. ಈ ರೀತಿ ಆಯ್ಕೆಗೊಂಡ ನಾಲ್ವರನ್ನು ಬಳಿಕ ತರಬೇತಿ ಪಡೆಯುವ ಸಲುವಾಗಿ ರಷ್ಯಾಗೆ ಕಳುಹಿಸಲಾಯಿತು.
ಫೆಬ್ರವರಿ 2020ರಿಂದ ಮಾರ್ಚ್ 2021ರ ತನಕ, ನಾಲ್ವರು ಗಗನಯಾತ್ರಿಗಳು ರಷ್ಯಾದ ಯೂರಿ ಗಗಾರಿನ್ ಕಾಸ್ಮೋನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ 13 ತಿಂಗಳ ಅವಧಿಯ ತರಬೇತಿ ಪಡೆದರು.
ಇದರೊಡನೆ, ಅವರಿಗೆ ರಷ್ಯಾದಲ್ಲಿ ಸರ್ವೈವಲ್ ಟ್ರೈನಿಂಗ್ (ಬದುಕುಳಿಯುವ ತರಬೇತಿ) ಒದಗಿಸಲಾಯಿತು. ಇದು ಲ್ಯಾಂಡಿಂಗ್ ಸಂದರ್ಭದಲ್ಲಿ ಎದುರಾಗಬಹುದಾದ ವಿವಿಧ ಸನ್ನಿವೇಶಗಳನ್ನು ಎದುರಿಸಲು ಅವರನ್ನು ಸಿದ್ಧಗೊಳಿಸುವಂತಿತ್ತು. ಈ ತರಬೇತಿ ಅವರನ್ನು ಪರ್ವತ ಪ್ರದೇಶಗಳು, ಅರಣ್ಯಗಳು, ಮರುಭೂಮಿ ಅಥವಾ ಸಮುದ್ರದಂತಹ ಅತ್ಯಂತ ವಿಭಿನ್ನವಾದ ಪರಿಸರಗಳಲ್ಲಿ ಬದುಕುಳಿಯಲು ಸಿದ್ಧಪಡಿಸುವಂತಿದ್ದು, ಅವರು ಎಂತಹ ಪರಿಸರದಲ್ಲಿ ಭೂಮಿಗೆ ಮರಳಿದರೂ, ಆ ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ತರಬೇತಿ ನೀಡಲಾಯಿತು.
ನಾಲ್ವರು ಗಗನಯಾತ್ರಿಗಳು ಭೂಮಿಯ ಮೇಲೆ ಬಹುತೇಕ 400 ಕಿಲೋಮೀಟರ್‌ಗಳ ಎತ್ತರದಲ್ಲಿ ಕುಶಲ ಚಲನೆಗಳನ್ನು ಎದುರಿಸುವ ಸವಾಲಿಗೆ ಸಮರ್ಥವಾಗಿ ಸಿದ್ಧಗೊಳ್ಳುವ ನಿಟ್ಟಿನಲ್ಲಿ, ನಿರಂತರವಾಗಿ ಏರೋಬ್ಯಾಟಿಕ್ ಹಾರಾಟದ ಅಭ್ಯಾಸದಲ್ಲಿ ತೊಡಗಿಕೊಂಡರು. ಈ ತರಬೇತಿ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಗೊಳಿಸಲಿದ್ದು, ಅವರು ಬಾಹ್ಯಾಕಾಶದಲ್ಲಿ ಯಾವುದೇ ತೊಂದರೆಗಳು ಎದುರಾಗದೆ ಏರೋಬ್ಯಾಟಿಕ್ ಹಾರಾಟದ ಸಂಕೀರ್ಣತೆಗಳನ್ನು ಎದುರಿಸಲು ಸಾಧ್ಯವಾಗಿಸುತ್ತದೆ.
ಏರೋಬ್ಯಾಟಿಕ್ ಹಾರಾಟ ಎನ್ನುವುದು ಒಂದು ವಿಮಾನದಲ್ಲಿ ಕೈಗೊಳ್ಳುವ ಅತ್ಯಂತ ಕುಶಲ ಚಲನೆಯಾಗಿದ್ದು, ಇದು ವೈಮಾನಿಕ ಪ್ರದರ್ಶನಗಳಲ್ಲಿ ನಡೆಸುವ ಲೂಪ್, ರೋಲ್ಸ್, ಸ್ಪಿನ್ಸ್‌ನಂತಹ ಚಲನೆಗಳನ್ನು ಒಳಗೊಂಡಿರುತ್ತದೆ. ಇದು ಪೈಲಟ್‌ಗಳ ಕೌಶಲಗಳು ಮತ್ತು ನಿಖರತೆಗಳನ್ನು ಹೆಚ್ಚಿಸುತ್ತದೆ.
ಪ್ರಸ್ತುತ ಗಗನಯಾತ್ರಿಗಳು ಇಸ್ರೋದ ಬೆಂಗಳೂರು ನೆಲೆಯಲ್ಲಿದ್ದು, ಈ ಯೋಜನೆಗಾಗಿ ವಿವಿಧ ಸಿದ್ಧತಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಇಸ್ರೋ ಮಾಹಿತಿ ನೀಡಿದೆ. ಅವರ ತರಬೇತಿ ಪ್ರಕ್ರಿಯೆಯಲ್ಲಿ ಸಿಮ್ಯುಲೇಶನ್ ತರಬೇತಿಗಳು, ದೈಹಿಕ ಮತ್ತು ವೈದ್ಯಕೀಯ ಕ್ಷಮತೆಯ ಅವಧಿಗಳು, ಯೋಗಾಭ್ಯಾಸಗಳು, ಮತ್ತು ತಮ್ಮ ಬಾಹ್ಯಾಕಾಶ ಸೂಟ್‌ಗಳನ್ನು ಧರಿಸುವ ಮತ್ತು ನಿರ್ವಹಿಸುವ ತರಬೇತಿಗಳು ಸೇರಿವೆ.
ಗಗನಯಾನ ಯೋಜನೆ ಭೂಮಿಯಿಂದ 400 ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿರುವ ಕಕ್ಷೆಗೆ ಮೂರು ದಿನಗಳ ಅವಧಿಗೆ ಗಗನಯಾತ್ರಿಗಳನ್ನು ಕಳುಹಿಸಿ, ಆ ಮೂಲಕ ಭಾರತದ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿ ಹೊಂದಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ, ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಲಿದ್ದು, ಈ ಮೊದಲೇ ನಿರ್ಧರಿಸಲಾಗಿರುವಂತೆ ಭಾರತದ ಸೀಮೆಯ ಕರಾವಳಿಯ ಬಳಿ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಲಿದ್ದಾರೆ.
ಸೋವಿಯತ್ ಒಕ್ಕೂಟ ಮತ್ತು ಅಮೆರಿಕಾ 1961ರಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ತಮ್ಮ ಮಾನವ ಸಹಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರಂಭಿಸಿದ ಸುದೀರ್ಘ ಅವಧಿಯ ಬಳಿಕ ಭಾರತ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದೆಯಾದರೂ, ಗಗನಯಾನ ಯೋಜನೆ ಈಗಾಗಲೇ ಭಾರತದಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದೆ. ಚೀನಾ 2003ರಲ್ಲಿ ಯಶಸ್ವಿಯಾಗಿ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಂಡ ಬಳಿಕ, ಈ ಸಾಧನೆ ನಡೆಸಿದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 21 ಗಂಟೆಗಳ ಅವಧಿಯ ಚೀನಾದ ಯೋಜನೆ ಭೂಮಿಗೆ 14 ಪರಿಭ್ರಮಣೆ ನಡೆಸಿತು. ಅದರೊಡನೆ, ಅಮೆರಿಕಾ ಮತ್ತು ಚೀನಾಗಳು ಈಗಾಗಲೇ ಭೂಮಿಯ ಕೆಳ ಕಕ್ಷೆಯಲ್ಲಿ ಸಂಪೂರ್ಣವಾಗಿ ಕಾರ್ಯಾಚರಿಸುವ ಬಾಹ್ಯಾಕಾಶ ನಿಲ್ದಾಣಗಳನ್ನು ಸ್ಥಾಪಿಸಿವೆ.ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)