ನವದೆಹಲಿ: ಮಲೇಷ್ಯಾದಲ್ಲಿ ನಡೆಯಲಿರುವ 19 ವಯೋಮಿತಿಯೊಳಗಿನ ಸುಲ್ತಾನ್ ಜೊಹರ್ ಕಪ್ ಹಾಕಿಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲವೆಂದು ಭಾರತ ತಿಳಿಸಿದೆ. ಈ ಕೂಟದಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದರಿಂದ ತಾನು ಹಿಂದೆ ಸರಿದಿದ್ದೇನೆಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ.
2014ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನಿ ಆಟಗಾರರು ಅಸಭ್ಯ ವರ್ತನೆ ಮಾಡಿದ್ದರು.
ಆ ಕುರಿತು ಪಾಕಿಸ್ತಾನ ಹಾಕಿ ಮಂಡಳಿ ಬೇಷರತ್ ಕ್ಷಮೆ ಕೇಳುವವರೆಗೆ ಭಾರತದ ಪ್ರತಿಭಟನೆ ಮುಂದುವರಿಯಲಿದೆ ಎಂದು ಹಾಕಿ ಇಂಡಿಯಾ ಹೇಳಿದೆ. ಸುಲ್ತಾನ್ ಜೊಹರ್ ಒಂದು ಆಹ್ವಾನಿತ ಕೂಟ ಮಾತ್ರ. ಇದು ವಿಶ್ವ ಹಾಕಿ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಕೂಟವಾಗಿರುವುದರಿಂದ ಭಾರತಕ್ಕೆ ಭಾಗವಹಿಸದಿರುವ ಅವಕಾಶವಿದೆ.
ವಿವಾದವೇನು?: 2014ರ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆದ್ದಿತ್ತು. ಆಗ ಪಾಕಿಸ್ತಾನದ ಆಟಗಾರರೊಬ್ಬರು ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿ ಅಸಭ್ಯವಾಗಿ ವರ್ತಿಸಿದ್ದರು. ಅಂಗಿ ಬಿಚ್ಚಿಕೊಂಡು ಮೈದಾನದಲ್ಲಿ ಕುಣಿದಾಡಿದ್ದರು. ಇದರ ವಿರುದ್ಧ ಭಾರತ ಹಾಕಿ ಮಂಡಳಿ ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿತ್ತು. 2016ರಲ್ಲಿ ಲಕ್ನೋದಲ್ಲಿ ನಡೆದ ಯುವ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಿರಲಿಲ್ಲವೆನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.