Advertisement

ಟೋಕಿಯೊದಲ್ಲಿ ಹಾಕಿ ಪದಕಕ್ಕೆ ಉತ್ತಮ ಅವಕಾಶ: ಸರ್ದಾರ್‌

03:15 AM Jul 21, 2020 | Hari Prasad |

ಹೊಸದಿಲ್ಲಿ: ಒಲಿಂಪಿಕ್‌ ಹಾಕಿ ಪದಕ ವಿಜೇತ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬ ಕೊರಗು ಖಂಡಿತ ತನ್ನಲ್ಲಿಲ್ಲ ಎಂದಿರುವ ಮಾಜಿ ನಾಯಕ ಸರ್ದಾರ್‌ ಸಿಂಗ್‌, ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಪದಕ ಗೆಲ್ಲುವ ಉಜ್ವಲ ಅವಕಾಶವಿದೆ ಎಂದಿದ್ದಾರೆ.

Advertisement

ಪ್ರಗತಿಯ ಪಯಣ
‘ನನ್ನ ಹಾಕಿ ಪಯಣ ನಿಜಕ್ಕೂ ತೃಪ್ತಿಕರ. ನಾನು ಭಾರತೀಯ ಹಾಕಿಯ ಪುನರ್‌ ಸಂಘಟನೆಯ ಕಾಲದಲ್ಲಿ ತಂಡವನ್ನು ಪ್ರತಿನಿಧಿಸಿದ್ದೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ನಾವು ಕಟ್ಟ ಕಡೆಯ ಸ್ಥಾನಕ್ಕೆ ಕುಸಿದಿದ್ದೆವು. ಇಲ್ಲಿಂದ ಪ್ರಗತಿಯ ಪಯಣ ಮೊದಲ್ಗೊಂಡಿತು.

2018ರಲ್ಲಿ ನಾನು ವಿದಾಯ ಹೇಳುವಾಗ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತೀಯ ಹಾಕಿ 6ನೇ ಸ್ಥಾನಕ್ಕೆ ಏರಿತ್ತು’ ಎಂಬುದಾಗಿ ಸರ್ದಾರ್‌ ಸಿಂಗ್‌ ಹೇಳಿದರು.

‘ಪ್ರಸ್ತುತ ಭಾರತವೀಗ 4ನೇ ರ್‍ಯಾಂಕಿಂಗ್‌ ಹೊಂದಿದೆ. ತಂಡಕ್ಕೆ ಇದು ಭಾರೀ ಆತ್ಮವಿಶ್ವಾಸ ತುಂಬಲಿದೆ. ಈ ವರ್ಷದ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ನಮ್ಮವರ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಇದನ್ನು ಕಾಯ್ದುಕೊಂಡರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಖಂಡಿತ ಪದಕ ವೊಂದನ್ನು ನಿರೀಕ್ಷಿಸಬಹುದು’ ಎಂದು ಅಭಿಪ್ರಾಯಪಟ್ಟರು.

Advertisement

ಯುವ ಆಟಗಾರರ ದಂಡು
‘ತಂಡದಲ್ಲೀಗ ರಾಜ್‌ಕುಮಾರ್‌, ದಿಲ್‌ಪ್ರೀತ್‌, ವಿವೇಕ್‌ ಸಾಗರ್‌, ಗುರು ಸಾಹಿಬ್‌ ಮೊದಲಾದ ಯುವ ಆಟಗಾರರಿದ್ದಾರೆ. ಇವರನ್ನು ಪ್ರೊ ಲೀಗ್‌ ಸರಣಿಯ ದೊಡ್ಡ ಪಂದ್ಯಗಳಲ್ಲಿ ಆಡಿಸಿ ಸಜ್ಜುಗೊಳಿಸಬೇಕು. ಇವರ ಮಾರ್ಗದರ್ಶನಕ್ಕೆ ಸೀನಿಯರ್ ಇದ್ದಾರೆ.

ಒಲಿಂಪಿಕ್ಸ್‌ ಮುಂದೂಡಲ್ಪಟ್ಟಿದ್ದರಿಂದ ಇವರ ಅಭ್ಯಾಸ ಮತ್ತು ತಯಾರಿಗೆ ಇನ್ನಷ್ಟು ಕಾಲಾವಕಾಶ ಸಿಕ್ಕಿದೆ. ಇಲ್ಲಿ ಕಠಿನ ಪರಿಶ್ರಮ ಹಾಕಬೇಕಿದೆ’ ಎಂದು ಹರ್ಯಾಣ ಪೊಲೀಸ್‌ ವಿಭಾಗದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಸರ್ದಾರ್‌ ಸಿಂಗ್‌ ಹೇಳಿದರು.

ನ್ಯೂಜಿಲ್ಯಾಂಡ್‌ ಎದುರಾಳಿ
ಭಾರತ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ “ಎ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದ್ದು, ಮೊದಲ ಲೀಗ್‌ ಮುಖಾಮುಖಿಯಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸಲಿದೆ. ಈ ಪಂದ್ಯ ಜು. 24ರಂದು ನಡೆಯಲಿದೆ.
ಈ ವಿಭಾಗದಲ್ಲಿರುವ ಉಳಿದ ತಂಡಗಳೆಂದರೆ ಆಸ್ಟ್ರೇಲಿಯ, ಸ್ಪೇನ್‌, ಹಾಲಿ ಚಾಂಪಿಯನ್‌ ಆರ್ಜೆಂಟೀನಾ, ಮತ್ತು ಆತಿಥೇಯ ಜಪಾನ್‌.

ಈ ವರ್ಷದ ಪ್ರೊ ಲೀಗ್‌ ಹಾಕಿಯಲ್ಲಿ ನಮ್ಮವರ ಪ್ರದರ್ಶನ ಉತ್ತಮ ಮಟ್ಟದಲ್ಲಿತ್ತು. ಇದನ್ನು ಕಾಯ್ದುಕೊಂಡರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಖಂಡಿತ ಪದಕವೊಂದನ್ನು ನಿರೀಕ್ಷಿಸಬಹುದು’
– ಸರ್ದಾರ್‌ ಸಿಂಗ್‌, ಭಾರತ ಹಾಕಿ ತಂಡದ ಮಾಜಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next