Advertisement

ಹಾಕಿ: ಹೊಸ ಹೀರೋಗಳಿಗೆ ಮಣೆ ಹಾಕಿ

08:05 AM Dec 22, 2018 | Team Udayavani |

ಎರಡು ವರ್ಷಗಳ ಹಿಂದೆ ಭಾರತ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ ಆಗಿತ್ತು. ಆದರೆ ಸೀನಿಯರ್‌ ವಿಶ್ವಕಪ್‌ನಲ್ಲಿ ಮತ್ತೂಮ್ಮೆ ಫ್ಲಾಪ್‌ ಆಗಿದೆ. ಕಿರಿಯ ಆಟಗಾರರು ಸೀನಿಯರ್‌ ತಂಡವನ್ನು ಆಕ್ರಮಿಸಿಕೊಂಡ ಬಳಿಕ ಭಾರತೀಯ ಹಾಕಿಯ ಏರುಗತಿಯನ್ನು ನಿರೀಕ್ಷಿಸಬಹುದೋ ಏನೋ…

Advertisement

ಐಪಿಎಲ್‌, ಇನ್ನಿತರ ಟಿ20 ಕ್ರಿಕೆಟ್‌ ಲೀಗ್‌ಗಳಲ್ಲಿ ಹೊಡಿಬಡಿ ಆಟವಾಡಿದವರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿಂತು ಆಡುವಷ್ಟು ತಾಳ್ಮೆ, ಏಕಾಗ್ರತೆ ಇರದು. ಅದೇ ರೀತಿ ಮಾಮೂಲು ಅಂಗಳದಲ್ಲಿ ಹಾಕಿ ಅಭ್ಯಾಸ ನಡೆಸಿದವರಿಗೆ ಆಸ್ಟ್ರೊ ಟಫ್ì ಆಟ “ಟಫ್’ ಆಗಿ ಕಾಡುವುದು ಸಹಜ. ಏಷ್ಯನ್‌ ಹಾಕಿ ಜಾಗತಿಕ ಮಟ್ಟದಲ್ಲಿ ನಿಧಾನವಾಗಿ ಹಿಂದೆ ಸರಿಯಲು ಇದು ಮುಖ್ಯ ಕಾರಣ. ಇದಕ್ಕೆ ಭುವನೇಶ್ವರದಲ್ಲಿ ಮುಗಿದ ವಿಶ್ವಕಪ್‌ ಹಾಕಿ ಪಂದ್ಯಾವಳಿ ಮತ್ತೂಮ್ಮೆ ನಿದರ್ಶನ ಒದಗಿಸಿತು.

 ಯುರೋಪಿಯನ್‌ ಶೈಲಿಯ ಸವಾಲು
ಆತಿಥೇಯ ಭಾರತ, ನೆರೆಯ ಪಾಕಿಸ್ತಾನ ವಿಶ್ವ ಹಾಕಿಯಲ್ಲಿ ದೊಡ್ಡ ಶಕ್ತಿಯಾಗಿ ಮೆರೆದಂಥ ರಾಷ್ಟ್ರಗಳು. ಆದರೆ ಈಗ ಇವು ಯಾವ ಮಟ್ಟದಲ್ಲಿವೆ ಎಂಬುದನ್ನು ಅವಲೋಕಿಸಿದರೆ ತೀವ್ರ ನಿರಾಶೆ ಸಹಜ. 1975ರಲ್ಲಿ ವಿಶ್ವಕಪ್‌ ಗೆದ್ದ ಬಳಿಕ ಭಾರತ ಸೆಮಿಫೈನಲ್‌ ಕೂಡ ಪ್ರವೇಶಿಸಿಲ್ಲ. ವಿಶ್ವಕಪ್‌ ಹಾಕಿಯ ಪ್ರಪ್ರಥಮ ಚಾಂಪಿಯನ್‌ ಎಂಬ ಖ್ಯಾತಿಯ ಪಾಕಿಸ್ತಾನ 4 ಸಲ ಚಾಂಪಿಯನ್‌ ಎನಿಸಿಕೊಂಡು ದಾಖಲೆ ನಿರ್ಮಿಸಿತಾದರೂ 1994ರ ಬಳಿಕ ಸುದ್ದಿಯಲ್ಲೇ ಇಲ್ಲ. ಅಲ್ಲಿಗೆ ಯುರೋಪಿಯನ್‌ ಶೈಲಿಯ ಹಾಕಿಗೆ ಏಷ್ಯನ್ನರು ಇನ್ನೂ ಹೊಂದಿಕೊಂಡಿಲ್ಲ ಎಂಬುದು ಸ್ಪಷ್ಟ.

ಭಾರತ, ಪಾಕ್‌ ತಂಡಗಳು ಆಕ್ರಮಣಕಾರಿಯಾಗಿ ಆಡುತ್ತವೆಯೋ ಹೊರತು ಪಾಸಿಂಗ್‌ನಲ್ಲಿ “ಫೇಲ್‌’ ಆಗುತ್ತಿವೆ. ಆದರೆ ಯುರೋಪಿಯನ್‌ ತಂಡಗಳ ಪಾಸಿಂಗ್‌ ಅಮೋಘ. ಪೆನಾಲ್ಟಿ ಕಾರ್ನರ್‌, ಪೆನಾಲ್ಟಿ ಶೂಟೌಟ್‌ಗಳಲ್ಲೂ ಅವರು ಎಷ್ಟೋ ಚುರುಕಾಗಿದ್ದಾರೆ. ಇದರಿಂದ ಧನಾತ್ಮಕ ಫ‌ಲಿತಾಂಶವನ್ನೇ ಪಡೆಯುತ್ತಿದ್ದಾರೆ.

 ನಾಲ್ಕಕ್ಕೂ ಸಲ್ಲದ ಭಾರತ, ಪಾಕ್‌
ಕಳೆದ 6 ವಿಶ್ವಕಪ್‌ಗ್ಳಲ್ಲಿ ಆಸ್ಟ್ರೇಲಿಯ ಮತ್ತು ಜರ್ಮನಿ ತಲಾ 2 ಸಲ, ನೆದರ್ಲೆಂಡ್‌ ಮತ್ತು ಬೆಲ್ಜಿಯಂ ಒಮ್ಮೊಮ್ಮೆ ಕಿರೀಟ ಏರಿಸಿಕೊಂಡವು. ಭಾರತ, ಪಾಕಿಸ್ಥಾನ 4ನೇ ಸ್ಥಾನಕ್ಕೂ ಸಲ್ಲಲಿಲ್ಲ. ಈ ಸಲ ಆತಿಥೇಯ ಭಾರತಕ್ಕೆ ಲಭಿಸಿದ್ದು 6ನೇ ಸ್ಥಾನ! ಇದನ್ನೆಲ್ಲ ಗಮನಿಸಿಯೇ ಸತತ 2 ಸಲ ವಿಶ್ವಕಪ್‌ “ಸರಣಿಶ್ರೇಷ್ಠ’ ಆಟಗಾರ ಪ್ರಶಸ್ತಿಗೆ ಪಾತ್ರರಾದ ವಿಶ್ವದ ಏಕೈಕ ಆಟಗಾರ, ಪಾಕಿಸ್ತಾನದ ಶಾಬಾಜ್‌ ಅಹ್ಮದ್‌ ಹೇಳಿದ್ದು, “ಭಾರತ, ಪಾಕಿಸ್ತಾನ ಹಾಕಿಗೆ ಹೊಸ ಹೀರೋಗಳು ಬೇಕಾಗಿದ್ದಾರೆ’ ಎಂದು.

Advertisement

 ಜೂನಿಯರ್‌ಗಳ ಸರದಿ…
ಹಾಗೆ ನೋಡಿದರೆ ಭಾರತವೇ ವಾಸಿ. ಈ ಸಲ ಆಡಿದ ವಿಶ್ವಕಪ್‌ ತಂಡದಲ್ಲಿ, 2 ವರ್ಷಗಳ ಹಿಂದೆ ಜೂನಿಯರ್‌ ವಿಶ್ವಕಪ್‌ ವಿಜೇತ ತಂಡದ 7 ಮಂದಿ ಆಟಗಾರರಿದ್ದರು. ಅಂದಿನ ಲಕ್ನೊ ಫೈನಲ್‌ನಲ್ಲಿ ಭಾರತ ತಂಡ ಬೆಲ್ಜಿಯಂಗೆ ಸೋಲುಣಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಜೂನಿಯರ್‌ ಮಟ್ಟದಲ್ಲಿ ಒಲಿದದ್ದು ಸೀನಿಯರ್‌ ಮಟ್ಟದಲ್ಲೂ ಸಾಧ್ಯವಾಗಬೇಕಾದುದು ಸದ್ಯದ ಅನಿವಾರ್ಯತೆ. ಇದಕ್ಕಾಗಿ ಈಗಿನ ಕಿರಿಯರೆಲ್ಲ ಮುಂದೊಂದು ದಿನ ಸೀನಿಯರ್‌ ತಂಡವನ್ನು ಆಕ್ರಮಿಸಿಕೊಳ್ಳುವ ತನಕ ಕಾಯಬೇಕಾಗಿದೆ.

 “ಎಲ್ಲರೂ ರೋಹಿದಾಸರೇ…’
ವಿಶ್ವಕಪ್‌ನಲ್ಲಿ ಹೊಸ ಹೀರೋಗಳ ಪ್ರದರ್ಶನ ಗಮನಾರ್ಹ ಮಟ್ಟದಲ್ಲಿತ್ತು. ವರುಣ್‌ ಕುಮಾರ್‌, ಅಮಿತ್‌ ರೋಹಿದಾಸ್‌, ಸಿಮ್ರನ್‌ಜಿàತ್‌ ಸಿಂಗ್‌, ಲಲಿತ್‌ ಉಪಾಧ್ಯಾಯ, ಸುರೇಂದರ್‌ ಕುಮಾರ್‌, ಚಿಂಗ್ಲೆನ್ಸಾನ ಸಿಂಗ್‌ ಅವರೆಲ್ಲ ಉಜ್ವಲ ಭವಿಷ್ಯವುಳ್ಳ ಯುವ ಆಟಗಾರರು. ಕೋಚ್‌ ಹರೇಂದ್ರ ಸಿಂಗ್‌ ಲೆಕ್ಕಾಚಾರವೂ ಇದೇ ಆಗಿದೆ. ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತ, “ನಿಮಗೆ ಯಾವ ರೋಹಿದಾಸ್‌ ಬೇಕು ಹೇಳಿ, ನಮ್ಮ ತಂಡದಲ್ಲಿರುವ ಎಲ್ಲ 16 ಆಟಗಾರರೂ ಅಮಿತ್‌ ರೋಹಿದಾಸರೇ ಆಗಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದು ಹರೇಂದ್ರ ಅವರ ಅಮಿತ ಆತ್ಮವಿಶ್ವಾಸಕ್ಕೆ ಸಾಕ್ಷಿ.

ಸೀನಿಯರ್‌ಗಳಾದ ಸರ್ದಾರ್‌ ಸಿಂಗ್‌ ನಿವೃತ್ತರಾದರೆ, ರೂಪಿಂದರ್‌ಪಾಲ್‌ ಸಿಂಗ್‌ಗೆ ಗೇಟ್‌ಪಾಸ್‌ ನೀಡಲಾಗಿತ್ತು. ಎಸ್‌.ವಿ. ಸುನೀಲ್‌ ಮತ್ತು ರಮಣ್‌ದೀಪ್‌ ಸಿಂಗ್‌ “ಗಾಯ’ದ ಕಾರಣದಿಂದ ಈ ವಿಶ್ವಕಪ್‌ನಿಂದ ದೂರ ಉಳಿದಿದ್ದರು. ಇವರ ಸ್ಥಾನ ಯುವ ಆಟಗಾರರ ಪಾಲಾಗಿತ್ತು. ಭಾರತೀಯ ಹಾಕಿಯಲ್ಲಿ ಹೊಸ ನೀರು ಹರಿದು ಬಂದಿತ್ತು.

 ಹಾಕಿ ಪ್ರಗತಿ ಹೇಗೆ?
ನಾವೂ ಯುರೋಪಿಯನ್ನರ ಶೈಲಿಗೆ, ಅವರ ವೇಗಕ್ಕೆ ಹೊಂದಿಕೊಳ್ಳಬೇಕಾದರೆ ಇಂಥ ಯುವಪಡೆಯನ್ನು ತಳಮಟ್ಟದಿಂದಲೇ ಸಜ್ಜುಗೊಳಿಸಬೇಕು. ಆರಂಭದಿಂದಲೇ ಆಸ್ಟ್ರೊ ಟಫ್ì ಅಭ್ಯಾಸ ಆರಂಭಿಸಿದರೆ ಸಮಸ್ಯೆ ಅರ್ಧ ಬಗೆಹರಿದಂತೆ. ತಜ್ಞರಿಂದ ಮುನ್ನಡೆಸಲ್ಪಡುವ ಶಿಕ್ಷಣ-ವಸತಿ ಹಾಕಿ ಅಕಾಡೆಮಿ, ಆಟಗಾರರ ಕೌಶಲ ಮತ್ತು ದೈಹಿಕ ಕ್ಷಮತೆಯನ್ನು ವಿಶ್ವ ಮಟ್ಟದಲ್ಲಿ ಬೆಳೆಸುವ ನುರಿತ ಸ್ವದೇಶಿ ತರಬೇತುದಾರರೆಲ್ಲ ಭಾರತೀಯ ಹಾಕಿಗೆ ತುರ್ತಾಗಿ ಬೇಕಿದ್ದಾರೆ.

 ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next