Advertisement

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

06:16 PM Apr 25, 2024 | Team Udayavani |

ಹೊಸದಿಲ್ಲಿ: ಮಾನವೀಯತೆ ಎಂಬ ಪದದ ಅರ್ಥಕ್ಕೆ ವ್ಯಾಪ್ತಿ ವಿಶಾಲವಾದದ್ದು, ಅದಕ್ಕೆ ಜಾತಿ, ಧರ್ಮಗಳ ಹಂಗಿಲ್ಲ. ದೇಶಗಳ ವ್ಯಾಪ್ತಿಯೂ ಇಲ್ಲ. ಹೃದಯ ಮಿಡಿಯುವ, ಹೃದಯ ವೈಶಾಲ್ಯ ಮೆರೆದ ಈ ಘಟನೆಯೇ ಸಾಕ್ಷಿ.

Advertisement

ಹೃದಯಾಘಾತಕ್ಕೊಳಗಾಗಿ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದ ಪಾಕಿಸ್ಥಾನದ ಹದಿಹರೆಯದ ಯುವತಿಯೊಬ್ಬಳು ದೆಹಲಿಯಲ್ಲಿ ಹೃದಯ ದಾನಿಯೊಬ್ಬರಿಂದ ಹೃದಯ ಪಡೆದ ನಂತರ ಹೊಸ ಜೀವನವನ್ನು ಪಡೆದುಕೊಂಡಿದ್ದಾಳೆ.

19 ರ ಹರೆಯದ ಆಯೇಶಾ ರಶಾನ್ ಕಳೆದ ಒಂದು ದಶಕದಿಂದ ಹೃದ್ರೋಗದಿಂದ ಬಳಲುತ್ತಿದ್ದಳು. 2014 ರಲ್ಲಿ ಆಕೆ ಭಾರತಕ್ಕೆ ಭೇಟಿ ನೀಡಿದ್ದಳು, ಆಕೆಗೆ ಹೃದಯ ಪಂಪ್ ಅನ್ನು ಅಳವಡಿಸಲಾಗಿತ್ತು. ಆಕೆಯ ಹೃದಯವು ದುರ್ಬಲಗೊಂಡಿತ್ತು. ದುರದೃಷ್ಟವಶಾತ್, ಸಾಧನವು ನಿಷ್ಪರಿಣಾಮಕಾರಿಯಾಗಿದೆ ಎಂದು ಸಾಬೀತಾದ ಬಳಿಕ ತಜ್ಞ ವೈದ್ಯರು ಆಕೆಯ ಜೀವವನ್ನು ಉಳಿಸಲು ಹೃದಯ ಕಸಿ ಮಾಡಲು ಶಿಫಾರಸು ಮಾಡಿದರು.

ಆಯೇಷಾ ರಶಾನ್ ಅವರ ಕುಟುಂಬವು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಕಸಿ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್.ಬಾಲಕೃಷ್ಣನ್ ಮತ್ತು ಸಹ ನಿರ್ದೇಶಕ ಡಾ.ಸುರೇಶ್ ರಾವ್ ಅವರಿಂದ ಸಮಾಲೋಚನೆಯನ್ನು ಕೋರಿತು. ಆಯೇಷಾಳ ಹೃದಯ ಪಂಪ್ ಸೋರಿಕೆಯನ್ನು ಅಭಿವೃದ್ಧಿಪಡಿಸಿದ ಕಾರಣ ಹೃದಯ ಕಸಿ ಅಗತ್ಯ ಎಂದು ವೈದ್ಯಕೀಯ ತಂಡ ಸಲಹೆ ನೀಡಿತು ಮತ್ತು ಆಕೆಯನ್ನು ECMO( ಎಕ್ಸ್‌ಟ್ರಾ ಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್) ಪ್ರಕ್ರಿಯೆಗೆ ಒಳಪಡಿಸಲಾಯಿತು.

Advertisement

ಆದರೆ, ಕಸಿ ಪ್ರಕ್ರಿಯೆಗೆ ಅಗತ್ಯವಿರುವ 35 ಲಕ್ಷ ರೂ.ಗೂ ಹೆಚ್ಚು ಹಣವನ್ನು ಭರಿಸಲು ತಮ್ಮ ಅಸಮರ್ಥತೆಯನ್ನು ಉಲ್ಲೇಖಿಸಿ ಕುಟುಂಬಹಿಂದೇಟು ಹಾಕಿತು. ಈ ವೇಳೆ ನೆರವಿಗೆ ಮುಂದಾದ ವೈದ್ಯಕೀಯ ತಂಡ ಕುಟುಂಬವನ್ನು ಐಶ್ವರ್ಯಂ ಟ್ರಸ್ಟ್‌ನ ಸಂಪರ್ಕ ಮಾಡಿಸಿತು. ಟ್ರಸ್ಟ್‌ ಆರ್ಥಿಕ ಸಹಾಯವನ್ನು ನೀಡಿತು. ಆರು ತಿಂಗಳ ಹಿಂದೆ, ಆಯೇಶಾ ದೆಹಲಿಯಲ್ಲಿ ದಾನಿಯೊಬ್ಬರ ಹೃದಯವನ್ನು ಪಡೆದಳು. ಆಕೆ 18 ತಿಂಗಳ ಕಾಲ ಭಾರತದಲ್ಲಿ ತಂಗಿದ ನಂತರ MGM ಹೆಲ್ತ್‌ಕೇರ್‌ನಲ್ಲಿ ಕಸಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಯಿತು.

ಹೊಸ ಹೃದಯ ಪಡೆದ ಬಳಿಕ ಭರವಸೆ ಮತ್ತು ಕೃತಜ್ಞತೆಯಿಂದ ತುಂಬಿದ ಆಯೇಷಾ ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದು, ವೈದ್ಯರು ಮತ್ತು ಭಾರತ ಸರಕಾರವು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾಳೆ.

ಆಯೇಷಾಳ ತಾಯಿ ಸನೋಬಾರ್ ಅವರು ಆಯೇಷಾ ಬದುಕುತ್ತಿರಲಿಲ್ಲ ಎಂದು ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದು, ಭಾರತಕ್ಕೆ ಬಂದಾಗ ಮಗಳ ಸ್ಥಿತಿಯು ಕೇವಲ 10 ಪ್ರತಿಶತದಷ್ಟು ಚೈತನ್ಯ ಹೊಂದಿತ್ತು ಎಂದು ಹೇಳಿದ್ದಾರೆ.

“ನಿಜವಾಗಿ ಹೇಳಬೇಕೆಂದರೆ, ಭಾರತಕ್ಕೆ ಹೋಲಿಸಿದರೆ ಪಾಕಿಸ್ಥಾನದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲ. ಭಾರತ ತುಂಬಾ ಸ್ನೇಹಪರವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಕಸಿ ಸೌಲಭ್ಯ ಲಭ್ಯವಿಲ್ಲ ಎಂದು ಪಾಕಿಸ್ಥಾನದ ವೈದ್ಯರು ಹೇಳಿದಾಗ, ನಾವು ಡಾ. ಕೆ.ಆರ್. ಬಾಲಕೃಷ್ಣನ್ ಅವರನ್ನು ಸಂಪರ್ಕಿಸಿದೇವು. ನಾನು ಭಾರತಕ್ಕೆ ಮತ್ತು ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಭಾವುಕರಾಗಿದ್ದಾರೆ.

ಸದ್ಯ ಆಯೇಷಾ ಹೊಸ ಭರವಸೆ ಹೊಂದಿ ಹೊಸ ಜೀವನವನ್ನು ಎದುರು ಕಾಣುತ್ತಿದ್ದು, ಫ್ಯಾಷನ್ ಡಿಸೈನರ್ ಆಗುವ ಕನಸನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next