ಹೊಸದಿಲ್ಲಿ: ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಪ್ರಿ ಇನ್‌ಸ್ಟಾಲ್ ಆ್ಯಪ್‌ಗಳನ್ನು ತೆಗೆಯಲಾಗುತ್ತಿಲ್ಲವೇ? ಇದಕ್ಕಾಗಿ ಕೇಂದ್ರ ಸರಕಾರ ಹೊಸ ನಿಯಮ ರೂಪಿಸುತ್ತಿದ್ದು, ಇಂಥ ಆ್ಯಪ್‌ಗಳನ್ನು ತೆಗೆದುಹಾಕಲು ಅವಕಾಶ ನೀಡುವಂತೆ ಕಂಪೆನಿಗಳಿಗೆ ಸೂಚಿಸುವ ಸಾಧ್ಯತೆ ಇದೆ.
ಚೀನ ನಿರ್ಮಿತ ಮೊಬೈಲ್‌ಗಳಲ್ಲಿ ಪ್ರಿ ಇನ್‌ಸ್ಟಾಲ್ ಆ್ಯಪ್‌ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಆರೋಪಗಳಿವೆ. ಹೀಗಾಗಿ ಕೇಂದ್ರ ಸರಕಾರ ಹೊಸ ಸುರಕ್ಷಾ ನೀತಿಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇಂಥ ಆ್ಯಪ್‌ಗಳಿಂದ ರಾಷ್ಟ್ರೀಯ ಭದ್ರತೆಗೆ ಮಾರಕವುಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಹೀಗಾಗಿಯೇ ಚೀನ ನಿರ್ಮಿತ ಮೊಬೈಲ್‌ಗಳಲ್ಲಿನ ಪ್ರಿ ಇನ್‌ಸ್ಟಾಲ್ ಆ್ಯಪ್‌ಗಳನ್ನು ತೆಗೆಯುವುದಕ್ಕೆ ಅವಕಾಶ ನೀಡುವ ನಿಯಮ ತರಲಾಗುತ್ತಿದೆ ಎಂದಿದ್ದಾರೆ.
ಗಾಲ್ವನ್ ಗಲಾಟೆಯ ಬಳಿಕ ದೇಶದ ಭದ್ರತೆಗೆ ಚೀನ ಆ್ಯಪ್‌ಗಳ ಮಾರಕ ಎಂದು ತೀರ್ಮಾನಿಸಿರುವ ಕೇಂದ್ರ ಸರಕಾರ ಈಗಾಗಲೇ 300ಕ್ಕೂ ಹೆಚ್ಚು ವಿವಿಧ ಆ್ಯಪ್‌ಗಳನ್ನು ಈಗಾಗಲೇ ನಿಷೇಧಿಸಿದೆ.
ಚೀನ ಮೂಲದ ಶಿಯೋಮಿ, ವಿವೋ, ಒಪ್ಪೋ ಕಂಪೆನಿಗಳು ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಶೇ. 50 ಪಾಲು ಹೊಂದಿವೆ.
ಶೇ. 20 ಸ್ಯಾಮ್‌ಸಂಗ್, ಆ್ಯಪಲ್ ಶೇ. 2ರಷ್ಟು ಪಾಲು ಹೊಂದಿವೆ. ಶೀಘ್ರದಲ್ಲಿಯೇ ಈ ನಿಯಮ ಜಾರಿ ಬರುವುದೇ ಆದರೆ, ಸ್ಯಾಮ್‌ಸಂಗ್, ಶಿಯೋಮಿ, ವಿವೋ ಮತ್ತು ಆ್ಯಪಲ್ ಕಂಪೆನಿಗಳ ಹೊಸ ಫೋನ್‌ಗಳು ಮಾರುಕಟ್ಟೆಗೆ ವಿಳಂಬವಾಗಲಿವೆ.
ಇತ್ತೀಚೆಗಷ್ಟೇ ಗುಪ್ತಚರ ಇಲಾಖೆಯು ಯೋಧರಿಗೆ ಮತ್ತು ಅವರ ಕುಟುಂಬಗಳಿಗೆ ಚೀನ ನಿರ್ಮಿತ ಮೊಬೈಲ್‌ಗಳನ್ನು ಬಳಸದಂತೆ ಸೂಚಿಸಿತ್ತು.