Advertisement

ಪಾಲಿಕೆ ದೂರಿನಿಂದ ಗೇಲ್‌ ಕಾಮಗಾರಿಗೆ ಹಿನ್ನಡೆ

11:36 AM Jan 04, 2022 | Team Udayavani |

ಬೆಂಗಳೂರು: ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮೀಷನ್‌ ಆರೋಪ ಇತ್ತೀಚೆಗೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂಬ ಆರೋಪವೂ ಗುತ್ತಿಗೆದಾರರಿಂದ ಕೇಳಿಬಂದಿತ್ತು. ಆದರೆ, ಗುತ್ತಿಗೆ ಕಾಮಗಾರಿಗಳು ಮಾತ್ರವಲ್ಲ; ಸರ್ಕಾರಿ ಸಂಸ್ಥೆಗಳಿಗೂ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳದ ಸ್ಥಿತಿ ಈಗ ನಿರ್ಮಾಣವಾಗಿದೆ!

Advertisement

ಸರ್ಕಾರಿ ಸಂಸ್ಥೆಯೇ ಕೇಂದ್ರ ಸರ್ಕಾರಿ ಸಂಸ್ಥೆ ವಿರುದ್ಧ ಎಫ್ ಐಆರ್‌ ದಾಖಲಿಸಿ, ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಉಂಟುಮಾಡಿರುವುದು ನಗರದ ನಾಯಂಡಹಳ್ಳಿಯಲ್ಲಿ ನಡೆದಿದ್ದು, ಘಟನೆಯು ತಡವಾಗಿ ಬೆಳಕಿಗೆಬಂದಿದೆ.

ಕೇಂದ್ರದ ಮಹತ್ವಾಕಾಂಕ್ಷಿ ಅನಿಲ ಕೊಳವೆ ಮಾರ್ಗ ಯೋಜನೆಯನ್ನು ನಗರದಲ್ಲಿ ಭಾರತೀಯ ಅನಿಲ ಪ್ರಾಧಿಕಾರ (ಗೇಲ್‌)ವು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅಗತ್ಯ ಅನುಮತಿ ಯನ್ನೂ ಬಿಬಿಎಂಪಿಯಿಂದ ಪಡೆಯಲಾಗಿದೆ. ಆದಾಗ್ಯೂ “ಅಗತ್ಯ ಅನುಮತಿ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಆರೋಪಿಸಿ ಗೇಲ್‌ ಸಂಸ್ಥೆಯ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಬಿಬಿಂಎಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪರ್ಸೆಂಟೇಜ್‌ ಘಮಲು ಇಲ್ಲಿಯೂ ಬರುತ್ತಿದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ದೂರು ನೀಡಿದ್ದರಿಂದ ಗೇಲ್‌ ಕಾಮಗಾರಿಗೆ ತುಸು ಹಿನ್ನಡೆಯಾಗಿತ್ತು. ಅಷ್ಟೇ ಅಲ್ಲ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಎರಡೂ ಅಭಿವೃದ್ಧಿ ಮಂತ್ರ ಪಠಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅಂಗ ಸಂಸ್ಥೆಯೇ ಹೀಗೆ ಕೇಂದ್ರ ಸರ್ಕಾರದ ಅಂಗ ಸಂಸ್ಥೆ ವಿರುದ್ಧ ಎಫ್ಐಆರ್‌ ದಾಖಲಿಸಿರುವುದು ಮುಜುಗರ ಕೂಡ ಉಂಟುಮಾಡಿದೆ.

ಸಿಎಸ್‌ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ?: ಇದಕ್ಕೆ ಪ್ರತಿಯಾಗಿ ಗೇಲ್‌ ಅಧಿಕಾರಿಗಳು, ಬಿಬಿಎಂಪಿ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಜತೆಗೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನವನ್ನೂ ಸೆಳೆದಿದ್ದಾರೆ. ಆಗ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಬಿಬಿಎಂಪಿ ಮುಖ್ಯ ಆಯುಕ್ತರು, ಗೇಲ್‌ ಅಧಿಕಾರಿಗಳ ನಡುವೆ ಮಾತುಕತೆ ನಡೆಸಿದ್ದಾರೆ. ನಂತರ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.

Advertisement

ಅಂತಿಮವಾಗಿ ಬಿಬಿಎಂಪಿ ಮುಖ್ಯ ಆಯುಕ್ತರು, “ಗೇಲ್‌ ನಗರದ ಹೊರವರ್ತುಲ ರಸ್ತೆಯಲ್ಲಿ ಅಂದರೆ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಸುಮನಹಳ್ಳಿ ಮತ್ತು ನಾಯಂಡಹಳ್ಳಿ ಮಾರ್ಗದಲ್ಲಿ ಅನಿಲ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಸಂಬಂಧ ಅಗತ್ಯ ಅನುಮತಿ ಪಡೆದಿದ್ದಾರೆ.

ಆದರೆ, ಸ್ಥಳೀಯ ಅಧಿಕಾರಿಗಳ ಮಾಹಿತಿ ಕೊರತೆಯಿಂದ ದೂರು ದಾಖಲಿಸಲಾಗಿದ್ದು, ಅದನ್ನು ಈಗ ಹಿಂಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರನ್ನು ಅಲ್ಲಿಗೇ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ? :

“ನಾಯಂಡಹಳ್ಳಿಯ ಕಲ್ಯಾಣಿ ಮೋಟಾರ್ ಮುಂಭಾಗದಲ್ಲಿ ಗೇಲ್‌, ಡಿಗ್ಗಿಂಗ್‌ ಯಂತ್ರದಿಂದ ರಸ್ತೆ ಅಗೆದಿದ್ದು, ಸುಮಾರು 10 ಮೀಟರ್‌ಗೂ ಅಧಿಕರಸ್ತೆಯನ್ನು ಹಾಳುಮಾಡಿದೆ. ಈ ಬಗ್ಗೆ ಸಂಸ್ಥೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಮ್ಮದು ಸಣ್ಣಕಂಪನಿಯಲ್ಲ; ದೊಡ್ಡ ಕಂಪನಿಯಾಗಿದೆ. ನೀವೇನಾದರೂ ನಮ್ಮ ಕೆಲಸಕ್ಕೆ ಅಡ್ಡಿಪಡಿಸಿದರೆ, ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಾ ಎಂದು ಬೆದರಿಕೆ ಹಾಕಿರುತ್ತಾರೆ. ಈಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಕಿರಿಯ ಎಂಜಿನಿಯರೊಬ್ಬರು ದೂರುದಾಖಲಿಸಿದ್ದಾರೆ. “ಮಾಹಿತಿ ಕೊರತೆಯಿಂದ ಗೇಲ್‌ವಿರುದ್ಧ ಎಫ್ಐಆರ್‌ ದಾಖಲಿಸಲಾಗಿತ್ತು. ನಂತರದಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿಅನುಮತಿ ಪಡೆದಿರುವುದು ಗೊತ್ತಾಯಿತು. ಹಾಗಾಗಿ, ದೂರು ಹಿಂಪಡೆಯಲಾಗಿದೆ. ಈ ಮಧ್ಯೆ ಕಾಮಗಾರಿಸ್ಥಗಿತಗೊಂಡಿಲ್ಲ; ಎಂದಿನಂತೆ ಅಲ್ಲಿ ಮುಂದುವರಿದಿದೆ’ ಎಂದು ದೂರು ನೀಡಿದ್ದ ಕಿರಿಯ ಎಂಜಿನಿಯರ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next