ನೀವು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರವನ್ನು ಏನಾದರೂ ನೋಡಿದ್ದರೆ, ಈಕೆಯನ್ನೂ ನೋಡಿರುತ್ತೀರಿ. ಕಬಾಲಿ ಚಿತ್ರದಲ್ಲಿ ರಜನೀಕಾಂತ್ ಪುತ್ರಿಯಾಗಿ ಟಾಮ್ ಗರ್ಲ್ ಲುಕ್‌ನಲ್ಲಿ ಮಿಂಚಿ, ಸಿನಿಪ್ರಿಯರನ್ನು ಸೆಳೆದಿದ್ದ ಈಕೆಯ ಹೆಸರು ಸಾಯಿ ಧನ್ಸಿಕಾ. ತಮಿಳುನಾಡಿನ ತಂಜಾವೂರು ಮೂಲದ ಧನ್ಸಿಕಾ ಕುಟುಂಬ ನಂತರ ಸೆಟಲ್ ಆಗಿದ್ದು ಚೆನ್ನೈನಲ್ಲಿ. ಇನ್ನು ಧನ್ಸಿಕಾ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಚೆನ್ನೈನಲ್ಲಿಯೆ. ಇಂತಿಪ್ಪ ಧನ್ಸಿಕಾ ಈಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು ಉದ^ರ್ಷ ಸಿನಿಮಾ ಮೂಲಕ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರದಲ್ಲಿ ಧನ್ಸಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಕಥಾಹಂದರವಿರುವ ಉದ^ರ್ಷ ಚಿತ್ರದಲ್ಲಿ ರೇಷ್ಮಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರ ಉದ^ರ್ಷ ದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಿರುವ ಧನ್ಸಿಕಾ, “ಕನ್ನಡ ಚಿತ್ರರಂಗದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಇತ್ತೀಚೆಗೆ ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಒಳ್ಳೆಯ ಕಥೆ, ಸುನೀಲ್ ಕುಮಾರ್ ದೇಸಾಯಿ ಅವರಂಥ ಒಳ್ಳೆಯ ನಿರ್ದೇಶಕರು ಸಿಕ್ಕರೆ ಖಂಡಿತ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತೇನೆ’ ಎನ್ನುತ್ತಾರೆ. ಒಟ್ಟಾರೆ ಅರಳು ಹುರಿದಂತೆ ಮಾತನಾಡುವ ಈ ಹುಡುಗಿಯ ಅಭಿನಯ ಕನ್ನಡ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂದು ಗೊತ್ತಾಗಬೇಕಾದರೆ, ಧನ್ಸಿಕಾ ಮೊದಲ ಚಿತ್ರ ಉದ^ರ್ಷ ತೆರೆಗೆ ಬರಬೇಕು.
ಇನ್ನು ಧನ್ಸಿಕಾ ಕುಟುಂಬ ಮೊದಲಿನಿಂದಲೂ ತಮಿಳು ಚಿತ್ರರಂಗದ ಹಲವರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿತ್ತು. “ಬಹುಶಃ ಇದೇ ಕಾರಣದಿಂದಲೊ ಏನೋ ನಾನು 16ನೇ ವಯಸ್ಸಿನಲ್ಲಿರುವಾಗಲೇ, ತಮಿಳಿನ ತಿರುಡಿ, ಮನತೊಂಡು ಮಜೈಕಲಂ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಮೊದಲೆರಡು ಚಿತ್ರಗಳೇ ನನಗೆ ಸಾಕಷ್ಟು ಹೆಸರನ್ನು ತಂದುಕೊಟ್ಟವು. ಸಿನಿಮಾರಂಗಕ್ಕೆ ಬರಬೇಕು ಎಂಬುದು ನನ್ನ ಆರಂಭದ ಕನಸಾಗಿರಲಿಲ್ಲ. ಇಲ್ಲಿ ಬಂದಿದ್ದು, ನಟಿಯಾಗಿದ್ದು ಎಲ್ಲವೂ ಆಕಸ್ಮಿಕ. ನಾನು ನಟಿಯಾಗದಿದ್ದರೆ, ಇಷ್ಟೊತ್ತಿಗಾಗಲೇ ಒಳ್ಳೆಯ ಕ್ರೀಡಾಪಟುವಾಗಿರುತ್ತಿದ್ದೆ’ ಎನ್ನುತ್ತಾರೆ ಸಾಯಿ ಧನ್ಸಿಕಾ.
ಒಮ್ಮೆ ಧನ್ಸಿಕಾ “ಚಲನಚಿತ್ರ ಪ್ರದರ್ಶನ’ (ಫಿಲಂ ಎಕ್ಸಿಬಿಷನ್) ಕ್ಕೆ ಮನೆಯವರೊಂದಿಗೆ ಚೆನ್ನೈನ ಆಡಿಟೋರಿಯಂ ಒಂದಕ್ಕೆ ಹೋಗಿದ್ದಾಗ, ನಿರ್ದೇಶಕ ಎಸ್.ಪಿ ಜನನಾಥನ್ ಅವರ ಕಣ್ಣಿಗೆ ಬಿದ್ದರು. ಧನ್ಸಿಕಾ ಅವರ ಚಲನಶೀಲ ಓಡಾಟವನ್ನು ಸೂಕ್ಷ್ಮವಾಗಿ ಗಮನಿಸಿದ ಎಸ್. ಪಿ. ಜನನಾಥನ್, “ನನ್ನ ಸಿನಿಮಾದಲ್ಲಿ ನಿನಗೊಂದು ಪಾತ್ರವಿದೆ. ಮಾಡುತ್ತೀಯಾ..?’ ಎಂದು ಕೇಳಿದರಂತೆ. ಅದಾಗಲೇ ತಮಿಳು ಚಿತ್ರರಂಗದಲ್ಲಿ ಒಂದಷ್ಟು ಹೆಸರು ಮಾಡಿದ್ದ ಜನನಾಥನ್ ಅವರ ಮಾತಿಗೆ ಒಪ್ಪಿದ ಧನ್ಸಿಕಾ ಪೆರನ್‌ಮೈ ಚಿತ್ರದಲ್ಲಿ ಅಭಿನಯಿಸಿದರು. ಈ ಚಿತ್ರದಲ್ಲಿ ಜೆನ್ನಿಫರ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದ ಧನ್ಸಿಕಾ ಚಿತ್ರರಂಗದಿಂದ, ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡರು. ಅದಾದ ಬಳಿಕ ನಿಲ್ ಗವನಿ ಸೆಲ್ಲಾಟೈ, ಆರವಾನ್, ಪರದೇಶಿ, ಯಾಯಾ, ತಿರಂತೀಡು ಸೀಸೈ, ಕಬಾಲಿ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಧನ್ಸಿಕಾ ಅವರನ್ನು ಹುಡುಕಿಕೊಂಡು ಬಂದವು. ಚಿತ್ರರಂಗಕ್ಕೆ ಕಾಲಿಟ್ಟ ಹನ್ನೆರಡು ವರ್ಷಗಳಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಧನ್ಸಿಕಾ, ಸದ್ಯ ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲೆಯಾಳ ಚಿತ್ರಗಳಲ್ಲೂ ನಿಧಾನವಾಗಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ.