Advertisement

ಮಯೂರಿ ನಾಟ್ಯಮಯೂರಿ

06:00 AM Sep 02, 2018 | |

ಎಲ್ಲಾ ದೇವರ ಆಶೀರ್ವಾದ …’
ಹಾಗಂತ ಹೇಳಿ ಒಮ್ಮೆ ನಕ್ಕರು ಮಯೂರಿ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಮಯೂರಿ ಕೈಯಲ್ಲಿ ಈಗ ಏಳು  ಸಿನೆಮಾಗಳಿವೆ. ಸದ್ಯದಲ್ಲೇ ಅವರು ಒಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಅಲ್ಲಿಗೆ ಎಲ್ಲಾ ಕೂಡಿದರೆ, ಎಂಟು ಚಿತ್ರಗಳ ಟೈಟಲ್‌ ಕಾರ್ಡ್‌ಗಳಲ್ಲಿ ಮಯೂರಿ ಹೆಸರನ್ನು ಕಾಣಬಹುದು. ಇದೆಲ್ಲಾ ಹೇಗೆ ಸಾಧ್ಯ ಎಂದರೆ, ಅವರಿಂದ ಬರುವ ಉತ್ತರ “ಎಲ್ಲಾ ದೇವರ ಆಶೀರ್ವಾದ …’

Advertisement

ಅಶ್ವಿ‌ನಿ ನಕ್ಷತ್ರದ ಮಯೂರಿ ಈಗ ಚಿತ್ರರಂಗದಲ್ಲಿ ಸಖತ್‌ ಬಿಝಿಯಾಗಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲ, ನನ್ನ ಪ್ರಕಾರ, 8 ಎಂಎಂ, ಮೌನಂ, ಸಿಗ್ನೇಚರ್‌  ಮತ್ತು ರುಸ್ತುಂ ಚಿತ್ರಗಳಲ್ಲಿ ನಟಿಸಿರುವ ಅವರು, ಹರಿಕೃಷ್ಣ ನಾರಾಯಣಿ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ಪುನೀತ್‌ ಶರ್ಮನ್‌ ಎನ್ನುವವರು ಹೇಳಿರುವ ಒಂದು ಕಥೆ ಇಷ್ಟವಾಗಿದೆ. ಅನಾದ್ಯಂತ ಎಂಬ ಹೆಸರಿನ ಈ ಚಿತ್ರ ಮಹಿಳಾ ಪ್ರಧಾನವಾಗಿದ್ದು, ಸದ್ಯದಲ್ಲೇ ಆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೆಲ್ಲದರ ಜೊತೆಗೆ ಮಜಾಭಾರತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಅವರು ಭಾಗವಹಿಸುತ್ತಿದ್ದಾರೆ.

ತಾನು ಬಹಳ ಅದೃಷ್ಟವಂತೆ ಎನ್ನುವ ಮಯೂರಿ, “”ಕಥೆ ರೆಡಿ ಮಾಡಿಕೊಂಡು ಬರುವ ನಿರ್ದೇಶಕರೆಲ್ಲ- ನಿಮ್ಮನ್ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಿದ್ದೇವೆ- ಎನ್ನುತ್ತಾರೆ. ಆ ನಿಟ್ಟಿನಲ್ಲಿ ನಾನು ಬಹಳ ಅದೃಷ್ಟವಂತೆ. ಬಹಳ ವಿಭಿನ್ನವಾದ ಚಿತ್ರಗಳು ಮತ್ತು ಪಾತ್ರಗಳು ಸಿಗುತ್ತಿವೆ. ಒಂದಕ್ಕೊಂದು ಲಿಂಕ್‌ ಇರದ ಚಿತ್ರಗಳು ಮತ್ತು ಪಾತ್ರಗಳು ಸಿಗುತ್ತಿವೆ. ಎಲ್ಲಾ ಚಿತ್ರಗಳನ್ನೂ ಮನಸಾರೆ ಒಪ್ಪಿಕೊಂಡು ನಟಿಸುತ್ತಿರುವೆ. ಪ್ರತಿಯೊಂದು ಪಾತ್ರದಲ್ಲೂ ಇನ್ವಾಲ್‌Ì ಆಗಿ, ಬಹಳ ಎಂಜಾಯ್‌ ಮಾಡಿಕೊಂಡು ನಟಿಸುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥವೂ ಇದೆ. ಚಿತ್ರೀಕರಣದ ಕೊನೆಯ ದಿನ ನಿರ್ದೇಶಕರು ಬಂದು, ಬಹಳ ಚೆನ್ನಾಗಿ ನಟಿಸಿದ್ದೀರಿ- ಎಂದರೆ ಅಷ್ಟೇ ಸಾಕು. ಹಾಗನಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಹಾಕುತ್ತಿದ್ದೀನಿ” ಎನ್ನುತ್ತಾರೆ ಮಯೂರಿ.

ಅಶ್ವಿ‌ನಿ ನಕ್ಷತ್ರ ಧಾರಾವಾಹಿಯಿಂದ ಇಲ್ಲಿಯವರೆಗೂ ತನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಿಕೊಳ್ಳುತ್ತಾರೆ ಮಯೂರಿ. “”ನಾನು ಮೂಲತಃ ನಿರೂಪಕಿಯಾದವಳು. ಧಾರಾವಾಹಿಗೆ ಒಗ್ಗಿಕೊಳ್ಳುವುದು ಕಷ್ಟವಾಗಿತ್ತು. ಅಷ್ಟೇ ಅಲ್ಲ, ಕೂತು ಮಾತನಾಡುವುದಕ್ಕೇ ಕಷ್ಟವಾಗುತ್ತಿತ್ತು. ಹಾಗಾಗಿ ನಿಂತೇ ಮಾತನಾಡುತ್ತಿದ್ದೆ. ಕ್ರಮೇಣ ಅದರಿಂದೆಲ್ಲಾ ಆಚೆ ಬರಬೇಕು ಅಂತನಿಸಿತು. ಕೊನೆಗೆ ಕನ್ನಡಿ ಮುಂದೆ ಪ್ರಾಕ್ಟೀಸ್‌ ಮಾಡಿ ಅಭಿನಯಿಸುತ್ತಿದ್ದೆ. ಕ್ರಮೇಣ ಕೆಲಸ ಮಾಡುತ್ತ ಮಾಡುತ್ತ ಸಹಜವಾಗಿ ನಟಿಸುವುದಕ್ಕೆ ಸಾಧ್ಯವಾಯಿತು” ಎನ್ನುತ್ತಾರೆ ಮಯೂರಿ.

ಅಶ್ವಿ‌ನಿ ನಕ್ಷತ್ರ ತನಗೆ ದೊಡ್ಡ ಮಟ್ಟದಲ್ಲಿ ಬ್ರೇಕ್‌ ನೀಡಿತು ಎಂದು ನೆನಪಿಸಿಕೊಳ್ಳುವ ಮಯೂರಿ, “”ಈಗಲೂ ನನಗೆ ಕಿರುತೆರೆಯಿಂದ ಅವಕಾಶಗಳು ಬರುತ್ತಲೇ ಇರುತ್ತದೆ. ಬರೀ ಕನ್ನಡವಷ್ಟೇ ಅಲ್ಲ, ತೆಲುಗು ಮತ್ತು ಹಿಂದಿಯಿಂದಲೂ ಅವಕಾಶಗಳು ಬರುತ್ತಿವೆ. ಕಿರುತೆರೆಯಲ್ಲಿ ನಟಿಸಬಾರದು ಅಂತೇನಿಲ್ಲ. ಆದರೆ, ಧಾರಾವಾಹಿಗಳಲ್ಲಿ ನಟಿಸಿದರೆ, ಬಲ್ಕ್ ಡೇಟ್ಸ್‌ ಕೊಡಬೇಕಾಗುತ್ತದೆ. ಒಟ್ಟಿಗೆ 15-20 ದಿನ ಡೇಟ್ಸ್‌ ಕೊಟ್ಟು ನಟಿಸಬೇಕಾಗುತ್ತದೆ. ಈಗ ಚಿತ್ರಗಳಲ್ಲಿ ಬಿಝಿ ಇರುವುದರಿಂದ, ಅಷ್ಟೊಂದು ದಿನ ಒಟ್ಟಿಗೇ ಡೇಟ್ಸ್‌ ಕೊಡುವುದು ಕಷ್ಟವಾಗುತ್ತದೆ. ಹಾಗಾಗಿ ಕಿರುತೆರೆ ಕಡೆ ಹೋಗಿಲ್ಲ. ಸದ್ಯಕ್ಕೆ ಮಜಾಭಾರತದಲ್ಲಿ ಜಡ್ಜ್ ಆಗಿದ್ದೇನೆ. ಅಶ್ವಿ‌ನಿ ನಕ್ಷತ್ರಕ್ಕಿಂತ ಮಿಗಿಲಾದದ್ದು ಏನಾದರೂ ಬಂದರೆ, ಮುಂದೊಂದು ದಿನ ಖಂಡಿತಾ ನಟಿಸುತ್ತೇನೆ” ಎನ್ನುತ್ತಾರೆ ಮಯೂರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next