Advertisement

ಆಂಗ್ಲರು ಮೆಚ್ಚುವ ಇಂಡಿಯನ್‌ ಕರಿ

06:30 AM Nov 12, 2017 | Harsha Rao |

ಭಾರತಕ್ಕೆ ಪ್ರತಿವರ್ಷ ಸುಮಾರು 8 ಲಕ್ಷ ಆಂಗ್ಲ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರತವನ್ನು ಹೆಚ್ಚು ಸಂದರ್ಶಿಸುವ ಹೊರದೇಶಿಯರಲ್ಲಿ ಬ್ರಿಟಿಷರಿಗೆ ಮೂರನೆಯ ಸ್ಥಾನ. ಬ್ರಿಟಿಷರಿಗೆ ಭಾರತ ಇಷ್ಟ ಎನ್ನಲು ಇದೊಂದು ಪುರಾವೆ.

Advertisement

ಭಾರತವನ್ನು ಸಂದರ್ಶಿಸುವ ಆಂಗ್ಲರಿಗೆ ನಮ್ಮ ಸಂಸ್ಕೃತಿ, ಹಬ್ಬಗಳು, ಚಾರಿತ್ರಿಕ ಕಟ್ಟಡಗಳು, ನೈಸರ್ಗಿಕ ಸೌಂದರ್ಯ ಕುತೂಹಲ ಹುಟ್ಟಿಸುತ್ತವೆ. ಭಾರತದಲ್ಲಿಯೇ ಪೂರ್ತಿ ಜೀವಮಾನ ಕಳೆದವರಿಗಿಂತಲೂ ಹೆಚ್ಚು ಭಾರತವನ್ನು ಸುತ್ತಿದ, ನೋಡಿದ ಆಂಗ್ಲರೂ ಇ¨ªಾರೆ. ಇನ್ನು ಭಾರತವನ್ನು ಸುತ್ತಿ ತಮ್ಮ ದೇಶಕ್ಕೆ ಮರಳಿದವರಿಗೆ ಅಥವಾ ಭಾರತದಿಂದ 5000 ಮೈಲಿ ದೂರದ ಬ್ರಿಟನ್‌ನಲ್ಲಿಯೇ ಕುಳಿತು ಭಾರತದ ಕಿರು ಅನುಭವವನ್ನು ಪಡೆಯಬೇಕೆಂದರೆ ಬ್ರಿಟನ್‌ನಲ್ಲಿ  ಸಿಗುವ  ಭಾರತೀಯ ಆಹಾರಗಳು ಸಹಾಯ ಮಾಡುತ್ತವೆ. ಅದು ಭಾರತೀಯತೆಯ ಸತ್ವ , ಶಕ್ತಿ ಮತ್ತು ಆಕರ್ಷಣೆ. ಭಾರತದಲ್ಲಿ ಕಾಣುವ ವೈವಿಧ್ಯ “ಭಾರತೀಯ’ ಎನ್ನುವ ಹೆಸರು ಪಡೆಯುವ ಆಹಾರ ತಿಂಡಿಗಳಲ್ಲಿ ಬ್ರಿಟಿಷರಿಗೆ ಸಿಗುತ್ತದೆ.

ಭಾರತದ ಬಗ್ಗೆ ಬ್ರಿಟಿಶರು ಇಷ್ಟಪಡುವ ವಿಷಯಗಳಲ್ಲಿ ಭಾರತೀಯ ಆಹಾರವೂ ಒಂದು. ಭಾರತೀಯ ಊಟವನ್ನು ಆಂಗ್ಲರ  ಭಾಷೆಯಲ್ಲಿ ಇಂಡಿಯನ್‌ ಕರಿ (Indian Curry) ಅಥವಾ ಕರಿ ಎಂದು ಕರೆಯುತ್ತಾರೆ. ಈ ಕರಿ ಎನ್ನುವ ಪದದ ಮೂಲ, ಬಳಕೆಯ ಬಗ್ಗೆ  ಇತಿಹಾಸ ಇದೆ, ಅದು ತಮಿಳಿನ ಮೂಲವೋ ಯೂರೋಪಿನ ಮೂಲವೋ ಎನ್ನುವ ಚರ್ಚೆಗಳಿವೆ ಅಥವಾ ಇನ್ನೆಲ್ಲಿಯದೋ, ಈಗ ಅದರ ಸುದ್ದಿ ಬೇಡ.

ಸಾಮಾನ್ಯವಾಗಿ, ದಿನಾ ಜೋಡಿ ಬ್ರೆಡ್‌ ಹಾಸುಗಳ ನಡುವೆ ಕೆಂಪು ಹಸಿ ಮಾಂಸದ ತೆಳು ಹಾಳೆಯನ್ನು ಇಟ್ಟು ಅದಕ್ಕೆ ಸ್ಯಾಂಡ್‌ವಿಚ್‌ ಎಂದು ನಾಮಕರಣ ಮಾಡಿ ತಿನ್ನುವವರಿಗೆ ಉಪ್ಪು-ಹುಳಿ-ಖಾರದ ತಿನಿಸು, ಜೀರಿಗೆ-ಕೊತ್ತಂಬರಿ-ಧಾನ್ಯ ಇತ್ಯಾದಿ ದ್ರವ್ಯಗಳ ಪುಡಿಯ ಹದ ಮಿಶ್ರಣದ  ಮಸಾಲೆಯ  ರುಚಿಯ ಊಟ ತಿನ್ನಿಸಿದರೆ ಇಷ್ಟ ಆಗದಿರುವುದು ಹೇಗೆ?

ಎಂತಹ  ನಿರ್ಜೀವ ನಾಲಗೆಯನ್ನೂ ಒಮ್ಮೆಗೆ  ಬಡಿದೆಬ್ಬಿಸಿ ಕುಣಿಸುವ ಶಕ್ತಿಯ ಭಾರತೀಯ ಅಡುಗೆಗಳದು.  ಭಾರತೀಯ ಅಡುಗೆಯಲ್ಲಿ ಬಳಸುವ ಮಸಾಲಾಗಳೆಂದರೆ ಆಂಗ್ಲರ ಮಟ್ಟಿಗೆ ಒಂದು  ಮಾಯಾಲೋಕ. ಬ್ರಿಟಿಷರಲ್ಲಿ ಅವರದೇ ದೇಶದ ಅವರದೇ ಸಂಸ್ಕೃತಿಯ ಅಡುಗೆ ತಿನಿಸು ಯಾವುದು ಎಂದು ಕೇಳಿದರೆ ಬಹಳ ಯೋಚನೆ ಮಾಡಬೇಕಾದೀತು. ಈ ದೇಶದ ಖಾದ್ಯವಾದ fish and chips (ಮಸಾಲೆಮಿಶ್ರಿತ ಹಿಟ್ಟಿನಲ್ಲಿ ಅದ್ದಿ ಕರಿದ ಮೀನು ಜೊತೆಗೆ ಬಟಾಟೆಯಿಂದ ಮಾಡಿದ ಫಿಂಗರ್‌ ಚಿಪ್ಸ್‌) ಆಂಗ್ಲರಲ್ಲಿ ಬಹುಜನಪ್ರಿಯ ಹೌದಾದರೂ, ಅದೊಂದು ವಿಶೇಷ ಆಹಾರವಾಗಿ ಪರಿಗಣಿಸಲ್ಪಡುವುದಿಲ್ಲ. 

Advertisement

ಭಾರತೀಯ ಊಟ ಅಥವಾ ಇಂಡಿಯನ್‌ ಕರಿ ಬ್ರಿಟಿಷರ ಪಾಲಿಗೆ ಬರೇ ಹೊಟ್ಟೆ ತುಂಬಿಸಿಕೊಳ್ಳುವ ಊಟವಲ್ಲ.  ತಮ್ಮ ಒಂದು ಖುಷಿಯ ಗಳಿಗೆ, ಹಬ್ಬದ ದಿನ ಅಥವಾ ಉತ್ಸಾಹದ ಸಮಯವನ್ನು ಕಳೆಯುವ ಮಾರ್ಗವೂ ಹೌದು ಮತ್ತು ಅವೆಲ್ಲ ಸಂದರ್ಭಗಳ ಕಳೆ ಹೆಚ್ಚಿಸುವ ಉದ್ದೀಪಕವೂ ಹೌದು. ಅವರಿಗೆ ಇಂಡಿಯನ್‌ ಕರಿ ತಿನ್ನಲು ಇಂತಹದೇ ಸಂದರ್ಭ ಆಗಬೇಕೆಂದಿಲ್ಲ. ಕಚೇರಿಯ ಕೂಟ ಇರಲಿ, ವಾರಾಂತ್ಯದ ವಿಹಾರದ ಸಮಯದಲ್ಲಿರಲಿ ಅಥವಾ ಕ್ರಿಸ್ಮಸ್‌ ನೆಪದಲ್ಲಿ ಸ್ನೇಹಿತರೋ ಸಹೋದ್ಯೋಗಿಗಳ್ಳೋ ಮಾಡುವ ಊಟವಿರಲಿ, ಭಾರತೀಯ ಹೊಟೇಲುಗಳಿಗೆ ಕರೆ ಮಾಡಿ, ಕುರ್ಚಿ ಕಾದಿರಿಸಿ ಭೋಜನ ಮಾಡುವುದು ಸಾಮಾನ್ಯ. ಬ್ರಿಟಿಶರಿಗೆ ಅತ್ಯಂತ ಪ್ರಿಯವಾದ ಹಬ್ಬಗಳನ್ನು, ಆಚರಣೆಗಳನ್ನು ಸ್ಮರಣೀಯ ಮಾಡಲು ಭಾರತೀಯ ಊಟಗಳು ಶತಮಾನಗಳಿಂದ  ಸಹಕಾರಿ ಆಗುತ್ತಲೇ ಬಂದಿವೆ. 

ಬ್ರಿಟನ್ನಿನ ಭಾರತೀಯ ಹೊಟೇಲುಗಳೆಲ್ಲ ನಾವು ನೀವು ಕರ್ನಾಟಕದಲ್ಲಿ  ನೋಡಿದ  ಕೇಳಿದ ಹೊಟೇಲುಗಳಂತೆಯೇ ಇರುತ್ತದೆಂದು ತಿಳಿಯಬೇಡಿ. ಹಾಗೂ ಇಲ್ಲಿ ಭಾರತೀಯ  ಹೊಟೇಲನ್ನು ನಡೆಸುವವರು ಭಾರತೀಯರೇ ಆಗಬೇಕೆಂದೂ ಇಲ್ಲ. ಒಂದಾನೊಂದು ಕಾಲದಲ್ಲಿ ಭಾರತೀಯರಾಗಿದ್ದ ಅಥವಾ ಅಖಂಡ ಭಾರತದ ಭಾಗವೇ ಆಗಿದ್ದ ಬಾಂಗ್ಲಾದೇಶೀಯರು ಇಲ್ಲಿನ ಹೆಚ್ಚಿನ ಭಾರತೀಯ ಹೊಟೇಲುಗಳ ಯಜಮಾನರು. ಬ್ರಿಟನ್ನಿನ 60% ಗಿಂತ ಹೆಚ್ಚಿನ ಇಂಡಿಯನ್‌ ಹೊಟೇಲುಗಳು ಬಾಂಗ್ಲಾದೇಶೀಯರ ಮಾಲಕತ್ವದಲ್ಲಿ ನಡೆಯುತ್ತವೆ. ಬ್ರಿಟನ್ನಿಗೆ ಭಾರತೀಯ ಊಟಗಳ ಪರಿಚಯ ಇಂದು ನಿನ್ನೆಯದಲ್ಲ, ನಾವು ಅವರ ವಸಾಹತು ಆಗಿದ್ದ ದಿನಗಳಿಂದಲೇ ಬ್ರಿಟಿಶರು ಇಂಡಿಯನ್‌ ಫ‌ುಡ್‌ನ‌ ಮೋಡಿಗೆ ಬಿದ್ದವರು. ಭಾರತದ  ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಇಲ್ಲಿಗೆ ಭಾರತೀಯರು ಬೇರೆ ಬೇರೆ ಕೆಲಸಕ್ಕಾಗಿ ಬಂದಿದ್ದರು. ಇನ್ನು ಹಲವರು ಅಕ್ರಮವಾಗಿ ನುಸುಳಿ ಬಂದವರೂ  ನೆಲೆನಿಂತವರೂ ಇ¨ªಾರೆ. ಅಂಥವರಲ್ಲಿ ಈಗಿನ ಬಾಂಗ್ಲಾದೇಶದವರೇ ಹೆಚ್ಚಿದ್ದರು. ಇನ್ನು 1971ರ ಬಾಂಗ್ಲಾದೇಶದ ಯುದ್ಧದ ನಂತರ ಕೆಲಸ ಹುಡುಕಿ ಬರುವವರ ಸಂಖ್ಯೆ ಕೂಡ ಹೆಚ್ಚಿತು.  ಹಾಗೆ ಬಂದ  ಹಲವರು ಮುಂದೆ ಭಾರತೀಯ ಹೊಟೇಲುಗಳನ್ನು ತೆರೆದರು. ಭಾರತೀಯ ಹೊಟೇಲುಗಳ ಜನಪ್ರಿಯತೆ ಎಷ್ಟು ಹೆಚ್ಚಿತೆಂದರೆ ಇಂಡಿಯನ್‌ ರೆಸ್ಟೋರೆಂಟ್‌ ಎಂಬುದು ದೊಡ್ಡ ಬ್ರಾಂಡ್‌ ಆಗಿ ಬೆಳೆಯಿತು. ಭಾರತದಲ್ಲಿ ದೊರೆಯುವ ರುಚಿಯ ಅಥವಾ ಅಧಿಕೃತವಾಗಿ  ಭಾರತೀಯ ಎಂದು ಕರೆಯಬಹುದಾದ ಭೋಜನಗೃಹಗಳೇ ಬೇಕೆಂದು ಹುಡುಕಹೊರಟರೆ ಅಂತಹವು  ಲಂಡನ್‌ನಲ್ಲಿ ಹೆಚ್ಚು  ಇವೆ. ಅಲ್ಲಿ ನಿಮಗೆ ಬೆಂಗಳೂರಿನ ನೆನಪು ತರಿಸುವ ಅಥವಾ ನೆನಪು ಮರೆಸುವ ದೋಸೆ-ಇಡ್ಲಿ- ಚಟ್ನಿಗಳಲ್ಲದೆ ಭಾರತದ ವಿವಿಧ ರಾಜ್ಯಗಳ ಅಪ್ಪಟ ಅಡುಗೆ ಸಿಗುತ್ತದೆ. ಬ್ರಿಟನ್ನಿನ ಕೆಲವು ಊರುಗಳಲ್ಲಿ ಒಂದೋ ಎರಡೂ ಅಂತಹ ಹೊಟೇಲುಗಳಿದ್ದು ಉಳಿದ ಹೆಚ್ಚಿನ ಊರುಗಳಲ್ಲಿನ ಭಾರತೀಯ ಖಾನಾವಳಿಗಳು ಬಾಂಗ್ಲಾ ಜನರು ನಡೆಸುವ ಇಂಡಿಯನ್‌ ಕರಿ ಹೊಟೇಲುಗಳಾಗಿವೆ.

ಆಂಗ್ಲರ ಮಟ್ಟಿಗೆ ಯಾವುದು ಅಪ್ಪಟ ಭಾರತೀಯ ಸ್ವಾದ, ಯಾವುದು ಅರ್ಧಂಬರ್ಧ ರುಚಿ, ಯಾವುದು ಮೂಲದ್ದು ಯಾವುದು ಮಾರ್ಪಾಡು ಹೊಂದಿದ್ದು ಎನ್ನುವುದು ಮುಖ್ಯ ಆಗುವುದಿಲ್ಲ. ಭಾರತೀಯ ಮಸಾಲೆಗಳಿಂದ  ತಯಾರಿಸಿದ ಮಾಂಸಾಹಾರ, ಸಸ್ಯಾಹಾರದ ಊಟವನ್ನು ಯಾವ ಹೊಟೇಲು ಬಡಿಸಿದರೂ ಅವರಿಗೆ ಆದೀತು. ಅವರಿಂದ ಪಾಪಡಮ್‌ ಎಂದು ಕರೆಸಿಕೊಳ್ಳುವ ಹಪ್ಪಳ, ಕ್ರಿಕೆಟ್‌ ಚೆಂಡಿನಂತಹ ನೀರುಳ್ಳಿ ಬಜೆ, ಆಲೂಗಡ್ಡೆ-ಬಟಾಣಿಗಳಿಂದ ತುಂಬಿದ ಅಲ್ಲದಿದ್ದರೆ ಕುರಿಯ ಮಾಂಸದ ಸಮೋಸ  ಜೊತೆಗೆ ಬ್ರಿಟನ್ನಿನ ಅತ್ಯಂತ ಜನಪ್ರಿಯ ಆಹಾರ ಪದಾರ್ಥ ಎಂದು ಹೆಸರು ಪಡೆದ ಚಿಕನ್‌ ಟಿಕ್ಕಾ ಮಸಾಲಾ ಸಿಕ್ಕಿದರೆ ಯಾವ ಹೊಟೇಲೂ ಅವರಿಗೆ ಇಷ್ಟವಾದೀತು. ಬ್ರಿಟನ್ನಿನ ಎಲ್ಲ ಊರುಗಳಲ್ಲೂ ಅತ್ಯಂತ ಜನಪ್ರಿಯತೆ ಪಡೆದಿರುವ  ಚಿಕನ್‌ ಟಿಕ್ಕಾ ಮಸಾಲಾವನ್ನು ಬ್ರಿಟನ್ನಿನ ರಾಷ್ಟ್ರೀಯ ಆಹಾರ ಪದಾರ್ಥ ಎಂದು ವರ್ಣಿಸುತ್ತಾರೆ. ಬ್ರಿಟನ್ನಿನ ಯಾವ ಮೂಲೆಗೆ ಹೋದರೂ ನಿಮಗೆ ಚಿಕನ್‌ ಟಿಕ್ಕಾ ಮಸಾಲಾದ ಪ್ರೇಮಿಗಳು ಸಿಗುತ್ತಾರೆ. ಬ್ರಿಟಿಷರು ಭಾರತೀಯರಿಗಿಂತ ಹೆಚ್ಚು ಭಾರತ ಮೂಲದ ಅಡುಗೆಯ “ಚಿಕನ್‌ ಟಿಕ್ಕಾ’ ಮಸಾಲವನ್ನು ಸ್ನೇಹ ಪ್ರೀತಿ ಬೆಳೆಸಿ¨ªಾರೆ! 

ಇಂಡಿಯನ್‌ ರೆಸ್ಟೋರಂಟ್‌ಗಳ ಈ ಪ್ರಸಿದ್ಧಿ ಆಂಗ್ಲ ಸಂಪ್ರದಾಯದ ಮತ್ತು ಆಂಗ್ಲರ ಭಾಷೆಯಲ್ಲಿ  ಹೇಳುವಂತೆ ಬೋರಿಂಗ್‌ ಊಟ ನೀಡುವ ಇಂಗ್ಲಿಷ್‌ ಹೊಟೇಲುಗಳನ್ನು ಚಿಂತೆಗೆ ಈಡು ಮಾಡುತ್ತವೆ. ಆ ಕಾರಣಕ್ಕೆ ಇಂಡಿಯನ್‌ ರೆಸ್ಟೋರೆಂಟ್‌ ಎನ್ನುವ ಬ್ರಾಂಡ್‌ ಇರದ ಪಕ್ಕಾ ಬ್ರಿಟಿಷ್‌ ಹೊಟೇಲುಗಳೂ ಈಗ ಕೆಲ ಭಾರತೀಯ ಅಡುಗೆಯನ್ನು  ಕಲಿತು, ತಮ್ಮ ಲಭ್ಯ ತಿನಿಸುಗಳ ಪಟ್ಟಿಯಲ್ಲಿ ಸೇರಿಸಿಕೊಂಡಿ¨ªಾರೆ. ನೀರಸ ಊಟ ನೀಡುವವರು  ಎಂದು ಬ್ರಿಟಿಷರ ವ್ಯಂಗ್ಯಕ್ಕೆ ಗುರಿ ಆಗುತ್ತಿದ್ದ ಹೊಟೇಲುಗಳು ಈಗ ವಾರಕ್ಕೆ ಒಂದೋ ಎರಡೋ ಬಾರಿ ಭಾರತೀಯ ಊಟದ ಪದಾರ್ಥಗಳನ್ನು ತಯಾರಿಸಿ ಬ್ರಿಟಿಷರಿಂದ ಸೈ ಎನಿಸಿಕೊಳ್ಳುತ್ತಿವೆ. 

ನಾನು ಕೆಲಸ ಮಾಡುವ ಏರ್‌ಬಸ್‌ ಕಂಪೆನಿಯ ಕ್ಯಾಂಟೀನ್‌ನಲ್ಲೂ ವಾರಕ್ಕೊಮ್ಮೆ ಮಧ್ಯಾಹ್ನದ ಊಟಕ್ಕೆ ಭಾರತೀಯ ಊಟ ದೊರೆಯುತ್ತದೆ. ಭಾರತೀಯ ಅಡುಗೆಯ ಸಂಕೀರ್ಣ ಕಲೆ ಆಂಗ್ಲ ಹೊಟೇಲುಗಳ ಅಡಿಗೆಯವರಿಗೆ ಸಿದ್ಧಿಸದಿದ್ದರೂ, ಅಂತಹ ಹೊಟೇಲುಗಳಲ್ಲಿ ತಯಾರಾಗುವ ಅಡುಗೆ ಪೂರ್ತಿ ಭಾರತೀಯ ರುಚಿ ಅಲ್ಲದಿದ್ದರೂ,  ಅಲ್ಲಿ ಹೋಗಿ ಹೆಚ್ಚಾಗಿ ತಿನ್ನುವವರು ಬ್ರಿಟಿಷರೇ ಆಗಿರುವುದರಿಂದ ಅಲ್ಪಸ್ವಲ್ಪ ಭಾರತೀಯ ಅಡುಗೆಯನ್ನು ಹೋಲುವ ಪದಾರ್ಥಕ್ಕೇ  ಗ್ರಾಹಕರು  ಸಂತುಷ್ಟರಾಗುತ್ತಾರೆ. ಮತ್ತೆ ಅವರ ಅಂದಿನ ಮಧ್ಯಾಹ್ನದ ಊಟವೋ ಸಂಜೆಯ ಕೂಟವೋ ಸಾರ್ಥಕ ಎಂದು ಭಾವಿಸುತ್ತಾರೆ. ಮುಂದಿನ ಇಂಡಿಯನ್‌ ಕರಿ ಊಟ ಎಂದು ಒದಗುವುದೋ ಎಂದು ಕಾಯುತ್ತಾರೆ. 

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next