Advertisement

ದೈನಂದಿನ ದಿನಚರಿಯಲ್ಲೇ ಭಾರತೀಯ ಸಂಸ್ಕೃತಿ

05:47 AM Dec 30, 2018 | |

ಮೈಸೂರು: ಭಾರತೀಯತೆ ಎಂದರೆ ಏನು ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದರೆ, ಜನರನ್ನು ಸಂಬೋಧಿಸಲು ನಮಸ್ಕಾರ ಎಂದು ಕೈ ಜೋಡಿಸುವುದು, ಹಿರಿಯರ ಆಶೀರ್ವಾದ ಪಡೆಯುವುದು ಇವೇ ಮೊದಲಾದ ಸಂಗತಿಗಳನ್ನು ಭಾರತೀಯರು ನಮ್ಮ ದೈನಂದಿನ ದಿನಚರಿಯಲ್ಲಿ ಮೈಗೂಡಿಸಿಕೊಂಡಿದ್ದೇವೆ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಹೇಳಿದರು.

Advertisement

ಅಖೀಲ ಭಾರತೀಯ ಸಾಹಿತ್ಯ ಪರಿಷದ್‌, ಕರ್ನಾಟಕ ಘಟಕ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ಆಯೋಜಿಸಿರುವ ಸಾಹಿತ್ಯದಲ್ಲಿ ಭಾರತೀಯತೆ ವಿಷಯ ಕುರಿತ ಎರಡು ದಿನಗಳ 2ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯತೆ: ನಮ್ಮ ಸಂಸ್ಕೃತಿಯಲ್ಲಿ ಜನರನ್ನು ಸಂಬೋಧಿಸಲು ನಮಸ್ಕಾರ ಎನ್ನುತ್ತೇವೆ. ದೇಶದ ಉದ್ದಗಲಕ್ಕೂ ಅವರದೇ ಆದ ಭಾಷೆಗಳಲ್ಲಿ ಈ ಭಾವನೆ ಅಭಿವ್ಯಕ್ತವಾಗುತ್ತದೆ. ಯಾವುದೇ ವ್ಯಕ್ತಿ ಎದುರಿಗೆ ಸಿಕ್ಕಾಗ ನಮ್ಮ ಅಹಂಕಾರವನ್ನು ಬಿಟ್ಟು ಕೈಜೋಡಿಸಿ ನಮಸ್ಕಾರ ಎನ್ನುತ್ತೇವೆ. ಯಾವುದೇ ಮತ, ಪ್ರಾಂತ್ಯದವರಾಗಲಿ, ಬುಡಕಟ್ಟು ಜನರು ಸೇರಿದಂತೆ ಎಲ್ಲ ವರ್ಗದ ಜನರೂ ಹಿರಿಯರ ಆಶೀರ್ವಾದ ಪಡೆಯುತ್ತಾರೆ ಇದು ಕೂಡ ಭಾರತೀಯತೆ ಎಂದು ಪ್ರತಿಪಾದಿಸಿದರು.

ಮೂಲಭಾಷೆ ಸಂಸ್ಕೃತ: ರಾಮಾಯಣ, ಮಹಾಭಾರತ, ಋಗ್ವೇದ ಕಾಲದಿಂದ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಎಲ್ಲಾ ಭಾಷೆಗಳಿಗೂ ಮೂಲವಾದ ಸಂಸ್ಕೃತ ಇಂತಹ ಉತ್ಕೃಷ್ಟ ಸಂಗತಿಗಳನ್ನು ಹೇಳಿಕೊಟ್ಟಿದೆ. ಇಂತಹ ಸಂಸ್ಕೃತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವಾಗಬೇಕಿದೆ ಎಂದ ಅವರು, ಯದುವಂಶದ ಪ್ರತಿನಿಧಿಯಾಗಿ ಈ ಸಮ್ಮೇಳನದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಪರಿಷದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್‌ ಮಿಶ್ರಾ, ರಾಷ್ಟ್ರವಾದಿ ಸಾಹಿತ್ಯಿಕ ಸಂಘಟನೆಯಾಗಿರುವ ಅಖೀಲ ಭಾರತೀಯ ಸಾಹಿತ್ಯ ಪರಿಷದ್‌, ರಾಷ್ಟ್ರೀಯ ವಿಚಾರಧಾರೆಯ ಸ್ಮರಣೆ, ಪೋಷಣೆ, ಪುನರುತ್ಥಾನಕ್ಕಾಗಿ ಕೆಲಸ ಮಾಡುತ್ತಾ ಬಂದಿದೆ. ಇಂದಿನ ಪರಿಸ್ಥಿತಿಯಲ್ಲಿ ಜೀವನ ಮೌಲ್ಯ, ಭಾರತೀಯ ವಿಚಾರಧಾರೆಗಳನ್ನು ಪುನಸ್ಮರಣೆ ಮಾಡಬೇಕಾದ ಅಗತ್ಯವಿದೆ ಎಂದರು.

Advertisement

ಸರ್ವಧರ್ಮ ಸಹಿಷ್ಣುತೆ: ಅಖೀಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಅಧ್ಯಕ್ಷರಾದ ಕವಿ ಡಾ.ದೊಡ್ಡ ರಂಗೇಗೌಡ ಅವರು ಮಾತನಾಡಿ, ರಾಷ್ಟ್ರೀಯ ಭಾವೈಕ್ಯ, ಸಾಹಿತ್ಯದಲ್ಲಿ ಭಾರತೀಯತೆ ಇದೆಯೇ ಎಂಬುದನ್ನು ಹುಡುಕುವುದು ಕಷ್ಟದ ಕೆಲಸ. ಆದರೆ, ಭಾರತ 5 ಸಾವಿರ ವರ್ಷಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸರ್ವಧರ್ಮ ಸಹಿಷ್ಣುತೆಯನ್ನು ಕಾಪಾಡಿಕೊಂಡು ಬಂದಿದೆ.

ನಮ್ಮ ಜಾನಪದ, ವಚನಕಾರರು, ಕೀರ್ತನಕಾರರ ಪರಂಪರೆಯನ್ನು ಗಮನಿಸಿದರೆ ಸಾಹಿತ್ಯದಲ್ಲಿ ಸಾಮರಸ್ಯ ಕಾಣಬಹುದು. ಮಹಾ ಕವಿ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಎಂಬ ವಿಷಯದಲ್ಲಿ ನಂಬಿಕೆಯಿಟ್ಟು ಅಖೀಲ ಭಾರತೀಯ ಸಾಹಿತ್ಯ ಪರಿಷದ್‌ ಸಾಗುತ್ತಿದೆ ಎಂದು ಹೇಳಿದರು. ಎಲ್ಲ ಸಾಹಿತಿಗಳು ಒಂದೆಡೆ ಸಾಗುತ್ತಿದ್ದರೆ, ಊರಿದ್ದಲ್ಲಿ ಇನ್ನೇನೋ ಇದೆ ಎನ್ನುವಂತೆ ಒಬ್ಬಿಬ್ಬರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದರೂ ಅದು ಗೌಣ ಎಂದರು.

ಸತ್ಯ ಜ್ವಲಿಸಲಿದೆ: ಆಂಗ್ಲರ ಆಡಳಿತದಲ್ಲೇ ಭಾರತೀಯರು ತಮ್ಮ ಪರಂಪರೆ, ಸಂಸ್ಕೃತಿಯನ್ನು ಬಿಟ್ಟು ಕೊಟ್ಟಿಲ್ಲ. ನಾವು ಭಾರತೀಯರು ಎಂಬ ಸತ್ಯ ಜ್ವಲಿಸುತ್ತದೆ. ಸಾಹಿತ್ಯದಲ್ಲಿ ಭಾರತೀಯತೆ ನಮ್ಮನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸುವುದನ್ನು ವಚನಕಾರರು, ಕೀರ್ತನಕಾರರು, ಸರ್ವಜ್ಞನ ವಚನಗಳಲ್ಲಿ ಕಾಣಬಹುದು ಎಂದು ಹೇಳಿದರು.

ಪರಿಷದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್‌, ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಪ್ರೇಮಶೇಖರ ಮಾತನಾಡಿದರು. ಅಭಾಸಾಪ ಮೈಸೂರು ಘಟಕದ ಅಧ್ಯಕ್ಷ ಸಾತನೂರು ದೇವರಾಜ್‌, ಪ್ರಧಾನ ಕಾರ್ಯದರ್ಶಿ ಈ.ಸಿ.ನಿಂಗರಾಜ್‌ ಗೌಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ವಾಗೆªàವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹರೀಶ ಕೆ. ಹಾಗೂ ಉದ್ಯಮಿ ಜೆ.ಕೆ.ಜಯರಾಮ್‌ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next