ನಗರ: ಸಂಸ್ಕೃತಿಯ ಉಳಿವು ಮತ್ತು ಮುಂದಿನ ಪೀಳಿಗೆಗೆ ಬದುಕಿನ ಮಾಧುರ್ಯಗಳನ್ನು ಬಿಂಬಿಸುವ ಯಕ್ಷಗಾನಕ್ಕೆ ದೀರ್ಘ ಇತಿಹಾಸವಿದೆ. ಯಕ್ಷಗಾನ ತಾಳಮದ್ದಳೆಯಿಂದ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಹೇಳಿದರು. ಪುತ್ತೂರಿನ ಶ್ರೀ ನಟರಾಜ ವೇದಿಕೆಯಲ್ಲಿ 3ಎಜಿ ಟ್ರಸ್ಟ್ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಅವಿನಾಭವ ಸಂಬಂಧ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಯಕ್ಷಗಾನಕ್ಕೂ ಅವಿನಾಭವ ಸಂಬಂಧ. ದೇಗುಲ ವಠಾರದಲ್ಲಿ
ಯಕ್ಷಗಾನ ಬಯಲಾಟ, ತಾಳಮದ್ದಳೆ ಸಪ್ತಾಹ ಸೇರಿದಂತೆ ಅಪರೂಪದ ಕಲಾಪ ನಡೆಯುತ್ತಿರುವುದು ಪುತ್ತೂರಿಗೆ ಹೆಮ್ಮೆಯ ವಿಚಾರ ಎಂದರು.
ನಿವೃತ್ತ ಸೈನಿಕ ರಮೇಶ ಬಾಬು, ರಾಗಸುಧಾದ ಪ್ರೀತಂ ಪುತ್ತೂರಾಯ, ಕಲಾವಿದರಾದ ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಸುಬ್ರಾಯ ಸಂಪಾಜೆ ಉಪಸ್ಥಿತರಿದ್ದರು. ಎಂಜಿನಿಯರ್ ಪಿ. ಜಿ. ಜಗನ್ನಿವಾಸ ರಾವ್, ಭಾಗವತ ರಮೇಶ ಭಟ್ ಪುತ್ತೂರು ಅತಿಥಿಗಳನ್ನು ಗೌರವಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ಸ್ವಾಗತಿಸಿ, ನಿರೂಪಿಸಿದರು.
ಮೊದಲ ಕಾರ್ಯಕ್ರಮ ‘ರಾವಣ ವಧೆ’ ಪ್ರಸಂಗದೊಂದಿಗೆ ಪ್ರಸ್ತುತಗೊಂಡಿತು. ಸುಬ್ರಾಯ ಸಂಪಾಜೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪಿ.ಜಿ. ಜಗನ್ನಿವಾಸ ರಾವ್, ಹಿಮ್ಮೇಳದಲ್ಲಿ ಲವಕುಮಾರ್ ಐಲ, ಅರ್ಥದಾರಿಗಳಾಗಿ ಅಶೋಕ ಭಟ್ ಉಜಿರೆ, ಸುಣ್ಣಂಬಳ ವಿಶ್ವೇಶ್ವರ ಭಟ್, ನಾ. ಕಾರಂತ ಪೆರಾಜೆ, ಭಾಸ್ಕರ ಬಾರ್ಯ ಭಾಗವಹಿಸಿದ್ದರು.