ಮುಂಬೈ: ನವೆಂಬರ್‌ನಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ ತೆರಳುವುದು ಖಚಿತವಾಗಿದೆ. ಆದರೆ ಅಲ್ಲಿಗೆ ಆಟಗಾರರು ಕುಟುಂಬ ಸದಸ್ಯರನ್ನು ಕರೆತರಲು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ನಿರಾಕರಿಸಿದೆ.
ಇದು ಬಿಸಿಸಿಐಗೆ ಇಕ್ಕಟ್ಟು ಸೃಷ್ಟಿಸಿದೆ. ಆಟಗಾರರಿಗೆ ಪತ್ನಿಯರನ್ನು ಒಯ್ಯದಿರಲು ಮನಸ್ಸಿಲ್ಲ. ಹಾಗಂತ ಪ್ರವಾಸಕ್ಕೆ ತೆರಳದಿರಲು ನಿರಾಕರಿಸಿದರೆ, ಮುಂದಿನ ಪ್ರವಾಸಕ್ಕೆ ಆಯ್ಕೆಯಾಗದಿರುವ ಭೀತಿಯೂ ಇದೆ. ಇದರ ನಡುವೆ ಆಸೀಸ್ ಪ್ರವಾಸಕ್ಕೆ ಸಿದ್ಧತೆ ನಡೆದಿದೆ.
ಇದೇ ವೇಳೆ ಎರಡೂವರೆ ತಿಂಗಳಷ್ಟು ದೀರ್ಘಕಾಲ ಜೈವಿಕ ಸುರಕ್ಷಾ ವಲಯದಲ್ಲೇ ಇರಬೇಕಾಗಿರುವುದರಿಂದ, ಕ್ರೀಡಾ ಮನಃಶಾಸ್ತ್ರಜ್ಞರು, ಯೋಗ ತರಬೇತುದಾರರ ಅಗತ್ಯವಿದೆ ಎಂದು ತಂಡದ ಆಡಳಿತ ಬಿಸಿಸಿಐಗೆ ತಿಳಿಸಿದೆ.
ಇದಕ್ಕೆ ಬಿಸಿಸಿಐ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಆರಂಭದಲ್ಲಿ ಸಿಡ್ನಿಗೆ ತೆರಳಲಿರುವ ಭಾರತೀಯ ತಂಡ ಅಲ್ಲಿ 14 ದಿನಗಳು ಪ್ರತ್ಯೇಕವಾಸದಲ್ಲಿರಲಿದೆ. ಒಂದು ವಾರ ಕಳೆದ ನಂತರ ತರಬೇತಿ ಆರಂಭಿಸಲಿದೆ.
ಐಪಿಎಲ್ ಮುಗಿದ ನಂತರ ಭಾರತ ತಂಡ ನೇರವಾಗಿ ಆಸೀಸ್ ಗೆ ಪ್ರಯಾಣ ಬೆಳಸಲಿದೆ. ಆಸೀಸ್ ವಿರುದ್ಧ ಭಾರತ ನಾಲ್ಕು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.
ಭಾರತ ತಂಡ ಆಸ್ಟ್ರೇಲಿಯಕ್ಕೆ ತೆರಳಿ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ ಆಡಲಿದ್ದು, 32 ಸದಸ್ಯರ ಜಂಬೋ ತಂಡ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿದೆ. ಇದರಲ್ಲಿ ಗಾಯಾಳು ಪೇಸ್ ಬೌಲರ್ ಗಳಾದ ಇಶಾಂತ್ ಶರ್ಮ ಮತ್ತು ಭುವನೇಶ್ವರ್ ಕುಮಾರ್ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.