ಹೊಸದಿಲ್ಲಿ: ಟಿ20 ವಿಶ್ವಕಪ್ 2024 ಗೆದ್ದ ಭಾರತ ತಂಡ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ. ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಸೇರಿ ಆಟಗಾರರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿದರು.
ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನವದೆಹಲಿಗೆ ಬಂದಿಳಿದ ಭಾರತೀಯ ತಂಡವು ಐಟಿಸಿ ಮೌರ್ಯ ಹೋಟೆಲ್ ಗೆ ತೆರಳಿತ್ತು. ಹೋಟೆಲ್ ನಲ್ಲಿ ಅಭೂತಪೂರ್ವ ಸ್ವಾಗತ ಪಡೆದ ರೋಹಿತ್ ಬಳಗವು, ನೃತ್ಯ ಮಾಡಿ ಸಂಭ್ರಮಿಸಿತು. ಹೋಟೆಲ್‌ನಲ್ಲಿ ವಿಶೇಷ ಕೇಕ್ ಕತ್ತರಿಸಿದರು. ಬಳಿಕ ಅಲ್ಲಿಂದ ತಂಡದ ಬಸ್ ನಲ್ಲಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ತೆರಳಿತು.
ಮಧ್ಯಾಹ್ನ 1:00 ಗಂಟೆಗೆ ಭಾರತೀಯ ತಂಡವು ಪ್ರಧಾನಿ ಮೋದಿಯವರ ನಿವಾಸದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದರು, ಅಲ್ಲಿಂದ ಅವರು ಮುಂದಿನ ಸುತ್ತಿನ ಸಂಭ್ರಮಾಚರಣೆಗಾಗಿ ಮುಂಬೈಗೆ ಹಾರಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋಚ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಟಿ20 ವಿಶ್ವಕಪ್ ಹಿಡಿದ ಫೋಟೋ ವೈರಲ್ ಆಗಿದೆ. ಪ್ರಧಾನಿ ಜೊತೆಗಿನ ಮಾತುಕತೆಯ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಜೊತೆಗಿದ್ದರು. ವೇಳಾಪಟ್ಟಿಯ ಪ್ರಕಾರ, ಭಾರತ ತಂಡದ ಉಪಹಾರವನ್ನು ಪ್ರಧಾನಿ ಮೋದಿಯೊಂದಿಗೆ ಯೋಜಿಸಲಾಗಿತ್ತು.
ಕಳೆದ ಶನಿವಾರದ ಫೈನಲ್ ಪಂದ್ಯದ ನಂತರ ಪ್ರಧಾನಿ ಮೋದಿಯವರು ತಂಡದ ಆಟಗಾರರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದರು.