Advertisement
ಈ ಬಾರಿಯ ಐಪಿಎಲ್‌ನಲ್ಲಿ ಈ ಎಳೆಯರು ಖಂಡಿತವಾಗಿ ದೊಡ್ಡ ಸದ್ದು ಮಾಡುತ್ತಾರೆ ಎಂಬ ಅರಿವಿದ್ದೇ ತರಬೇತುದಾರ ರಾಹುಲ್ ದ್ರಾವಿಡ್, “ಐಪಿಎಲ್ ಹರಾಜು ಪ್ರತಿವರ್ಷ ಇರುತ್ತೆ. ಆದರೆ, ವಿಶ್ವಕಪ್ ಗೆಲ್ಲುವಂಥ ಉಜ್ವಲ ಅವಕಾಶ ಸಿಗುವುದು ವಿರಳ’ ಎಂದು ಕಿವಿಮಾತು ಹೇಳಿದರು. ಎಲ್ಲ ಆಟಗಾರರೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ, ಆಟದ ಮೇಲೆ ಗಮನ ಕೇಂದ್ರೀಕರಿಸುವಂತೆ ಮಾಡಿದ್ದರು. ಅದರ ಫಲ ಈಗ ಕಣ್ಣ ಮುಂದಿದೆ.
ಶಾ, ಆರು ಪಂದ್ಯಗಳಿಂದ 16 ವಿಕೆಟ್ ಬೇಟೆಯಾಡಿದ ಅನುಕೂಲ್ ರಾಯ್, 145 ಕಿ.ಮೀ. ವೇಗದಲ್ಲಿ ಬೆಂಕಿ ಚೆಂಡುಗಳನ್ನೆಸೆದ ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ – ಇಶಾನ್ ಪೋರೆಲ್ ಸ್ಪಿನ್ ಮೋಡಿಗೆ ಜಗತ್ತೇ ನಿಬ್ಬೆರಗಾಯಿತು. ವಿದೇಶಿ ಪಿಚ್‌ಗಳಲ್ಲಿ ಆಡುವುದು ಭಾರತೀಯರಿಗೆ ತುಸು ಕಷ್ಟವೇ. ಇಂಥ ಸನ್ನಿವೇಶದಲ್ಲಿ ಎರಡು ವಾರ ಮೊದಲೇ ನ್ಯೂಜಿಲ್ಯಾಂಡ್‌ಗೆ ತೆರಳಿ, ಮೂರು ಅಭ್ಯಾಸ ಪಂದ್ಯಗಳನ್ನಾಡಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಜತೆಗೆ ಸತತ ಪರಿಶ್ರಮದಿಂದ ದ್ರಾವಿಡ್ ಪಡೆ ಮಾಡಿದ ಸಾಧನೆ ಉಲ್ಲೇಖನೀಯ.
Related Articles
Advertisement
ಕಿರಿಯರ ಸಾಧನೆಗೆ ಸ್ಫೂರ್ತಿಯಾದ ದ್ರಾವಿಡ್ ಹಿರಿಯರ ತಂಡದ ತರಬೇತುದಾರ ಆಗಬೇಕೆಂಬ ಆಗ್ರಹ ಈಗ ವ್ಯಕ್ತವಾಗುತ್ತಿದೆ. ಆದರೆ, ಕಠಿನ ಪರಿಶ್ರಮ ಒಲ್ಲದ, ವಿದೇಶಿ ಟೂರ್ನಿಗಳೆಂದರೆ ಪತ್ನಿ- ಪ್ರೇಯಸಿಯೊಂದಿಗೆ ಸುತ್ತಾಡುತ್ತ ಶಾಪಿಂಗ್ ಮಾಡುವ ಅವಕಾಶಗಳೆಂದು ನಂಬಿರುವ ಹಾಗೂ ತಾವು ಕಲಿಯುವುದೇನೂ ಉಳಿದಿಲ್ಲ ಎಂಬ ಭ್ರಮೆಯಲ್ಲಿರುವ ಸ್ಟಾರ್ ಆಟಗಾರರು ತಾಳ್ಮೆಯ ಮೂರ್ತಿಯೇ ಆಗಿರುವ ದ್ರಾವಿಡ್ ಮಾತು ಕೇಳುವರೇ? ಆಟಗಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆನ್ನುವ ಕಾರಣಕ್ಕೇ ಅಲ್ಲವೇ ರವಿಶಾಸಿŒಗೆ ಮಣೆ ಹಾಕಿದ್ದು?
ಐಪಿಎಲ್‌ನ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ರಹಾನೆ, ಜಡೇಜಾ ಮೊದಲಾದವರೀಗ ರಾಷ್ಟ್ರೀಯ ತಂಡದಲ್ಲಿ ಮಿಂಚುತ್ತಿದ್ದಾರೆ. ಕಿರಿಯರ ತಂಡಕ್ಕೆ ತರಬೇತಿ ನೀಡುವುದು ದ್ರಾವಿಡ್ ಆಯ್ಕೆ. ಪ್ರತಿಭೆಗಳನ್ನು ಗುರುತಿಸಿ, ಅವಕಾಶ ನೀಡಿ, ಶುದ್ಧ ಹಾಗೂ ಶಿಸ್ತುಬದ್ಧ ಕ್ರಿಕೆಟ್ ಆಡುವಂತೆ ಪ್ರೇರೇಪಿಸುವ ಅವರು, ಸೋತಾಗ ಸಿಡಿಮಿಡಿಗೊಳ್ಳದೆ ಯಶಸ್ಸಿನ ಪಾಠ ಹೇಳಿಕೊಡು ತ್ತಾರೆ. ಪ್ರಶಂಸೆಯ ಸುರಿಮಳೆಯೇ ಆಗುತ್ತಿದ್ದರೂ ಅವುಗಳನ್ನೂ ಸಮಚಿತ್ತ ದಿಂದಲೇ ಸ್ವೀಕರಿಸುವ ದ್ರಾವಿಡ್ ಯುವ ಕ್ರಿಕೆಟಿಗರಿಗೆ ಪರಮಗುರು. ಅವರ ಗರಡಿಯಲ್ಲಿ ವಿಶ್ವ ದರ್ಜೆಯ ಕ್ರಿಕೆಟಿಗರು ಮೂಡಿ ಬರುತ್ತಾರೆಂದು ವಿಶ್ವಾಸದಿಂದ ಹೇಳಬಹುದು.