Advertisement

ಭಾರತ ಕ್ರಿಕೆಟ್‌ ಕೋಚ್‌ ವಿವಾದಕ್ಕೆ ನಾಳೆ ಮುಕ್ತಿ?

03:55 AM Jul 09, 2017 | |

ಭಾರತೀಯ ಕ್ರಿಕೆಟ್‌ ಮಟ್ಟಿಗಿನ ಒಂದು ಮಹತ್ವದ ಅಧ್ಯಾಯ ಸೋಮವಾರದಿಂದ ಆರಂಭವಾಗಲಿದೆ. ಬಹುದಿನಗಳಿಂದ ವಾದವಿವಾದಕ್ಕೆ ಕಾರಣವಾಗಿದ್ದ ಕೋಚ್‌ ಆಯ್ಕೆ ಗೊಂದಲ ಮುಗಿಯಲಿದೆ. ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಬಿಸಿಸಿಐನ ಉನ್ನತ ಸಲಹಾ ಸಮಿತಿ ನೂತನ ಕೋಚ್‌ ಆಯ್ಕೆ ಮಾಡಲಿದೆ. ವಿಶ್ವ ಕ್ರಿಕೆಟ್‌ನ ಈ ಮಾಜಿ ದಿಗ್ಗಜರು ನೂತನ ಕೋಚ್‌ ಆಯ್ಕೆ ಮಾಡುವ ಮೂಲಕ ಭಾರೀ ತಿಕ್ಕಾಟವೊಂದಕ್ಕೆ ಮುಕ್ತಾಯ ಹಾಡಲಿದ್ದಾರೆ.

Advertisement

ಮೊನ್ನೆಯಷ್ಟೇ ಇಂಗ್ಲೆಂಡ್‌ನ‌ಲ್ಲಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಮುಗಿದ ನಂತರ ಕೋಚ್‌ ಹುದ್ದೆಗೆ ಅನಿಲ್‌ ಕುಂಬ್ಳೆ ರಾಜೀನಾಮೆ ನೀಡಿದ್ದರು. ಕೊಹ್ಲಿಗೆ ಇಷ್ಟವಿಲ್ಲವೆಂದು ಬಿಸಿಸಿಐ ತಿಳಿಸಿದ್ದರಿಂದಲೇ ತಾನು ಈ ಕ್ರಮ ತೆಗೆದುಕೊಂಡಿದ್ದೇನೆಂದೂ ತಿಳಿಸಿದ್ದರು. ಈ ಬಗ್ಗೆ ತಿಂಗಳಾನುಗಟ್ಟಲೇ ಭಾರೀ ವಿವಾದ ನಡೆದಿತ್ತು. ನಾಯಕ ಕೊಹ್ಲಿ ಮತ್ತು ಕುಂಬ್ಳೆ ನಡುವೆ ಭಿನ್ನಮತ ತಾರಕ್ಕೇರಿತ್ತು ಎನ್ನುವುವುದು ತಡವಾಗಿ ಬೆಳಕಿಗೆ ಬಂತು. ಕುಂಬ್ಳೆ ರಾಜೀನಾಮೆ ನಂತರ ಭಾರತಕ್ಕೆ  ಹೊಸ ಕೋಚ್‌ ಹುಡುಕಾಟ ಅನಿವಾರ್ಯವಾಯಿತು.

ಯಾರ್ಯಾರಿದ್ದಾರೆ ಕಣದಲ್ಲಿ?: ಭಾರತ ಕ್ರಿಕೆಟ್‌ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ, ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹವಾಗ್‌, ಟಿ20 ವಿಶ್ವಕಪ್‌ ಗೆದ್ದ ವೆಸ್ಟ್‌ ಇಂಡೀಸ್‌ ತಂಡದ ಕೋಚ್‌ ಆಗಿದ್ದ ಫಿಲ್‌ ಸಿಮನ್ಸ್‌, ವಿಶ್ವದ ಪ್ರಮುಖ ತಂಡಗಳಿಗೆ ಕೋಚ್‌ ಆಗಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾದ ಟಾಮ್‌ ಮೂಡಿ ಕಣದಲ್ಲಿದ್ದಾರೆ. ಈ ನಾಲ್ವರ ಪೈಕಿ ರವಿಶಾಸ್ತ್ರಿ ಮತ್ತು ವೀರೇಂದ್ರ ಸೆಹವಾಗ್‌ ಮೇಲೆ ಎಲ್ಲರ ನಿರೀಕ್ಷೆಯಿದೆ. ಬಹುತೇಕ ರವಿಶಾಸ್ತ್ರಿ ಆಯ್ಕೆಯಾಗಬಹುದೆಂದು ಊಹಿಸಲಾಗಿದೆ.

ರವಿಶಾಸ್ತ್ರಿ ಆಯ್ಕೆಯಾಗುವುದು ಖಚಿತ?
ಭಾರತ ಕ್ರಿಕೆಟ್‌ ತಂಡ ಮಾಜಿ ನಿರ್ದೇಶಕ ರವಿಶಾಸ್ತ್ರಿ. ಮಾಜಿ ನಾಯಕರೂ ಹೌದು. ಸ್ಫೋಟಕ ಕ್ರಿಕೆಟಿಗನಾಗಿ ಹೆಸರುವಾಸಿ. ವೀಕ್ಷಕ ವಿವರಣೆಕಾರರಾಗಿ ಸದ್ಯ ಕಾರ್ಯನಿರ್ವಹಣೆ.
ಸಾಮರ್ಥ್ಯವೇನು?
-ಭಾರತ ತಂಡ ಇಕ್ಕಟ್ಟಿಗೆ ಸಿಕ್ಕಿದಾಗ ರವಿಶಾಸ್ತ್ರಿ ನೆರವಿಗೆ ಬಂದಿದ್ದಾರೆ. 2015-16ರಲ್ಲಿ ಇವರನ್ನು ಹಠಾತ್ತನೆ ತಂಡದ ನಿರ್ದೇಶಕರಾಗಿ ನೇಮಿಸಿದಾಗ ಯಶಸ್ವಿ ಫ‌ಲಿತಾಂಶವನ್ನೇ ನೀಡಿದ್ದರು.
-ಇವರ ಅವಧಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿಯನ್ನು ವೈಟ್‌ವಾಷ್‌  ಮಾಡಿತ್ತು. 2015ನೇ ಏಕದಿನ ವಿಶ್ವಕಪ್‌ ಮತ್ತು 2016ರ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೇರಿತ್ತು.
-ರವಿಶಾಸ್ತ್ರಿಗೆ ಸಚಿನ್‌ ತೆಂಡುಲ್ಕರ್‌ ಬಲವಾದ ಬೆಂಬಲವಿರುವುದರಿಂದ ಆಯ್ಕೆ ಹಾದಿ ಅರ್ಧ ಸುಗಮವಾಗಿದೆ. ನಾಯಕ ಕೊಹ್ಲಿ ಬೆಂಬಲವೂ ಇರುವುದು ಬಹುತೇಕ ಖಾತ್ರಿಯಾಗಿದೆ.
ಸಮಸ್ಯೆಯೇನು?
-ಸೆಹವಾಗ್‌ ಅವರು ಕೋಚ್‌ ಹುದ್ದೆಯನ್ನು ಗಂಭೀರವಾಗಿ ಪರಿಗಣಿಸಿದರೆ ರವಿಶಾಸ್ತ್ರಿ ಮತ್ತೂಮ್ಮೆ ಮುಖಭಂಗ ಅನುಭವಿಸಬೇಕಾಗುತ್ತದೆ.
-ಕೋಚ್‌ ಆಯ್ಕೆ ಸಮಿತಿಯಲ್ಲಿರುವ ಸೌರವ್‌ ಗಂಗೂಲಿಗೆ ರವಿಶಾಸ್ತ್ರಿ ಜತೆ ಮುನಿಸಿದೆ. 2016ರಲ್ಲಿ ಗಂಗೂಲಿಯಿಂದಲೇ ಕೋಚ್‌ ಸ್ಪರ್ಧೆಯಲ್ಲಿ ಸೋತಿದ್ದರು. ಗಂಗೂಲಿಗೆ ಲಕ್ಷ್ಮಣ್‌ ಬೆಂಬಲವಿರುವುದು ರವಿಶಾಸ್ತ್ರಿಗೆ ಕಷ್ಟವಾಗಿ ಪರಿಣಮಿಸಿದೆ.
-ಫಿಲ್‌ ಸಿಮನ್ಸ್‌ ಮತ್ತು ಟಾಮ್‌ ಮೂಡಿ ಕೂಡ ಯಶಸ್ವಿ ಕೋಚ್‌ಗಳೇ. ಕೊನೆ ಹಂತದಲ್ಲಿ ಈ ಇಬ್ಬರೂ ರವಿಶಾಸ್ತ್ರಿಗೆ ಮುಳುವಾಗಬಹುದು.

ವೀರೇಂದ್ರ ಸೆಹವಾಗ್‌ ಆಯ್ಕೆಗೇನು ಅಡ್ಡಿ?
ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿವೇಗದ 2 ತ್ರಿಶತಕ ಬಾರಿಸಿದ ಕ್ರಿಕೆಟಿಗ ಸೆಹವಾಗ್‌. ಸ್ಫೋಟಕ ಬ್ಯಾಟಿಂಗ್‌ ಮೂಲಕ ಬೌಲರ್‌ಗಳನ್ನು ನಡುಗಿಸಿದಾತ. ಆದರೆ ಕೋಚ್‌ ಆಗಿ ಹೆಚ್ಚಿನ ಅನುಭವವಿಲ್ಲ. ಸದ್ಯ ಪಂಜಾಬ್‌ ಐಪಿಎಲ್‌ ತಂಡದ ನಿರ್ದೇಶಕ.
ಸಾಮರ್ಥ್ಯವೇನು?
-ಒಬ್ಬ ಕ್ರಿಕೆಟಿಗನಾಗಿ ವೀರೂ ಅತ್ಯಂತ ಯಶಸ್ವಿ. ಸ್ಫೋಟಕ ಬ್ಯಾಟ್ಸ್‌ಮನ್‌ ಆಗಿದ್ದ ಅವರು ಕ್ರೀಸ್‌ನಲ್ಲಿರುವಾಗ ಬೌಲರ್‌ಗಳನ್ನು ಕಂಗೆಡಿಸಿದ್ದರು. ಯಶಸ್ವಿ ಕ್ರಿಕೆಟರ್‌ ಆಗಿರುವುದು ಇವರಿಗೆ ಪೂರಕ.
-ಸೆಹವಾಗ್‌ಗೆ ಕೋಚ್‌ ಆಯ್ಕೆ ಸಮಿತಿಯಲ್ಲಿರುವ ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ರೊಂದಿಗೆ ಆತ್ಮೀಯ ಸ್ನೇಹವಿದೆ.
-ಅದರಲ್ಲೂ ಮಾಜಿ ನಾಯಕ ಗಂಗೂಲಿ ಅವಧಿಯಲ್ಲೇ ಒಬ್ಬ ಕ್ರಿಕೆಟಿಗನಾಗಿ ಸೆಹವಾಗ್‌ ಬೆಳಕಿಗೆ ಬಂದಿದ್ದು. ಇದು ಸೆಹವಾಗ್‌ ಆಯ್ಕೆಗೆ ಪೂರಕವಾಗಲಿದೆ.
ಸಮಸ್ಯೆಯೇನು?
-ಸ್ವತಃ ಸೆಹವಾಗ್‌ಗೆ ಕೋಚ್‌ ಹುದ್ದೆಯಲ್ಲಿ ಆಸಕ್ತಿಯಿಲ್ಲ, ಬಿಸಿಸಿಐ ಒತ್ತಡದ ಕಾರಣಕ್ಕೆ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ. ಆದ್ದರಿಂದ ಅವರು ಗಂಭೀರ ಯತ್ನ ನಡೆಸುವುದು ಅನುಮಾನವೆನ್ನಲಾಗಿದೆ.
-ಕೋಚ್‌ ಆಗಿ ಸೆಹವಾಗ್‌ಗೆ ಯಾವುದೇ ಅನುಭವವಿಲ್ಲ. ಕಳೆದ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಮೆಂಟರ್‌ ಆಗಿದ್ದರು. ಆದರೆ ತಂಡ ಯಶಸ್ವಿಯಾಗಿಲ್ಲ.
-ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯನ್ನು ನಿಭಾಯಿಸುವಷ್ಟು ಗಂಭೀರತೆಯಾಗಲೀ, ಆಸಕ್ತಿಯಾಗಲೀ ಸೆಹವಾಗ್‌ಗಿಲ್ಲ ಎಂಬ ಊಹೆಗಳು.

Advertisement

ಫಿಲ್‌ ಸಿಮನ್ಸ್‌
ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಕ್ರಿಕೆಟಿಗ. 26 ಟೆಸ್ಟ್‌, 143 ಏಕದಿನ ಪಂದ್ಯವನ್ನಾಡಿದ್ದಾರೆ. ಕ್ರಿಕೆಟಿಗನಾಗಿ ಹೇಳಿಕೊಳ್ಳುವಷ್ಟು ಯಶಸ್ವಿಯೇನಲ್ಲ. ಕೋಚ್‌ ಆಗಿ ಯಶಸ್ವಿಯಾಗಿದ್ದಾರೆ.
ಸಾಮರ್ಥ್ಯವೇನು?
-224 ಪಂದ್ಯಗಳಲ್ಲಿ ಐರೆಲಂಡ್‌ ತಂಡದ ಕೋಚ್‌ ಆಗಿದ್ದರು. ಇದು ಕ್ರಿಕೆಟ್‌ನ ದೀರ್ಘಾವಧಿಯ ಕೋಚ್‌ ದಾಖಲೆ. ಈ ಅವಧಿಯಲ್ಲಿ ಐರೆಲಂಡ್‌ ಅದ್ಭುತ ಯಶಸ್ಸು ಸಾಧಿಸಿತ್ತು.
-ಇವರು ಕೋಚ್‌ ಆಗಿದ್ದ ಅವಧಿಯಲ್ಲಿ ಅಂದರೆ 2016ರಲ್ಲಿ ವೆಸ್ಟ್‌ ಇಂಡೀಸ್‌ ಟಿ20 ವಿಶ್ವಕಪ್‌ ಗೆದ್ದು ಸಂಭ್ರಮಿಸಿತ್ತು.
ಸಮಸ್ಯೆಯೇನು?
-ವಿದೇಶಿ ಕೋಚ್‌ ಆಯ್ಕೆ ಮಾಡುವುದಕ್ಕೆ ಬಿಸಿಸಿಐಗೆ ಆಸಕ್ತಿಯಿಲ್ಲ ಮತ್ತು ಆಟಗಾರರೂ ಭಾರತೀಯರನ್ನೇ ಬಯಸುತ್ತಿದ್ದಾರೆ ಎನ್ನಲಾಗಿದೆ.
-ರವಿಶಾಸ್ತ್ರಿ ಮತ್ತು ವೀರೇಂದ್ರ ಸೆಹವಾಗ್‌ರಂತಹ ದಿಗ್ಗಜರ ಸವಾಲು ಮೆಟ್ಟಿ ನಿಲ್ಲುವ ಖ್ಯಾತಿ, ಪ್ರಭಾವ ಇಲ್ಲದಿರುವುದು.

ಟಾಮ್‌ ಮೂಡಿ
ಒಬ್ಬ ಕ್ರಿಕೆಟಿಗನಾಗಿ ಆಸ್ಟ್ರೇಲಿಯಾದ ಟಾಮ್‌ ಮೂಡಿ ಸಾಧನೆ ಬಹಳ ಅಲ್ಪ. ಅವರು ಕೇವಲ 8 ಟೆಸ್ಟ್‌, 76 ಏಕದಿನ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಕೋಚ್‌ ಆಗಿ ಖ್ಯಾತರಾಗಿದ್ದಾರೆ.
ಸಾಮರ್ಥ್ಯವೇನು?
-ಮೂಡಿ ದೀರ್ಘ‌ಕಾಲ ಕೋಚ್‌ ಆಗಿ ಅನುಭವ ಹೊಂದಿದ್ದಾರೆ. ಹಲವು ಭಿನ್ನ ಪರಿಸರಗಳಲ್ಲಿ ಕೆಲಸ ಮಾಡಿರುವ ಅನುಭವವಿರುವುದು ಅವರಿಗೆ ಪೂರಕವಾಗಿದೆ.
-ಇವರ ಕೋಚ್‌ ಅವಧಿಯಲ್ಲಿ ಶ್ರೀಲಂಕಾ 2007ರ ವಿಶ್ವಕಪ್‌ ಫೈನಲ್‌ಗೇರಿದೆ. ಹೈದ್ರಾಬಾದ್‌ ಐಪಿಎಲ್‌ ತಂಡ 2016ರಲ್ಲಿ ಚಾಂಪಿಯನ್‌ ಆಗಿದೆ.
ಸಮಸ್ಯೆಯೇನು?
-ವಿದೇಶಿ ಮೂಲದವರಾಗಿರುವುದು ಇವರಿಗೂ ಸಮಸ್ಯೆಯಾಗುತ್ತದೆ. ಇಂಗ್ಲಿಷ್‌ ಬರದ ಭಾರತೀಯ ಕ್ರಿಕೆಟಿಗರಿಗೆ ಭಾಷಾ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
-ಭಾರತ ತಂಡದಲ್ಲಿರುವ ಕೊಹ್ಲಿ, ರೋಹಿತ್‌, ಧೋನಿ, ಯುವಿ, ಅಶ್ವಿ‌ನ್‌ರಂತಹ ವಿಶ್ವದ ಖ್ಯಾತನಾಮ ತಾರೆಯರನ್ನು ನಿಭಾಯಿಸುವುದು ಸಮಸ್ಯೆಯಾಗಬಹುದು.

ಅನಿಲ್‌ ಕುಂಬ್ಳೆಗೆ ಪರ್ಯಾಯ ಹುಡುಕುವ ಸವಾಲು
ಅನಿಲ್‌ ಕುಂಬ್ಳೆ 2016-17ರ ಅವಧಿಯಲ್ಲಿ ಭಾರತ ತಂಡದ ಕೋಚ್‌ ಆಗಿ ಯಶಸ್ವಿಯಾಗಿದ್ದರು. ಅವರು ಬಹಳ ಬಿಗಿಯೆನ್ನುವುದು ಕೊಹ್ಲಿ ಆರೋಪ ಎನ್ನಲಾಗಿದೆ. ಇದೀಗ ಕುಂಬ್ಳೆಯಂತೆಯೇ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದೆ. ಇಲ್ಲವಾದರೆ ಕುಂಬ್ಳೆಯನ್ನು ಅನಗತ್ಯವಾಗಿ ಕೆಳಗಿಳಿಸಿದ್ದಾರೆ ಎಂಬ ಕೂಗು ಜೋರಾಗುತ್ತದೆ. ನಾಯಕ ಕೊಹ್ಲಿಯೂ ಟೀಕೆಗಳಿಗೀಡಾಗಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next