ಹೊಸದಿಲ್ಲಿ/ಕುಂದಾಪುರ/ಸಿದ್ದಾಪುರ: ಜರ್ಮನಿಯ ಮ್ಯೂನಿಚ್‌ನಲ್ಲಿ ಬಸ್ರೂರು ಮೂಲದ ಪ್ರಶಾಂತ್ (49) ಮತ್ತು ಸಿದ್ದಾಪುರದವರಾದ ಸ್ಮಿತಾ (43) ಎಂಬ ದಂಪತಿಯ ಮೇಲೆ ವಲಸಿಗನೋರ್ವ ಚಾಕುವಿನಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಪ್ರಶಾಂತ್ ಮೃತಪಟ್ಟಿದ್ದಾರೆ. ಸ್ಮಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪ್ರಶಾಂತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಜರ್ಮನಿಗೆ ತೆರಳಲು ಸಿದ್ಧರಾಗಿರುವ ಪ್ರಶಾಂತ್ ಸಹೋದರನಿಗೆ ಎಲ್ಲ ಅನುಕೂಲ ಕಲ್ಪಿಸಲಾಗುತ್ತದೆ ಎಂದಿರುವ ಅವರು, ದಂಪತಿಯ ಇಬ್ಬರು ಮಕ್ಕಳ ಜವಾಬ್ದಾರಿ ಯನ್ನು ವಹಿಸಿಕೊಳ್ಳಲು ಜರ್ಮನಿಯ ಭಾರತೀಯ ರಾಯಭಾರ ಕಚೇರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕೊಲೆಯಲ್ಲಿ ಅಂತ್ಯಗೊಂಡ ಜಗಳ?
ಮೂಲಗಳ ಪ್ರಕಾರ, ಜರ್ಮನಿಯ ಆಗ್ಸ್‌ಬರ್ಗ್‌ನಲ್ಲೇ ವಾಸವಾಗಿದ್ದ ಪ್ರಶಾಂತ್ ದಂಪತಿಗೆ ಕಳೆದ ವರ್ಷವಷ್ಟೇ ಜರ್ಮನಿಯ ಪೌರತ್ವ ಸಿಕ್ಕಿತ್ತು. ಅಲ್ಲಿನ ವಸತಿ ಸಮುಚ್ಚಯ ವೊಂದರಲ್ಲಿ ಪ್ರಶಾಂತ್ ದಂಪತಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಇದೇ ಸಮುಚ್ಚಯದಲ್ಲೇ ಆರೋಪಿಯೂ ವಾಸವಾಗಿದ್ದ. ಈತ ಗಿನಿಯಾ ಮೂಲದವನು ಎನ್ನಲಾಗಿದೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಶಾಂತ್ ದಂಪತಿ ಮತ್ತು ಆರೋಪಿ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದಾಗ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಕೂಗಾಟ ಕೇಳಿದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದಾಗ ಪ್ರತಿ ರೋಧ ತೋರಲಿಲ್ಲ. ತಲೆ ಸೇರಿ ನಾನಾ ಭಾಗಗಳಿಗೆ ತೀವ್ರ ಗಾಯಗಳಾಗಿದ್ದ ಪ್ರಶಾಂತ್ ಸಾವನ್ನಪ್ಪಿದ್ದಾರೆ.