Advertisement

ನಮ್ಮದು ಪ್ರಪಂಚದಲ್ಲೇ ಉತ್ಕೃಷ್ಟ ಸಂವಿಧಾನ: ಡಾ|ದಿನೇಶ್‌

02:00 AM Nov 28, 2018 | Karthik A |

ಕುಂದಾಪುರ: ನಮ್ಮದು ಪ್ರಪಂಚದಲ್ಲಿಯೇ ಉತ್ಕೃಷ್ಟವಾದ ಸಂವಿಧಾನ. ಅಮೆರಿಕಾ, ಇಂಗ್ಲೆಂಡ್‌, ರಷ್ಯಾ, ಫ್ರಾನ್ಸ್‌ ಹೀಗೆ ಬೇರೆ ಬೇರೆ ದೇಶಗಳ ಒಳ್ಳೆಯ ಅಂಶಗಳು ನಮ್ಮ ಸಂವಿಧಾನದಲ್ಲಿ ಅಡಕವಾಗಿದ್ದು ಉತ್ಕೃಷ್ಟವಾಗಿದೆ ಎಂದು ಬಸ್ರೂರು ಶಾರದಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ| ದಿನೇಶ್‌ ಹೆಗ್ಡೆ ಹೇಳಿದರು. ಅವರು ಮಂಗಳವಾರ ಇಲ್ಲಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಸಹಯಾನ ಕೆರೆಕೋಣ, ಸಮುದಾಯ ಕರ್ನಾಟಕ ಕುಂದಾಪುರ ವತಿಯಿಂದ ಸರಕಾರಿ ಜೂನಿಯರ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ ಸಂವಿಧಾನ ದಿನ, ಸಂವಿಧಾನದ ಓದು ಕಾರ್ಯಕ್ರಮದಲ್ಲಿ  ಪ್ರಧಾನ ಉಪನ್ಯಾಸ ನೀಡಿದರು.

Advertisement

1215ರಲ್ಲಿ ಇಂಗ್ಲೆಂಡ್‌ನ‌ಲ್ಲಿ ಕಿಂಗ್‌ಜಾನ್‌ ಮತ್ತು ಜಮೀನ್ದಾರರ ನಡುವೆ ಉಂಟಾದ ಒಪ್ಪಂದಗಳೇ ಜಗತ್ತಿನಲ್ಲಿ ಸಂವಿಧಾನದ ರಚನೆಗೆ ಮುನ್ನುಡಿ ಬರೆದವು. ಅನಂತರ ಮೊದಲ ಸಂವಿಧಾನ ರಚನೆಯ ಹೆಗ್ಗಳಿಕೆಯೂ ಇಂಗ್ಲೆಂಡ್‌ ಪಾಲಾಯಿತು. ಆ ಬಳಿಕ ಅಮೆರಿಕಾ ಸಂವಿಧಾನ ರಚಿಸಿದ್ದು ಈಗ ಪ್ರಪಂಚದ 195 ರಾಷ್ಟ್ರಗಳ ಪೈಕಿ 176  ರಾಷ್ಟ್ರಗಳು ಸಂವಿಧಾನ ಹೊಂದಿವೆ. ಭಾರತದಲ್ಲಿ ಬ್ರಿಟಿಷರು 9 ಪ್ರಾಂತ್ಯಗಳಲ್ಲಿ ನೇರ ಆಳ್ವಿಕೆ ನಡೆಸಿ 600 ಕಡೆ ರಾಜಪ್ರಭುತ್ವ ಇತ್ತು. ಭಾರತದಲ್ಲಿ ಸಂವಿಧಾನ ರಚನೆಗೆ ಇಂಗ್ಲಿಷ್‌ ಕಲಿಕೆ ಪ್ರಮುಖ ಕಾರಣವೆನ್ನಬಹುದು. ಮಹಾತ್ಮಾ ಗಾಂಧಿಯವರು ವಿದೇಶದಲ್ಲಿ ಕಲಿತು ಅಲ್ಲಿನ ಸಂವಿಧಾನ ಗಮನಿಸಿ ಮೋತಿಲಾಲ್‌ ನೆಹರೂ ಜತೆಗೂಡಿ ಸಂವಿಧಾನದ ಅಗತ್ಯವನ್ನು ಭಾರತಕ್ಕೆ ಹೇಳಿದರು. ಪ್ರತಿ ವರ್ಷ ಕಾಂಗ್ರೆಸ್‌ ಸಮ್ಮೇಳನದಲ್ಲಿ ಇದಕ್ಕಾಗಿ ಒತ್ತಾಯ ನಡೆಯಿತು. ಅನಂತರ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನೆಯಾಗಿ ನಮಗೆಲ್ಲರಿಗೂ ಸಮಾನವಾಗಿ, ಸಹೋದರತ್ವದಿಂದ ಬದುಕುವ ಹಕ್ಕನ್ನು ನೀಡುವಂತಾಗಿದೆ. ಸಂವಿಧಾನದ ಅರಿವು ಮುಖ್ಯ. ಅದರಂತೆ ನಡೆದಾಗ ಅದನ್ನು ರಚಿಸಿದ ಶ್ರಮ ಸಾರ್ಥಕವಾಗುತ್ತದೆ ಎಂದರು. ಪ.ಪೂ. ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ್‌ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಧ್ಯಾ ನಾಯಕ ಸ್ವಾಗತಿಸಿ, ಸಮುದಾಯ ಕುಂದಾಪುರ ಕಾರ್ಯದರ್ಶಿ ಸದಾನಂದ ಬೈಂದೂರು ಅವರು ವಂದಿಸಿದರು. ಉಪನ್ಯಾಸಕ ಉದಯ ಕುಮಾರ್‌ ಶೆಟ್ಟಿ ನಿರ್ವಹಿಸಿದರು. ಆಯ್ದ ವಿದ್ಯಾರ್ಥಿಗಳಿಗೆ ಸಯಾನ ಮತ್ತು ಸಮುದಾಯ ಕುಂದಾಪುರ ಪ್ರಕಟಿಸಿದ ಜ| ನಾಗಮೋಹನ್‌ದಾಸ್‌ ಬರೆದ ಸಂವಿಧಾನ ಓದು ಕೃತಿಯನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next