ಬೆಂಗಳೂರು: ಪಾಕಿಸ್ತಾನದ ತಂದೆ ಹಾಗೂ ಭಾರತದ ತಾಯಿಗೆ ದುಬೈನಲ್ಲಿ ಜನಸಿದ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಭಾರತದ ಪೌರತ್ವ ನೀಡಲು ನಿರಾಕರಿಸಿರುವ ಹೈಕೋರ್ಟ್, ತನ್ನ ದೇಶದ ಪೌರತ್ವ ತ್ಯಜಿಸಲು 21 ವರ್ಷ ಆಗಬೇಕು ಎಂದು ಪಾಕಿಸ್ತಾನ ಹೇಳಿರುವಾಗ, ಮತ್ತೂಂದು ದೇಶ ಅಪ್ರಾಪ್ತರಿಗೆ ಪೌರತ್ವ ನೀಡುವುದಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದೆ.
ಭಾರತದ ಪೌರತ್ವ ನೀಡುವಂತೆ ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಪಾಕಿಸ್ತಾನಿ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ತಿಳಿಸಿರುವ ಸಂದರ್ಭದಲ್ಲಿ ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ ಜನಿಸಿರುವ ಇಬ್ಬರು ಮಕ್ಕಳಿಗೆ 21 ವರ್ಷಕ್ಕಿಂತಲೂ ಮುನ್ನ ಭಾರತದ ಪೌರತ್ವ ನೀಡಲು ನಿರ್ದೇಶನ ನೀಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಅಲ್ಲದೆ, ಪಾಕಿಸ್ತಾನದ ಪೌರತ್ವ ತ್ಯಜಿಸಬೇಕಾದಲ್ಲಿ 21 ವರ್ಷ ಕಳೆದಿರಬೇಕು ಎಂದಿರುವಾಗ, ಅದಕ್ಕೆ ಭಾರತದ ಕಾನೂನುಗಳು ಹೊಂದಿಕೊಳ್ಳಲು ಸಾಧ್ಯವಿಲ್ಲ. ಜತೆಗೆ, ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಅರ್ಜಿದಾರ ಮಕ್ಕಳು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಭಾರತದ ಮೂಲದ ಅಮೀನಾ ಎಂಬುವರು ದುಬೈನಲ್ಲಿರುವ ಪಾಕಿಸ್ತಾನದ ಪ್ರಜೆ ಅಸ್ಸಾದ್ ಮಲ್ಲಿಕ್ ಎಂಬುವರನ್ನು 2002ರಲ್ಲಿ ಷರಿಯಾ ಕಾನೂನಿನ ಪ್ರಕಾರ ವಿವಾಹವಾಗಿದ್ದರು. ದಂಪತಿಗೆ 2004 ಮತ್ತು 2008ರಲ್ಲಿ ಇಬ್ಬರು ಮಕ್ಕಳು ದುಬೈನಲ್ಲಿ ಜನಿಸಿದ್ದರು. ಈ ದಂಪತಿ ದುಬೈ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದಿದ್ದರು. ಜತೆಗೆ, ಮಕ್ಕಳ ಮೇಲಿನ ಹಕ್ಕನ್ನು ತಾಯಿಗೆ ಬಿಟ್ಟುಕೊಡಲಾಗಿತ್ತು. ಈ ಮಕ್ಕಳು ದುಬೈನಲ್ಲಿ ಉದ್ಯೋಗದಲ್ಲಿದ್ದ ತಾಯಿಯೊಂದಿಗೆ ನೆಲೆಸಿದ್ದರು.
ಈ ಮಧ್ಯೆ ಅಮೀನಾ ಅವರು ದುಬೈನಲ್ಲಿ ಜೀವನ ನಡೆಸುವುದಕ್ಕೆ ಸಾಧ್ಯವಾಗದ ಕಾರಣ ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದ ತನ್ನ ಪೋಷಕರ ಮನೆಗೆ 2021ರಲ್ಲಿ ಹಿಂದಿರುಗಲು ಮುಂದಾಗಿದ್ದರು. ಇದಕ್ಕಾಗಿ ಪಾಕಿಸ್ತಾನಿ ಪ್ರಜೆಗಳಾಗಿದ್ದ ಮಕ್ಕಳ ಪಾಸ್‌ಪೋರ್ಟ್ ಹೊಂದಿದ್ದ ಪರಿಣಾಮ ಮಕ್ಕಳನ್ನು ಭಾರತಕ್ಕೆ ಕರೆತರಲು ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದರು. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಅರ್ಜಿದಾರರಿಗೆ, ಪಾಕಿಸ್ತಾನದ ಪಾಸ್‌ಪೋರ್ಟ್ ಹಿಂದಿರುಗಿಸಿದ ಬಳಿಕ ಅವರ ಪೌರತ್ವದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿ ಮಾನವೀಯತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರತ ಪ್ರವೇಶಕ್ಕೆ ಪಾಸ್ ಪೋರ್ಟ್ ನೀಡಿದ್ದರು.