Advertisement

ಹರಿಕಾ ಭಾರತದ ಚೆಂದುಳ್ಳಿ ಚೆಸ್‌ ತಾರೆ 

09:57 AM Mar 11, 2017 | |

ಚೆಸ್‌ ಅಂದರೆ ಬುದ್ಧಿವಂತರ ಆಟ, ಬುದ್ಧಿಯ ಮಟ್ಟವನ್ನು ಹೆಚ್ಚಿಸುವ ಆಟ ಎಂಬ ಖ್ಯಾತಿಯಿದೆ. ಈ ಕ್ರೀಡೆಯಲ್ಲಿ ಭಾರತೀಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ವಿಶ್ವಮಟ್ಟದಲ್ಲಿ ಬೆಳಗುತ್ತಿರುವ ಭಾರತೀಯ ಪ್ರತಿಭೆಗಳ ಸಂಖ್ಯೆ ಏರುತ್ತಿದೆ. ಈ ಸಾಲಿನಲ್ಲಿ ಆಂಧ್ರದ ಹರಿಕಾ ದ್ರೋಣವಲ್ಲಿ ಎಂಬ ಸುಂದರ ಚೆಸ್‌ ತಾರೆ ಇದ್ದಾರೆ.

Advertisement

ಪ್ರಸ್ತುತ ಭಾರತದಲ್ಲಿ ಚೆಸ್‌ ಅಂದರೆ ವಿಶ್ವನಾಥನ್‌ ಆನಂದ್‌, ವಿಶ್ವನಾಥನ್‌ ಆನಂದ್‌ ಎಂದರೆ ಚೆಸ್‌ ಅನ್ನುವಷ್ಟು ಪ್ರಚಲಿತ. ಬೇರೆ ಪ್ರತಿಭೆಗಳು ಕಾಣಿಸಿಕೊಂಡರೂ ಆನಂದ್‌ಗೆ ಸಿಕ್ಕ ಯಶಸ್ಸು, ಖ್ಯಾತಿ ಬೇರೆಯವರಿಗೆ ಸಿಕ್ಕಿಲ್ಲ. ಆದರೆ ಹರಿಕಾ ದ್ರೋಣವಲ್ಲಿ ನಿಧಾನಕ್ಕೆ ಚೆಸ್‌ ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ. ಜಗತ್ತು ತನ್ನನ್ನು ಗುರುತಿಸುವಂತೆ ಆಟ ಆಡಿದ್ದಾರೆ.

10 ವರ್ಷದವಳಾಗಿದ್ದಾಗ ಮಿಂಚಿದ್ದ ಹರಿಕಾ ಅದು 2000ದಲ್ಲಿ ಸ್ಪೇನ್‌ನಲ್ಲಿ ನಡೆದ 10 ವರ್ಷದೊಳಗಿನ ಬಾಲಕಿಯರ ವಿಶ್ವ ಯುವ ಚೆಸ್‌ ಚಾಂಪಿಯನ್‌ಶಿಪ್‌. ಮೊದಲ ಬಾರಿಗೆ ಹರಿಕಾ ಪ್ರತಿಭೆ ಹೊರಬಂದಿದ್ದೆ ಈ ಟೂರ್ನಿಯಲ್ಲಿ. ಅತ್ಯುತ್ತಮ ಚುರುಕಿನ ನಡೆಯೊಂದಿಗೆ ಹರಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು. ಆದರೆ ಫೈನಲ್‌ನಲ್ಲಿ ಆಘಾತ ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ಈ ಪ್ರದರ್ಶನ ಹರಿಕಾ ಜೀವನದ ನಡೆಯನ್ನೇ ಬದಲಿಸಿತು. ಆಕೆ ಚೆಸ್‌ ಕ್ರೀಡೆಯ ಮೇಲೆ ಹೆಚ್ಚಿನ ಗಮನಹರಿಸಲು ನೆರವಾಯಿತು. ಕಾಲೇಜಿಗೆ ಹೋಗುತ್ತಲೇ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕದ ಬೇಟೆಯಾಡಿದರು. ಇದರ ಫ‌ಲವಾಗಿ 2004ರಲ್ಲಿ ಮಹಿಳಾ ಗ್ರ್ಯಾನ್‌ ಮಾಸ್ಟರ್, 2011ರಲ್ಲಿ ಗ್ರ್ಯಾನ್‌ ಮಾಸ್ಟರ್‌ ಪಟ್ಟ ಸಿಕ್ಕಿತು.  2007-08ನೇ ಸಾಲಿನಲ್ಲಿ ಕ್ರೀಡಾ ಲೋಕಕ್ಕೆ ಸಲ್ಲಿಸಿದ ಸೇವೆಗಾಗಿ ಕೇಂದ್ರ ಸರ್ಕಾರದಿಂದ “ಅರ್ಜುನ ಪ್ರಶಸ್ತಿ’ ಒಲಿದು ಬಂತು.

ಮಹಿಳಾ ವಿಶ್ವಚಾಂಪಿಯನ್‌ಶಿಪ್‌ನಲ್ಲಿ 3 ಕಂಚು
ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಾಳುಗಳ ನಡುವೆ ಪೈಪೋಟಿ ಹೆಚ್ಚು. ಜಗತ್ತಿನ ಕೆಲವೇ ಕೆಲವು ಪ್ರತಿಭೆಗಳಿಗೆ ಮಾತ್ರ ಇಲ್ಲಿ ಅವಕಾಶವಿರುತ್ತದೆ. ಮೊದಲ ಬಾರಿಗೆ ಮಹಿಳಾ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಹರಿಕಾ ಪದಕ ಪಡೆದಿದ್ದು 2012ರಲ್ಲಿ. ಆನಂತರ 2015 ಮತ್ತು 2017 ರಲ್ಲಿ ಕೂಡ ಕಂಚಿನ ಪದಕಕ್ಕೆ ತೃಪ್ತರಾದರು. ಪ್ರಸ್ತುತ ವರ್ಷದಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರೀ ಸ್ಪರ್ಧೆಯಿತ್ತು. ಸೆಮಿಫೈನಲ್‌ ಹಂತದವರೆಗೆ ಯಾವುದೇ ಅಡೆತಡೆಗಳಿಲ್ಲದೇ ಹರಿಕಾ ಪ್ರವೇಶಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಆಘಾತ ಅನುಭವಿಸಿ ಕಂಚಿಗೆ ತೃಪ್ತರಾಗಬೇಕಾಯಿತು. ಇದು ಹರಿಕಾಗೆ ವೃತ್ತಿ ಜೀವನದಲ್ಲಿ ಸಿಕ್ಕ ವಿಶ್ವಚಾಂಪಿಯನ್‌ಶಿಪ್‌ನ 3ನೇ ಕಂಚಿನ ಪದಕವಾಗಿದೆ.

ವಿಶ್ವಕ್ಕೆ ಚೆಸ್‌ ಕೊಡುಗೆ ಭಾರತದ್ದು
ಚೆಸ್‌ ಕ್ರೀಡೆಯ ಮೂಲವನ್ನು ಜಾಲಾಡುತ್ತ ಹೋದರೆ ಸಿಗುವುದು ಭಾರತ. ಹೌದು, ಅದು 7ನೇ ಶತಮಾನದಲ್ಲಿಯೇ ರಾಜ ಮಹಾರಾಜರ ಆಡಳಿತ ಕಾಲದ ಸಂದರ್ಭದಲ್ಲಿಯೇ ಈ ಕ್ರೀಡೆ ಪರಿಚಯವಾಗಿದೆ. ಆದರೆ ಇದೀಗ ಈ ಕ್ರೀಡೆಯಲ್ಲಿ ರಷ್ಯಾ, ಅಮೆರಿಕ, ಬ್ರಿಟನ್‌, ಸ್ಪೇನ್‌, ಚೀನಾ…ಸೇರಿದಂತೆ ಹಲವು ರಾಷ್ಟ್ರಗಳು ಪ್ರಭುತ್ವ ಸಾಧಿಸಿವೆ.

Advertisement

ಯಾರಿವರು ಹರಿಕಾ?
ಹರಿಕಾ ಆಂಧ್ರಪ್ರದೇಶದ ಗುಂಟೂರಿನವರು. 1991ರಲ್ಲಿ ಜನನ. ಈಗ 26  ವರ್ಷ. ಬಾಲ್ಯದಿಂದಲೂ ಚೆಸ್‌ ಬಗ್ಗೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ಈ ಕಾರಣವೇ ಇವರಿಗೆ ಇಲ್ಲಿ ತನಕ ಮುಂದುವರಿಯಲು, ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದೆ. 

 ಮಂಜು ಮಳಗುಳಿ 

Advertisement

Udayavani is now on Telegram. Click here to join our channel and stay updated with the latest news.

Next