ಹೊಸದಿಲ್ಲಿ : ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಭಾರತದ ಮೊದಲ ಬಾಕ್ಸಿಂಗ್ ಕೋಚ್ ಎಂಬ ಹಿರಿಮೆಯ ಒ.ಪಿ. ಭಾರಧ್ವಾಜ್ ಶುಕ್ರವಾರ ನಿಧನ ಹೊಂದಿದರು. 82 ವರ್ಷದ ಅವರು ಕಳೆದ 10 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
“ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯಗೊಂಡಿದ್ದರು. ಅಲ್ಲದೇ, 10 ದಿನಗಳ ಹಿಂದಷ್ಟೇ ಪತ್ನಿಯನ್ನು ಕಳೆದುಕೊಂಡ ಆಘಾತದಿಂದ ಚೇತರಿಸಿರಲಿಲ್ಲ’ ಎಂದು ಭಾರಧ್ವಾಜ್ ಅವರ ಕುಟುಂಬದ ನಿಕಟವರ್ತಿಯಾಗಿರುವ ಟಿ.ಎಲ್. ಗುಪ್ತಾ ಪಿಟಿಐಗೆ ತಿಳಿಸಿದರು.
ಭಾರಧ್ವಾಜ್ 1968ರಿಂದ 1989ರ ತನಕ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಜತೆಗೆ ರಾಷ್ಟ್ರೀಯ ಆಯ್ಕೆಗಾರನೂ ಆಗಿದ್ದರು. ಇವರ ಮಾರ್ಗದರ್ಶನದ ವೇಳೆ ಭಾರತದ ಬಾಕ್ಸರ್ ಏಶ್ಯಾಡ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಬಹಳಷ್ಟು ಪದಕ ಜಯಿಸಿದ್ದರು.
ಇದನ್ನೂ ಓದಿ :ವನಿತಾ ಡೇ-ನೈಟ್ ಸರಣಿಗೆ ಆಗ್ರಹ :ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್ ಆಡಲಿರುವ ಭಾರತದ ವನಿತೆಯರು
ಒ.ಪಿ. ಭಾರಧ್ವಾಜ್ ಅವರಿಗೆ 1985ರಲ್ಲಿ ಪ್ರತಿಷ್ಠಿತ ದ್ರೋಣಾಚಾರ್ಯವ ಪ್ರಶಸ್ತಿ ಒಲಿದು ಬಂದಿತ್ತು. ಭಾರಧ್ವಾಜ್ ನಿಧನಕ್ಕೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.