Advertisement
ಈ ಪ್ರಕ್ರಿಯೆಯ ಮೊದಲ ಪ್ರಯತ್ನವಾಗಿ ಭಾರತದ ಸೌಂದರ್ಯ ಮತ್ತು ದೇಶದ ಪ್ರಗತಿಯನ್ನು ತೋರಿಸಲು ದಕ್ಷಿಣ ಕಾಶ್ಮೀರದ 20 ಯುವಕರನ್ನು ಶೀಘ್ರವೇ ಪ್ರವಾಸ ಕೊಂಡೊಯ್ಯಲು ಸೇನೆ ಸಿದ್ಧತೆ ನಡೆಸಿದೆ. ಸೇನೆಗೆ ಈ ಐಡಿಯಾ ಕೊಟ್ಟದ್ದು ಮೇಜರ್ ಜನರಲ್ ಬಿ.ಎಸ್.ರಾಜು. ದಕ್ಷಿಣ ಕಾಶ್ಮೀರದಲ್ಲಿ ಬಂಡಾಯ ವಿರೋಧಿ ಕಾರ್ಯಾಚರಣೆ ಪಡೆಗಳನ್ನು ಮುನ್ನಡೆಸುತ್ತಿರುವ ರಾಜು ಅವರು, ಕಲ್ಲೆಸೆಯುವ ಹಲವು ಯುವಕರನ್ನು ಬಂಧಿಸಿ ಅವರೊಂದಿಗೆ ಚರ್ಚಿಸಿದ್ದಾರೆ. ಈ ವೇಳೆ ಬಹುತೇಕ ಯುವಕರು ಮೋಜಿಗಾಗಿ ಕಲ್ಲೆಸೆಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಅವರಿಗೆ ಕಾಶ್ಮೀರ ಹೊರತಾಗಿರುವ ಭಾರತದ ಚಿತ್ರಣವೇ ಇಲ್ಲ. ‘ಕಣೆವೆ ರಾಜ್ಯದ ಯುವಕರು ಪ್ರತಿಭಟನೆ, ದಾಳಿ, ಹಲ್ಲೆಗಳ ನಡುವೆಯೇ ಬೆಳೆದಿದ್ದಾರೆ. ಕಲ್ಲೆಸೆದು ಪ್ರತಿಭಟಿಸುವುದೇ ಜೀವನ ಅಂದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಭಾರತ ಎಷ್ಟು ಸುಂದರವಾಗಿದೆ, ತಾವು ಮಾತ್ರ ಕೊಂಪೆಯಲ್ಲಿದ್ದಾರೆ ಎಂಬುದನ್ನು ತೋರಿಸಿ, ಮನಃ ಪರಿವರ್ತಿಸಬೇಕು,’ ಎನ್ನುತ್ತಾರೆ ‘ಗುಂಡೇಟು ಅಥವಾ ಶಿಕ್ಷೆಯೇ ಎಲ್ಲಕ್ಕೂ ಮದ್ದಲ್ಲ’ ಎಂದು ನಂಬಿರುವ ಮೇಜರ್ ಜನರಲ್ ರಾಜು.
ಇದೇ ವೇಳೆ, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ರವಿವಾರ ಪೊಲೀಸರ ಮೇಲೆ ಉಗ್ರರ ದಾಳಿ ನಡೆದಿದೆ. ಇಮಾಮ್ ಸಾಹೀಬ್ ಪ್ರದೇಶದಲ್ಲಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ)ಯ ಶಿಬಿರದ ಸಮೀಪವೇ ಈ ದಾಳಿ ನಡೆಸಲಾಗಿದೆ. ಪರಿಣಾಮ ವಿಶೇಷ ಪೊಲೀಸ್ ಅಧಿಕಾರಿ ಖುರ್ಷಿದ್ ಅಹ್ಮದ್ ಎಂಬವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ
ಜಮ್ಮು- ಕಾಶ್ಮೀರದ ರಜೌರಿ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಹಾಗೂ ಎಲ್‌ಒಸಿಯುದ್ದಕ್ಕೂ ಇರುವ ಮುಂಚೂಣಿ ನೆಲೆಗಳ ಮೇಲೆ ಪಾಕಿಸ್ಥಾನ ರವಿವಾರ ಗುಂಡಿನ ದಾಳಿ ನಡೆಸಿದೆ. ಪಾಕ್ ಪಡೆಯು ಅಪ್ರಚೋದಿತ ದಾಳಿ ಯಲ್ಲಿ ತೊಡಗಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಶನಿವಾರವೂ ಕೃಷ್ಣಘಾಟಿ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್, ಭಾರತೀಯ ನಾಗರಿಕರಿರುವ ಪ್ರದೇಶವನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸಿತ್ತು. ಈ ನಡುವೆ, ಶುಕ್ರವಾರ ಉರಿ ವಲಯದಲ್ಲಿ ಸೇನಾ ಪಡೆ ಹತ್ಯೆಗೈದ ಐವರು ಉಗ್ರರು ಫಿದಾಯೀನ್ ಪಡೆಗೆ ಸೇರಿದವರಾಗಿದ್ದು, ಇವರು ದೇಶದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಟೈಮರ್ ಇರುವಂಥ ಐಇಡಿಗಳು, ಪಾಕಿಸ್ಥಾನದ ಗುರುತು ಇರುವಂಥ ಆಹಾರ ವಸ್ತುಗಳು ಪತ್ತೆಯಾಗಿವೆ ಎಂದಿದ್ದಾರೆ.