ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಭೂಸೇನೆಯಲ್ಲೂ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವ ಚಿಂತನೆ ನಡೆಸಿದೆ.
ಸೇನೆಯಲ್ಲಿ ಬಳಕೆಗೆ ಸಾಧ್ಯತೆ ಇರುವಲ್ಲೆಲ್ಲ ಎಲೆಕ್ಟ್ರಿಕ್ ವಾಹನ ಬಳಕೆ ಮಾಡಿ, ಸಾಂಪ್ರದಾಯಿಕ ಇಂಧನ ಬಳಕೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ತಪ್ಪಿಸುವುದಕ್ಕೆ ಇಂತದ್ದೊಂದು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸೇನೆಗೆ ಸೇರಿರುವ ಶೇ.25ರಷ್ಟು ಲಘು ವಾಹನಗಳನ್ನು, ಶೇ.38 ಬಸ್ಸುಗಳನ್ನು ಹಾಗೂ ಶೇ.48 ಮೋಟಾರು ಸೈಕಲ್‌ಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸುವ ಯೋಜನೆ ಇದೆ. ಭೂಸೇನೆಯ ನವ ದೆಹಲಿಯ ಕಚೇರಿಯಲ್ಲಿ ಈಗಾಗಲೇ ಎಲೆಕ್ಟ್ರಿಕ್ ವಾಹನ ಬಳಕೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಲಕ್ನೋ, ಪುಣೆ ಮತ್ತು ಕೋಲ್ಕತಾದ ಕಚೇರಿಗಳಿಗೂ ಎಲೆಕ್ಟ್ರಿಕ್ ವಾಹನಗಳು ಕಾಲಿಡಲಿವೆ ಎನ್ನಲಾಗಿದೆ.
ಅದಕ್ಕೆಂದೇ ಈಗಾಗಲೇ ಸೇನೆಯ ಕಚೇರಿಗಳ ಪಾರ್ಕಿಂಗ್ ಜಾಗ, ವಸತಿ ಸಮುತ್ಛಯಗಳ ಪಾರ್ಕಿಂಗ್ ಜಾಗಗಳಲ್ಲಿ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸೌರಶಕ್ತಿಯಿಂದಲೇ ವಾಹನಗಳ ಚಾರ್ಜ್ ಮಾಡುವ ತಂತ್ರಜ್ಞಾನವೂ ಅಭಿವೃದ್ಧಿ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಮೊದಲನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ಸೇನೆ ಸೇರಲಿವೆ. ಅದಕ್ಕೆಂದೇ 60 ಎಲೆಕ್ಟ್ರಿಕ್ ಬಸ್ಸುಗಳು ಹಾಗೂ 24 ಫಾಸ್ಟ್ ಚಾರ್ಜರ್ಸ್ ಅನ್ನು ಖರೀದಿಸಲು ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ.
ಸದ್ಯ ವಾಹನ ಬಳಕೆ ಹೇಗೆ?
ಶೇ.25- ಲಘು ವಾಹನ
ಶೇ.38- ಬಸ್‌ಗಳು
ಶೇ.48- ಮೋಟಾರು ಸೈಕಲ್‌ಗಳು