ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ದ ಹೋರಾಡಲು ಭಾರತೀಯ ಸೇನೆ ನೂರಾರು ದೇಶೀ ನಿರ್ಮಿತ ರೋಬೋಟ್‌ಗಳನ್ನು ಬಳಸಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಅಸುರಕ್ಷಿತ ಮತ್ತು ತುರ್ತು ಪರಿಸ್ಥಿತಿಯಲ್ಲಿ ಈ ರೋಬೋಟ್‌ಗಳು ಉದ್ದೇಶಿತ ತಾಣಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿರುತ್ತವೆ ಎಂದು ವರದಿಗಳು ಹೇಳಿವೆ.
ಈಸ್ಟ್‌ಕೋಸ್ಟ್‌ಡೇಲಿ ಡಾಟ್ ಕಾಮ್ ಮಾಡಿರುವ ವರದಿಯ ಪ್ರಕಾರ ರಕ್ಷಣಾ ಸಚಿವಾಲಯ ಈಗಾಗಲೇ ಸುಮಾರು 544 ರೋಬೋಟ್‌ಗಳನ್ನು ಈ ಉದ್ದೇಶಗಳಿಗೆ ಬಳಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ.
ಭಯೋತ್ಪಾದಕ ಚಟುವಟಿಕೆಗಳು ಈಗ ಅರಣ್ಯದಿಂದ ನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡಿರುವ ಕಾರಣದಿಂದ ಈ ಬಗೆಯ ರೋಬೋಟ್‌ಗಳನ್ನು ಭದ್ರತೆ ಮತ್ತು ಕಣ್ಗಾವಲು ಉದ್ದೇಶಗಳಿಗಾಗಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲು ಸೇನೆ ಉದ್ದೇಶಿಸಿದೆ.
ಕಡಿಮೆ ತೂಕದ ಹಾಗೂ ಕಣ್ಗಾವಲು ಕ್ಯಾಮರಾಗಳು ಮತ್ತು 200 ಮೀಟರ್ ವ್ಯಾಪ್ತಿಯ ಪ್ರಸಾರ ವ್ಯವಸ್ಥೆಯನ್ನು ಈ ರೋಬೋಟ್‌ಗಳು ಹೊಂದಿವೆ. ಪೂರೈಕೆಗೆ ಅನುಕೂಲವಾಗಿರುವ ಸ್ಟನ್ ಗ್ರೆನೇಡ್‌ಗಳನ್ನು ಉದ್ದೇಶಿತ ತಾಣಗಳಿಗೆ ಒಯ್ಯಬಲ್ಲ ರೋಬೋಟ್‌ಗಳು ಸೇನೆಯ ಅಗತ್ಯವಾಗಿವೆ ಎಂದು ಮೂಲಗಳು ಹೇಳಿವೆ.