ನವದೆಹಲಿ: ಪೂರ್ವ ಲಡಾಖ್ ನಲ್ಲಿ ಚೀನಾ ಪಡೆ ಭಾರತ ಸೇನೆ ಜತೆ ಮತ್ತೆ ಘರ್ಷಣೆ ನಡೆಸಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನಾ ಪಡೆ ಬುಧವಾರ(ಜುಲೈ14) ನಿರಾಕರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ನಿಂದ ಮೃತಪಟ್ಟವರ ಸಾಲ ಮನ್ನಾ : ಎಸ್.ಟಿ ಸೋಮಶೇಖರ್
ನೈಜತೆಯನ್ನು ತಿಳಿಯದೇ ಈ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ಸೇನೆ ತಿಳಿಸಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ. ಇದೊಂದು ಸುಳ್ಳು ಮಾಹಿತಿಯಾಗಿದೆ ಎಂದು ವಿವರಿಸಿದೆ. ಘರ್ಷಣೆಯ ಮೂಲಕ ಚೀನಾದೊಂದಿಗಿನ ಒಪ್ಪಂದ ಮುರಿದು ಬಿದ್ದಿರುವುದಾಗಿ ಉಲ್ಲೇಖಿಸಿರುವ ಸುದ್ದಿ ಸುಳ್ಳು ಮತ್ತು ಆಧಾರರಹಿತವಾದದ್ದು ಎಂದು ಸೇನೆ ಹೇಳಿದೆ.
ಈ ವರ್ಷದ ಫೆಬ್ರುವರಿಯಿಂದ ಸೇನೆಯನ್ನು ಹಿಂಪಡೆಯುವ ಒಪ್ಪಂದದ ನಂತರ ಕೈಗೊಂಡ ನಿರ್ಧಾರದ ಬಳಿಕ ಯಾವುದೇ ಪ್ರದೇಶಗಳಲ್ಲಿ ಉಭಯ ಸೇನೆಗಳು ಅತಿಕ್ರಮಿಸುವ ಪ್ರಯತ್ನ ನಡೆಸಿಲ್ಲ ಎಂದು ತಿಳಿಸಿದೆ. ವರದಿಯಲ್ಲಿ ತಿಳಿಸಿರುವಂತೆ ಗಾಲ್ವಾನ್ ಅಥವಾ ಬೇರೆ ಯಾವುದೇ ಪ್ರದೇಶದಲ್ಲಿ ಘರ್ಷಣೆಗಳು ನಡೆದಿಲ್ಲ.
ಇದು ವರದಿಗಾರನ ದುರುದ್ದೇಶವಾಗಿದೆ, ಅಷ್ಟೇ ಅಲ್ಲ ಯಾವುದೇ ಆಧಾರ ಇಲ್ಲದೇ ಪ್ರಕಟಿಸಿದ ವರದಿಯಾಗಿದೆ ಎಂದು ಸೇನೆ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.