Advertisement

ನಿಖರ ದಾಳಿ ನಡೆಸಿ ಶತ್ರುನಾಶ ಮಾಡುವ ಆತ್ಮಾಹುತಿ ಡ್ರೋನ್‌!

04:32 PM Dec 31, 2021 | Team Udayavani |

ಹೊಸದಿಲ್ಲಿ: ಭವಿಷ್ಯದ ಯುದ್ಧಗಳಿಗೆ ಅಗತ್ಯವಾದ 10 ಸೆಟ್‌ ಮಧ್ಯಮ ವ್ಯಾಪ್ತಿಯ ಪ್ರಿಸಿಷನ್‌ ಕಿಲ್‌ ಸಿಸ್ಟಂ(ಎಂಆರ್‌ಪಿಕೆಎಸ್‌)ಗಳನ್ನು ಖರೀದಿಸಲು ಭಾರತೀಯ ಸೇನೆ ಚಿಂತನೆ ನಡೆಸಿದೆ.

Advertisement

ಈ ಸಿಸ್ಟಂನಲ್ಲಿ 120 ಲಾಯಿಟರಿಂಗ್‌ ಮ್ಯುನಿಷನ್‌ಗಳು (ನಿಖರವಾಗಿ ಗುರಿಯಿಡುವ ಸಲುವಾಗಿ ಅಡ್ಡಾಡುವ ಡ್ರೋನ್‌) ಇರಲಿವೆ.

ಈ ವ್ಯವಸ್ಥೆಯು ಸ್ಥಿರವಾದ ಮತ್ತು ಚಲಿಸುವಂಥ ಗುರಿಗಳನ್ನು ಪತ್ತೆಹಚ್ಚಿ ನಾಶ ಮಾಡಬಲ್ಲಂಥ ಛಾತಿಯನ್ನು ಹೊಂದಿದೆ. ಲಾಯಿಟರಿಂಗ್‌ ಮ್ಯುನೀಷನ್‌ಗಳು ಪರಿಣಾಮಕಾರಿಯಾದ ಮಾನವರಹಿತ ಯುದ್ಧ ವಿಮಾನಗಳಾಗಿವೆ. ದೇಶೀಯವಾಗಿಯೇ ಇದನ್ನು ವಿನ್ಯಾಸಗೊಳಿಸುವ ಸಾಧ್ಯತೆಯಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ 10 ಲಾಂಚರ್‌ಗಳು, 30 ಫಾರ್ವರ್ಡ್‌ ಆಬ್ಸರ್ವೇಷನ್‌ ಸ್ಟೇಷನ್‌ಗಳೂ ಇರಲಿವೆ. ಒಮ್ಮೆ ಉಡಾವಣೆ ಮಾಡಿದೊಡನೆ ಇದರಲ್ಲಿರುವ ಡ್ರೋನ್‌ಗಳು ಗಾಳಿಯಲ್ಲಿ ಸಂಚರಿಸಿ, ತನ್ನ ಗುರಿ ಪತ್ತೆಯಾದೊಡನೆ ಅದರ ಚಿತ್ರವನ್ನು ಭೂಮಿಯಲ್ಲಿರುವ ಆಪರೇಟರ್‌ಗೆ ರವಾನಿಸುತ್ತದೆ. ಈ ಡ್ರೋನ್‌ಗಳು ನಿರ್ದಿಷ್ಟ ಟಾರ್ಗೆಟ್‌ ಸಮೀಪದಲ್ಲೇ ಸುತ್ತುತ್ತಾ, ನಿರ್ದೇಶನ ಬಂದೊಡನೆ ನಿಖರ ದಾಳಿ ಮಾಡಿ ನಾಶಪಡಿಸುವ ಜತೆಗೆ ಸ್ವಯಂ ನಾಶವಾಗುತ್ತವೆ.

ಇದನ್ನೂ ಓದಿ:ವರದಕ್ಷಿಣೆ ಇರುವ ಮದುವೆಗೆ ಹೋಗಲ್ಲ: ನಿತೀಶ್‌ ಕುಮಾರ್‌

Advertisement

ವೈಶಿಷ್ಟ್ಯವೇನು?
– ಯಾವುದೇ ಪ್ರತಿಕೂಲ ವಾತಾವರಣದಲ್ಲೂ, ಹಗಲು-ರಾತ್ರಿ ಕಾರ್ಯನಿರ್ವಹಿಸುವ ಸಾಮರ್ಥ್ಯ.
– ಮರುಭೂಮಿ, ಅತ್ಯಂತ ಎತ್ತರದ ಪ್ರದೇಶ, ಬೆಟ್ಟ-ಗುಡ್ಡಗಳು ಸಹಿತ ಎಲ್ಲ ರೀತಿಯ ಭೂಪ್ರದೇಶಗಳಲ್ಲಿನ ಸ್ಥಿರ ಹಾಗೂ ಚಲಿಸುವ ಟಾರ್ಗೆಟ್‌ ಅನ್ನು ಪತ್ತೆಹಚ್ಚಿ ನಾಶಮಾಡುವುದು.
– ಕಮಾಂಡ್‌ ಕಂಟ್ರೋಲ್‌ ಕಂಪ್ಯೂಟರ್‌, ಸಿಗ್ನಲ್‌ ಸೆಂಟರ್‌, ಕಮಾಂಡ್‌ ಪೋಸ್ಟ್‌ಗಳು, ಶಸ್ತ್ರಾಸ್ತ್ರ ಪತ್ತೆ ರೇಡಾರ್‌, ವಾಯು ರಕ್ಷಣ ವ್ಯವಸ್ಥೆ, ಸಂವಹನ ಕೇಂದ್ರ, ಲಾಜಿಸ್ಟಿಕ್ಸ್‌ ಸ್ಟೋರೇಜ್‌ ಡಿಪೋ ಸಹಿತ ಯಾವುದೇ ಟಾರ್ಗೆಟ್‌ ಅನ್ನೂ ಧ್ವಂಸ ಮಾಡುವ ಸಾಮರ್ಥ್ಯ.
– 40 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯ.
– ಕನಿಷ್ಠ 15 ವರ್ಷಗಳ ಬಾಳಿಕೆ.

ಏನಿದು ಲಾಯಿಟರಿಂಗ್‌ ಮ್ಯುನೀಷನ್‌?
ಇದನ್ನು ಸುಸೈಡ್‌ ಡ್ರೋನ್‌(ಆತ್ಮಾಹುತಿ ಡ್ರೋನ್‌) ಎಂದೂ ಕರೆಯಲಾಗುತ್ತದೆ. ಇಂಥ ಡ್ರೋನ್‌ನಲ್ಲಿ 8 ಕೆಜಿಯಷ್ಟು ಸಿಡಿತಲೆಗಳನ್ನು ಅಳವಡಿಸಿರಲಾಗುತ್ತದೆ. ಇದು ಸ್ವಲ್ಪ ಹೊತ್ತು ಟಾರ್ಗೆಟ್‌ ಇರುವ ಪ್ರದೇಶದ ಸುತ್ತಲೂ ಸುತ್ತಿ, ನಿಖರವಾಗಿ ಗುರಿಯಿಡಲು ಕಾಯುತ್ತಿರುತ್ತದೆ. ಟಾರ್ಗೆಟ್‌ ಖಚಿತವಾದೊಡನೆ ದಾಳಿಯಿಡುತ್ತದೆ. ಬಳಿಕ ಡ್ರೋನ್‌ ಕೂಡ ನಾಶವಾಗುವ ಕಾರಣಕ್ಕೇ ಅದನ್ನು ಆತ್ಮಾಹುತಿ ಡ್ರೋನ್‌ ಎನ್ನುವುದು.

Advertisement

Udayavani is now on Telegram. Click here to join our channel and stay updated with the latest news.

Next