Advertisement

ಕಲ್ಲೆಸೆಯುವವರ ಮೇಲೆ ದುರ್ಗಂಧ!

03:30 AM Jul 08, 2017 | Team Udayavani |

ಲಕ್ನೋ: ಜನವಸತಿ ಪ್ರದೇಶಗಳ ತ್ಯಾಜ್ಯ ನೀರು ಹರಿಯುವ ಒಳಚರಂಡಿ ಕಟ್ಟಿಕೊಂಡು ಮ್ಯಾನ್‌ಹೋಲ್‌ನಿಂದ ತ್ಯಾಜ್ಯ ನೀರು ಹೊರಬರುತ್ತಿದ್ದರೆ ಅದರಿಂದ ಹೊಮ್ಮುವ ಕೆಟ್ಟ ವಾಸನೆ ಅದೆಷ್ಟು ಅಸಹನೀಯ ಎಂಬುದು ಮೂಗು ಮುಚ್ಚಿಕೊಂಡು ಓಡಾಡುವವರಿಗೇ ಗೊತ್ತು. ಅದರಲ್ಲೂ ಮನೆ ಎದಿರೋ, ನಿತ್ಯ ಓಡಾಡುವ ರಸ್ತೆಯಲ್ಲೋ ಹೀಗಾಗಿಬಿಟ್ಟರೆ ಉಸಿರಾಟ ಕೂಡ ಕಷ್ಟವಾಗುತ್ತದೆ. ಆದರೆ ಈ ದುರ್ವಾಸನೆ ವಿಷಯ ಈಗೇಕೆ ಅಂತೀರಾ? ವಿಷಯ ಏನಂದ್ರೆ, ಜಮ್ಮು ಕಾಶ್ಮೀರದಲ್ಲಿ ಕಲ್ಲೆಸೆತಗಾರರನ್ನು ನಿಯಂತ್ರಿಸಲು ಏನೆಲ್ಲ ಹರ ಸಾಹಸ ಮಾಡಿ ಸೋತಿರುವ ಸೇನೆ, ಇನ್ನು ‘ದುರ್ವಾಸನೆಯ ಬಾಂಬ್‌’ (ಸ್ಟಿಂಕ್‌ ಬಾಂಬ್‌) ಗಳನ್ನು ಕೈಗೆತ್ತಿಕೊಳ್ಳಲಿದೆ!

Advertisement

ಕಣಿವೆ ರಾಜ್ಯದಲ್ಲಿ ಶಿಲಾಯುಗದವರಂತೆ ಕಲ್ಲುಗಳನ್ನು ಗುಡ್ಡೆ ಹಾಕಿಕೊಂಡು ರಕ್ಷಣಾ ಸಿಬಂದಿ ಮೇಲೆ ಎಸೆಯುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಭಾರತ ಸೇನೆ ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಆರಂಭದಲ್ಲಿ ಕಲ್ಲೆಸೆತಗಾರರ ವಿರುದ್ಧ ಪೆಲೆಟ್‌ ಗನ್‌ ಬಳಸುತ್ತಿದ್ದ ಸೇನೆ, ಸಾಧ್ಯವಾದಷ್ಟು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಪೆಲೆಟ್‌ ಗನ್‌ ಬಳಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೈನಿಕರ ಕೈಗಳಿಂದ ಈ ಗನ್‌ ಕಸಿದುಕೊಂಡು ಫೈಬರ್‌ ಹಾಗೂ ಬೆತ್ತದ ಗುರಾಣಿ ನೀಡಲಾಯಿತು. ಇದರಿಂದ ಕಲ್ಲೆಸೆತಗಾರರ ಹಾವಳಿ ಮತ್ತಷ್ಟು ತೀವ್ರವಾಯಿತು. ಇವರ ಕಾಟದಿಂದ ಬೇಸತ್ತ ಸೇನೆ ಮಾನವ ಗುರಾಣಿಯನ್ನೂ ಬಳಸಿದ್ದು ಈಗ ಇತಿಹಾಸ.

ದೇಶದ ‘ಸುಗಂಧ ರಾಜಧಾನಿ’ ಖ್ಯಾತಿಯ ಉತ್ತರ ಪ್ರದೇಶದ ಕನೌಜ್‌ ನಗರ ಈಗ ದುರ್ಗಂಧದ ಬಾಂಬ್‌ ತಯಾರಿಸಿದೆ! ಜಮ್ಮು ಕಾಶ್ಮೀರದ ಕಲ್ಲೆಸೆತಗಾರರನ್ನು ನಿಯಂತ್ರಿಸಲು ಈ ಬಾಂಬ್‌ಗಳನ್ನು ಬಳಸಲು ಸೇನೆ ಚಿಂತನೆ ನಡೆಸಿದೆ. ಕನೌಜ್‌ನ ಫ್ರಾಗ್ರೆನ್ಸ್‌ ಆ್ಯಂಡ್‌ ಫ್ಲೇವರ್‌ ಡೆವಲಪ್‌ಮೆಂಟ್‌ ಸೆಂಟರ್‌ನ (ಎಫ್ಎಫ್ಡಿಸಿ) ವಿಜ್ಞಾನಿಗಳು ತಯಾರಿಸಿರುವ ‘ದುರ್ಗಂಧದ ಬಾಂಬ್‌’ ಕ್ಯಾಪ್ಸೂಲ್‌ನಷ್ಟೇ ಚಿಕ್ಕದಾಗಿರುತ್ತದೆ. ಈ ಪುಟ್ಟ ಬಾಂಬ್‌ ಅನ್ನು ಪೆಲೆಟ್‌ ಗನ್‌ ಹಾಗೂ ಅಶ್ರುವಾಯು ಪ್ರಯೋಗಿಸಲು ಬಳಸುವ ಗನ್‌ಗಳಲ್ಲಿ ಬುಲೆಟ್‌ ರೀತಿ ಬಳಸಬಹುದು. ಹೀಗೆ ಬಳಸಿದ ಬಾಂಬ್‌ ಉದ್ರಿಕ್ತ ಗುಂಪಿನ ನಡುವೆ ಬಿದ್ದಾಗ ಅದರಿಂದ ಮಾನವನ ಮಲದ ವಾಸನೆ ಹೋಲುವ ದುರ್ಗಂಧ ಹೊರಹೊಮ್ಮುತ್ತದೆ. ಇದನ್ನು ಸಹಿಸಿಕೊಳ್ಳಲಾಗದೆ ಕಲ್ಲೆಸೆತಗಾರರು ದಿಕ್ಕಾಪಾಲಾಗಿ ಓಡುತ್ತಾರೆ ಎಂಬುದು ಲಾಜಿಕ್‌.

ಸಣ್ಣ ಕ್ಯಾಪ್ಸೂಲ್‌ಗ‌ಳಲ್ಲಿ ದುರ್ಗಂಧ ಬೀರುವ ಕೆಮಿಕಲ್‌ಗ‌ಳನ್ನು ತುಂಬಿ ಸ್ಟಿಂಕ್‌ ಬಾಂಬ್‌ಗಳನ್ನು ತಯಾರಿಸಲಾಗುತ್ತದೆ. ಇದನ್ನು ಶೀಘ್ರವೇ ಗ್ವಾಲಿಯರ್‌ನ ರಕ್ಷಣಾ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಡಿಆರ್‌ಡಿಒ ಹಾಗೂ ರಕ್ಷಣಾ ಸಚಿವಾಲಯದ ಅನುಮತಿ ದೊರೆತ ನಂತರವೇ ಸೇನೆ ಈ ಬಾಂಬ್‌ಗಳನ್ನು ಕಲ್ಲೆಸೆತಗಾರರ ವಿರುದ್ಧ ಬಳಸಬಹುದು’ ಎಂದು ಎಫ್ಎಫ್ಡಿಸಿ ಪ್ರಧಾನ ನಿರ್ದೇಶಕ ಶಕ್ತಿ ವಿನಯ್‌ ಶುಕ್ಲಾ  ತಿಳಿಸಿದ್ದಾರೆ.

ಏನಿದು ಸ್ಟಿಂಕ್‌ ಬಾಂಬ್‌ ?
ಸ್ಟಿಂಕ್‌ ಬಾಂಬ್‌ ಎಂಬುದು ಮಾನವನ ಮಲದ ವಾಸನೆಯನ್ನು ಹೋಲುವ ದುರ್ಗಂಧವನ್ನು ಹೊರಬಿಡುವಂಥ ಒಂದು ಸಣ್ಣ ಬಾಂಬ್‌. ಅಮೋನಿಯಂ ಸಲ್ಫೆ „ಡ್‌, ಹೈಡ್ರೋಜನ್‌ ಸಲ್ಫೆ „ಡ್‌ ಒಳಗೊಂಡಂತೆ ಒಟ್ಟು  ಎಂಟು ರಾಸಾಯನಿಕ ಬಳಸಿ ಈ ಬಾಂಬ್‌ ತಯಾರಿಸಲಾಗುತ್ತದೆ. ಬಾಂಬ್‌ ಪ್ರಯೋಗಿಸಿದಾಗ ಸಹಿಸಿಕೊಳ್ಳಲು ಅಸಾಧ್ಯವಾಗಿರುವಂಥ ದುರ್ನಾತ ಅದರಿಂದ ಹೊರಹೊಮ್ಮುತ್ತದೆ. ಆದರೆ ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ. ಪ್ರಸ್ತುತ ಈ ದುರ್ಗಂಧದ ಬಾಂಬ್‌ ಅನ್ನು  ಇಸ್ರೇಲ್‌ ಹಾಗೂ ಅಮೆರಿಕ ಸೇನೆಗಳು ಬಳಸುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next