ನವದೆಹಲಿ: ಭಾರತೀಯ ಸೇನೆಯು ತನ್ನ ಯೋಧರಿಗೆ ಪೂರ್ವ ಲಡಾಕ್ ನಲ್ಲಿ ವಾಸಿಸಲು ಅನುಕೂಲವುಳ್ಳ ಅತ್ಯಾಧುನಿಕ ಸೇನಾ ಶಿಬಿರವನ್ನು ಆರಂಭಿಸಿದೆ. ನವೆಂಬರ್ ತಿಂಗಳಲ್ಲಿ ಮೈನಸ್ 30-40 ಡಿಗ್ರಿ ಮೈಕೊರೆಯುವ ಚಳಿಯಿದ್ದು, ಹಿಮಪಾತ ಕೂಡ ಆಗುವುದರಿಂದ ಯೋಧರ ಹಿತದೃಷ್ಟಿಯಿಂದ ಉತ್ತಮ ಸೌಲಭ್ಯವುಳ್ಳ ವಾಸಿಸುವ ಮನೆಯನ್ನು ಸ್ಥಾಪಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ಐದು ತಿಂಗಳಿನಿಂದ ಭಾರತ -ಚೀನಾ ನಡುವೆ, ಪ್ರಮುಖವಾಗಿ ಪೂರ್ವ ಲಡಾಕ್ ನಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದರಿಂದ ಈ ವಿಶೇಷ ಸೌಲಭ್ಯವುಳ್ಳ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.
ಚಳಿಗಾಲದಲ್ಲಿ ನಿಯೋಜಿಸಲಾಗಿರುವ ಸೈನಿಕರ ಕಾರ್ಯಾಚರಣೆಯ ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಮಾತ್ರವಲ್ಲದೆ ಈ ವಲಯದಲ್ಲಿ ನಿಯೋಜಿಸಲಾಗಿರುವ ಎಲ್ಲಾ ಸೈನಿಕರಿಗೆ ಅನುಕೂಲವಾಗುವಂತೆ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ ಎಂದು ಭಾರತೀಯ ಸೇನೆಯು ತಿಳಿಸಿದೆ.
ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಹಾಗೂ ಪಾಕ್ ಉದ್ದಟತನ ಮೆರೆಯುತ್ತಿರುವ ಬೆನ್ನಲ್ಲೇ, ಭಾರತೀಯ ಸೇನೆಯು ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈನಿಕರನ್ನು ಸ್ಥಳದಲ್ಲಿ ನಿಯೋಜಿಸುತ್ತಿರುವುದು ಮಹತ್ವ ಬೆಳವಣಿಗೆಯೆನಿಸಿದೆ.
ಸಮಗ್ರ ಸೌಲಭ್ಯಗಳನ್ನು ಹೊಂದಿರುವ ಈ ಸ್ಮಾರ್ಟ್ ಕ್ಯಾಂಪ್‌ಗಳ ನಲ್ಲಿ ವಿದ್ಯುತ್, ಬಿಸಿ ನೀರು, ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಅತ್ಯಾಧುನಿಕ ಪರಿಕರಗಳಿವೆ. ಚಳಿಗಾಲದಲ್ಲೂ ಬೆಚ್ಚನೆಯ ವಾತಾವರಣ ಕಲ್ಪಿಸುವಂತೆ ಈ ಮನೆಯನ್ನು ನಿರ್ಮಿಸಲಾಗಿದೆ.
ಗಲ್ವಾನ್ ಘರ್ಷಣೆಯ ನಂತರ ಭಾರತ ಮತ್ತು ಚೀನಾ ಗಡಿಯಲ್ಲಿ ಯುದ್ದದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಎರಡೂ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸುತ್ತಿವೆ.