Advertisement

Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!

05:46 PM Jun 30, 2024 | Team Udayavani |

ನವದೆಹಲಿ: ಭಾರತೀಯ ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಹಪಾಠಿಗಳಿಬ್ಬರು ಸೇನೆಯ ಎರಡು ವಿಭಾಗಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಭೂ ಸೇನೆಗೆ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ನೌಕಾ ಪಡೆಯ ನೂತನ ಮುಖ್ಯಸ್ಥರಾಗಿದ್ದಾರೆ.

Advertisement

ಭಾರತೀಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಹಾಗೂ ಭೂ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ಉಪೇಂದ್ರ ದ್ವಿವೇದಿ ಮಧ್ಯಪ್ರದೇಶದ ರೇವಾದಲ್ಲಿನ ಸೈನಿಕ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. 1970ರ ದಶಕದ ಆರಂಭದಲ್ಲಿ ಇಬ್ಬರೂ 5ಎ ತರಗತಿಯಿಂದ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದಿದ್ದರು.

ಇಬ್ಬರೂ ಅಧಿಕಾರಿಗಳ ಹಾಜರಿ ಸಂಖ್ಯೆ ನಡುವೆಯೂ ಹೆಚ್ಚಿನ ಅಂತರವಿರಲಿಲ್ಲ. ದ್ವಿವೇದಿ ನೋಂದಣಿ ಸಂಖ್ಯೆ 931 ಹಾಗೂ ತ್ರಿಪಾಠಿ ನೋಂದಣಿ ಸಂಖ್ಯೆ 938 ಇತ್ತು. ಶಾಲೆಯಲ್ಲಿನ ಆರಂಭದ ದಿನಗಳಲ್ಲಿ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ರಕ್ಷಣಾ ವಿಭಾಗದಲ್ಲಿ ಬೇರೆ ಬೇರೆ ದಿಕ್ಕು ಹಿಡಿದರೂ, ಪ್ರತಿ ಹಂತದಲ್ಲಿಯೂ ಸಂಪರ್ಕದಲ್ಲಿದ್ದರು.

ಮೇ ತಿಂಗಳಲ್ಲಿ ಅಧಿಕಾರ ವಹಿಸಿದ್ದ ತ್ರಿಪಾಠಿ

ಸೇನೆಯಲ್ಲಿನ ಹಿರಿಯ ನಾಯಕತ್ವದಲ್ಲಿನ ಗೆಳೆತನವು ಪಡೆಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಇಬ್ಬರೂ ಅಧಿಕಾರಿಗಳ ಬಲ್ಲ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಡ್ಮಿರಲ್ ತ್ರಿಪಾಠಿ ಮೇ 1ರಂದು ಭಾರತೀಯ ನೌಕಾ ಪಡೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಲೆ. ಜನರಲ್ ದ್ವಿವೇದಿ ಭಾನುವಾರ (ಜೂ. 30)  ಸೇನಾ ಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

” ಭಾರತೀಯ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿ ಇಬ್ಬರು ಅಸಾಧಾರಣವಾದ ವಿದ್ಯಾರ್ಥಿಗಳ ಪೋಷಿಸುವ ಅಪರೂಪದ ಗೌರವ. ಮಧ್ಯಪ್ರದೇಶದ ರೇವಾದ ಸೈನಿಕ ಶಾಲೆಯಲ್ಲಿ ಓದಿ, 50 ವರ್ಷಗಳ ಬಳಿಕ ತಮ್ಮ ತಮ್ಮ ವಿಭಾಗಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.

ಮನೋಜ್ ಪಾಂಡೆ ನಿವೃತ್ತಿ

2022ರ ಮೇ ನಿಂದ ಭಾರತೀಯ ಭೂ ಸೇನೆ ಮುಖ್ಯಸ್ಥರಾಗಿದ್ದ ಮನೋಜ್ ಪಾಂಡೆ ನಿವೃತ್ತರಾಗಿದ್ದು, ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ವಹಿಸಿಕೊಂಡರು. ದ್ವಿವೇದಿ  ಇದಕ್ಕೂ ಮುನ್ನ ಸೇನಾ ಸಿಬ್ಬಂದಿ ಉಪ ಮುಖ್ಯಸ್ಥರಾಗಿದ್ದರು. ಅವರು ಪರಮ ವಸಿಷ್ಠ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ಮೂರು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚಾರ್ಜ್ ಕಮೆಂಡೇಷನ್ ಕಾರ್ಡ್‌ಗಳನ್ನು ಪಡೆದಿದ್ದಾರೆ.

ಮಧ್ಯಪ್ರದೇಶ ಮೂಲದ ಉಪೇಂದ್ರ ದ್ವಿವೇದಿ, 1981ರ ಜನವರಿಯಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರ್ಪಡೆಯಾಗಿದ್ದರು. 1984ರಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ 18ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡಿದ್ದರು. ಕಾಶ್ಮೀರ ಕಣಿವೆ ಹಾಗೂ ರಾಜಸ್ಥಾನ ಮರುಭೂಮಿಗಳಲ್ಲಿ ಅವರು ಸೇನೆಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next