Advertisement

ಲಡಾಖ್‌ ಭದ್ರತೆ ಯಶಸ್ವಿ ಬೆನ್ನಲ್ಲೇ ಸಾಗರ ಪ್ರಹಾರಕ್ಕೆ ಭಾರತೀಯ ಸೇನೆ ಸನ್ನದ್ಧ!

12:23 AM Nov 01, 2020 | sudhir |

ಹೊಸದಿಲ್ಲಿ: ಲಡಾಖ್‌ನ ತಾಪಮಾನ ಶೂನ್ಯಕ್ಕೂ ಕೆಳಗೆ ಜಾರಿದೆ. ಎಲ್‌ಎಸಿಯಲ್ಲಿ ಚೀನ ಸೇನೆಯನ್ನು ಎಲ್ಲ ದಿಕ್ಕಿನಿಂದಲೂ ಕಟ್ಟಿಹಾಕಿ ಯಶಸ್ವಿಯಾಗಿರುವ ಭಾರತೀಯ ಸೇನೆ, ಈಗ ಸಮುದ್ರ ವಲಯದಲ್ಲಿ ಪಿಎಲ್‌ಎ ನೌಕಾಪಡೆಗೆ ಸಡ್ಡು ಹೊಡೆಯಲು ಸಿದ್ಧತೆ ನಡೆಸಿದೆ.

Advertisement

ಈಗಾಗಲೇ ಲಡಾಖ್‌ನಲ್ಲಿ ಸೇನಾ ತುಕಡಿಗಳು ಅಗತ್ಯ ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕ ನಿರ್ಮಿತ ಹಿಮಪಾತ ರಕ್ಷಕ ಉಡುಪು ಧರಿಸಿ ಭದ್ರಕೋಟೆ ಕಟ್ಟಿವೆ. ಪೂರ್ವ ನೌಕಾ ಕಮಾಂಡ್‌ ವಲಯ ಮತ್ತು ದ್ವೀಪಸಮೂಹಗಳಾದ ಅಂಡಮಾನ್‌- ನಿಕೋಬಾರ್‌, ಲಕ್ಷದ್ವೀಪಗಳಲ್ಲಿ ಚೀನಕ್ಕೆ ಪ್ರತ್ಯಾಘಾತ ನೀಡಲು ವೇದಿಕೆ ಸಜ್ಜಾಗಿದೆ. ಮಂಗಳವಾರದಿಂದ “ಕ್ವಾಡ್‌’ ಕೂಟದ ಮಲಬಾರ್‌ ಸಮರಾಭ್ಯಾಸ ಕೂಡ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಮುದ್ರ ಮೇರೆಗಳಲ್ಲಿ ಸೇನೆ ಭದ್ರತೆ ಹೆಚ್ಚಿಸಲು ಮುಂದಾಗಿದೆ.

ಎಲ್ಲೆಲ್ಲಿ ಭದ್ರತೆ?: ಅಂಡಮಾನ್‌, ನಿಕೋಬಾರ್‌, ಲಕ್ಷದ್ವೀಪ, ತಿರುವನಂತಪುರಗಳಲ್ಲದೆ ಕಾರವಾರ ನೌಕಾನೆಲೆಗಳಲ್ಲೂ ಅಗತ್ಯ ನೌಕಾಭದ್ರತೆ ಹೆಚ್ಚಿಸಲು ಪಶ್ಚಿಮ ನೌಕಾ ಕಮಾಂಡ್‌ ಸೂಚಿಸಿದೆ. ಪಾಕಿಸ್ಥಾನದ ನೌಕಾಪಡೆ ಮತ್ತು ಚೀನ ದಿಕ್ಕಿನ ನೌಕಾ ಬೆದರಿಕೆಗಳಿಗೆ ಪ್ರತ್ಯುತ್ತರ ನೀಡಲು ಎಲ್ಲ ದಿಕ್ಕಿನಿಂದಲೂ ಯುದ್ಧನೌಕೆಗಳು ಸಿದ್ಧತೆ ಮಾಡಿಕೊಳ್ಳಲಿವೆ.

3 ಮಾರ್ಗ ಮೇಲೆ ನಿಗಾ: ಸಮುದ್ರ ವ್ಯಾಪ್ತಿಯಲ್ಲಿ ನೌಕಾಪಡೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಯು ಪಡೆಯ ಫೈಟರ್‌ ಜೆಟ್‌ಗಳು ಪ್ರಮುಖ 3 ಮಾರ್ಗಗಳ ಮೇಲೆ ಕಣ್ಣಿಟ್ಟಿವೆ. ಮಲಾಕ್ಕಾ, ಸುಂಡಾ ಮತ್ತು ಲೊಂಬಾರ್ಡ್‌ ಜಲಸಂಧಿ ಸುತ್ತಮುತ್ತಲಿನ ಯಾವುದೇ ದಾಳಿಯನ್ನೂ ಇವು ಯಶಸ್ವಿಯಾಗಿ ಭೇದಿಸಬಲ್ಲವು. ದಕ್ಷಿಣ ಚೀನಾ ಸಮುದ್ರದಿಂದ ಹಿಂದೂ ಮಹಾಸಾಗರ ಪ್ರವೇಶಿಸಲು ಈ 3 ಮಾರ್ಗಗಳನ್ನಷ್ಟೇ ಬಳಸಬೇಕಾದ್ದರಿಂದ, ಚೀನಾ ನೌಕಾಪಡೆಗೆ ಅಕ್ಷರಶಃ ದಿಕ್ಕೆಡಲಿದೆ.

ಒಂದು ವೇಳೆ ಚೀನ ಮಲಾಕ್ಕಾ ಜಲಸಂಧಿಯಿಂದ ಬೇರೆ ಜಲಸಂಧಿಗಳತ್ತ ಯುದ್ಧನೌಕೆಯ ದಿಕ್ಕು ಬದಲಾಯಿ ಸಿದರೂ, ಸಾರಿಗೆ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಭದ್ರತಾ ತಜ್ಞರು ವಿಶ್ಲೇಷಿಸಿದ್ದಾರೆ.

Advertisement

ಪಾಕ್‌ನಿಂದ ದಾಳಿ
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೇನೆಯು ಶನಿವಾರ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸಿದೆ. ಹಿರಾನಗರ ವಲಯದ ಚಾಂದ್ವಾ, ಮಯಾರಿ ಮತ್ತು ಫ‌ಖೀರಾದಲ್ಲಿ ಭಾರತೀಯ ಸೇನೆಯ ಮುಂಚೂಣಿ ನೆಲೆಗಳು ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಡ್ರೋನ್‌ ಹಿಮ್ಮೆಟ್ಟಿಸಿದ ಯೋಧರು
ಭಾರತವನ್ನು ಪ್ರವೇಶಿಸಲು ಪಾಕಿಸ್ತಾನದ ಡ್ರೋನೊಂದು ಮಾಡಿದ ಯತ್ನವನ್ನು ಸೇನೆ ವಿಫ‌ಲಗೊಳಿಸಿದೆ. ಪಂಜಾ ಬ್‌ನ ಗುರುದಾಸಪುರದ ಠಾಕೂರ್‌ಪುರ ಎಂಬ ಹಳ್ಳಿ ಭಾರತ-ಪಾಕ್‌ ಗಡಿಪ್ರದೇಶವಾಗಿದೆ. ಇಲ್ಲಿ ಯೋಧರು ಪಹರೆಗೆ ನಿಯೋಜಿಸಲ್ಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ 11.34ರ ಹೊತ್ತಿಗೆ ಏನೋ ಗುನುಗುವಂತಹ ಸದ್ದು ಕೇಳಿದೆ. ಅದು ಡ್ರೋನ್‌ ಎಂದು ಗೊತ್ತಾದ ಅನಂತರ ಭದ್ರತಾ ಸಿಬಂದಿ ದೇವೇಂದರ್‌ ಕುಮಾರ್‌, ಅಶೋಕ್‌ ಕುಮಾರ್‌ ಅದರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಡ್ರೋನ್‌ ಹಿಮ್ಮೆಟ್ಟಿದೆ. 12.22ರ ಹೊತ್ತಿಗೆ ಇನ್ನೊಮ್ಮೆ ಇದೇ ರೀತಿಯ ಇನ್ನೊಂದು ಯತ್ನವನ್ನು ವಿಫ‌ಲಗೊಳಿಸಲಾಗಿದೆ. ಆ ಡ್ರೋನ್‌ ಭಾರತದ ಭೂಪ್ರದೇಶದೊಳಕ್ಕೆ 1800 ಮೀ.ಗಳಷ್ಟು ಪ್ರವೇಶಿಸಿತ್ತು. 400 ಮೀ. ಎತ್ತರದಲ್ಲಿದ್ದ ಅದರ ಮೇಲೆ ತೀವ್ರ ದಾಳಿ ನಡೆಸಿದ ಮೇಲೆ ಡ್ರೋನ್‌ ಹಿಂದಕ್ಕೆ ಸರಿದಿದೆ. ಈ ಬಗ್ಗೆ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next