ಒಟ್ಟಾವಾ: ಖ್ಯಾತ ಭಾರತೀಯ-ಅಮೇರಿಕನ್ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು 75 ವರ್ಷಗಳ ಹಿಂದೆ ಸಂಖ್ಯಾಶಾಸ್ತ್ರೀಯ ಚಿಂತನೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಸ್ಮರಣೀಯ ಕೆಲಸಕ್ಕಾಗಿ 2023 ರ ಸಾಲಿನ ನೊಬೆಲ್ ಪ್ರಶಸ್ತಿಗೆ ಸಮಾನವಾದ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕೆನಡಾದ ಒಟ್ಟಾವಾದ ಒಂಟಾರಿಯೊದಲ್ಲಿನ ನಡೆಯುವ ದ್ವೈವಾರ್ಷಿಕ ಇಂಟರ್‌ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ವರ್ಲ್ಡ್ ಸ್ಟ್ಯಾಟಿಸ್ಟಿಕ್ಸ್ ಕಾಂಗ್ರೆಸ್‌ನಲ್ಲಿ 102 ರ ಹರೆಯದ ಸಿ.ಆರ್.ರಾವ್ ಜುಲೈನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. 80,000 ಡಾಲರ್ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನು ಸ್ವೀಕರಿಸಲಿದ್ದಾರೆ.
“ಈ ಪ್ರಶಸ್ತಿಯನ್ನು ನೀಡುವಾಗ, ನಾವು ಸಿ.ಆರ್. ರಾವ್ ಅವರ ಸ್ಮರಣೀಯ ಕೆಲಸವನ್ನು ನೆನಪಿಸುತ್ತೇವೆ, ಆ ಕಾಲದಲ್ಲಿ ಸಂಖ್ಯಾಶಾಸ್ತ್ರೀಯ ಚಿಂತನೆಯ ಕ್ರಾಂತಿಗೆ ಕಾರಣವಾಗಿತ್ತು. ವ್ಯಾಪಕ ಶ್ರೇಣಿಯ ವಿಭಾಗಗಳಲ್ಲಿ ವಿಜ್ಞಾನದ ಮಾನವ ತಿಳುವಳಿಕೆಯ ಮೇಲೆ ಅಗಾಧವಾದ ಪ್ರಭಾವವನ್ನು ಬೀರುವುದನ್ನು ಮುಂದುವರೆಸಿದೆ” ಎಂದು ಇಂಟರ್‌ನ್ಯಾಶನಲ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಗೈ ನಾಸನ್ ಹೇಳಿದರು.
ಕೋಲ್ಕತಾ ಮ್ಯಾಥಮೆಟಿಕಲ್ ಸೊಸೈಟಿಯ ಬುಲೆಟಿನ್‌ನಲ್ಲಿ ಪ್ರಕಟವಾದ ಅವರ ಗಮನಾರ್ಹ 1945 ರ ಪ್ರಬಂಧದಲ್ಲಿ, ರಾವ್ ಅವರು ಮೂರು ಮೂಲಭೂತ ಫಲಿತಾಂಶಗಳನ್ನು ಪ್ರದರ್ಶಿಸಿದ್ದರು, ಅದು ಆಧುನಿಕ ಅಂಕಿಅಂಶ ಕ್ಷೇತ್ರಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಇಂದು ವಿಜ್ಞಾನದಲ್ಲಿ ಹೆಚ್ಚು ಬಳಸಲಾಗುವ ಸಂಖ್ಯಾಶಾಸ್ತ್ರೀಯ ಸಾಧನಗಳನ್ನು ಒದಗಿಸಿದೆ ಎಂದು ಫೌಂಡೇಶನ್ ಎಪ್ರಿಲ್ 1 ರಂದು ಹೇಳಿಕೆಯಲ್ಲಿ ತಿಳಿಸಿದೆ.