Advertisement

ರೆಮ್ ಡೆಸಿವಿಯರ್ ಆಗಲಿದೆಯೇ ಕೋವಿಡ್ 19 ಸೋಂಕಿಗೆ ರಾಮಬಾಣ?

08:27 AM May 02, 2020 | Hari Prasad |

ಅಮೆರಿಕ ಕೋವಿಡ್‌-19 ಚಿಕಿತ್ಸೆಗೆ ರೆಮ್‌ಡೆಸಿವಿಯರ್‌ ಎಂಬ ಔಷಧ ಪರಿಣಾಮಕಾರಿಯಾಗಬಲ್ಲದು ಎಂದು ಭರವಸೆಯ ಮಾತನಾಡುತ್ತಿದೆ. ಕೋವಿಡ್ ಸೋಂಕಿತರನ್ನು ಈ ಔಷಧದ ಮೂಲಕ ಬೇಗನೇ ಗುಣಪಡಿಸಬಹುದು ಎಂಬುದಕ್ಕೆ ಸ್ಪಷ್ಟ ಸಬೂತು ಸಿಕ್ಕಿದೆ ಎಂದದು ಹೇಳುತ್ತಿದೆ. ಆದಾಗ್ಯೂ, ರೆಮ್‌ಡಿಸಿವಿಯರ್‌ ನಿಜಕ್ಕೂ ಪರಿಣಾಮಕಾರಿಯೇ ಎನ್ನುವುದು ವ್ಯಾಪಕ ಪರೀಕ್ಷೆಗಳ ನಂತರವೇ ತಿಳಿಯಲಿದೆಯಾದರೂ, ಒಂದು ವೇಳೆ ಇದೇನಾದರೂ ಪರಿಣಾಮಕಾರಿ ಎನ್ನುವುದು ರುಜುವಾತಾದರೆ, ನಿಸ್ಸಂಶಯವಾಗಿಯೂ ಜಗತ್ತಿಗೆ ಅತಿದೊಡ್ಡ ಶುಭ ಸುದ್ದಿಯಾಗಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ಇತ್ತೀಚೆಗಷ್ಟೇ ಚೀನ ತನ್ನ ಕ್ಲಿನಿಕಲ್‌ ಟ್ರಯಲ್‌ನಲ್ಲಿ ರೆಮ್‌ಡೆಸಿವಿಯರ್‌ ಅನ್ನು ‘ಅಪ್ರಭಾವಿ’ ಎಂದು ತಿಳಿದುಬಂದಿದೆ ಎಂದು ಹೇಳಿತ್ತು…

Advertisement

ಎಬೊಲಾ ವಿರುದ್ಧ ಬಳಕೆಯಾಗಿತ್ತು
ರೆಮ್‌ಡೆಸಿವಿಯರ್‌ ಎನ್ನುವುದು ಅಮೆರಿಕದ ಫಾರ್ಮಾ ಕಂಪೆನಿ Gilead ಉತ್ಪಾದಿಸುವ ಪ್ರಾಯೋಗಿಕ ವೈರಾಣು ವಿರೋಧಿ ಔಷಧವಾಗಿದ್ದು, ಈ ಹಿಂದೆ ಇದನ್ನು ಎಬೊಲಾ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗಿತ್ತು.

ಆರಂಭಿಕ ಸಮಯದಲ್ಲಿ ಬಂದ ಗುಣಾತ್ಮಕ ಫ‌ಲಿತಾಂಶಗಳ ಅನಂತರ ಅಮೆರಿಕ ಭಾರೀ ಪ್ರಮಾಣದಲ್ಲಿ ಆಫ್ರಿಕನ್‌ ರಾಷ್ಟ್ರಗಳಿಗೆ ರಫ್ತು ಮಾಡಿತ್ತು. ಆದಾಗ್ಯೂ, ಆಫ್ರಿಕಾದಲ್ಲಿ ಇದು ಎಬೊಲಾ ವಿರುದ್ಧ ಅಷ್ಟು ಪರಿಣಾಮಕಾರಿಯಾಗಲಿಲ್ಲ ಎನ್ನುವ ದೂರು ಇದೆ.

ಆದರೆ ಈಸ್ಟ್‌ ರೆಸ್ಪಿರೇಟರಿ ಸಿಂಡ್ರಮ್‌ (ಮರ್ಸ್‌) ಹಾಗೂ ಸೀವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್‌ (ಸಾರ್ಸ್‌) ತಡೆಯಲ್ಲಿ ಇದು ಉತ್ತಮ ಫ‌ಲಿತಾಂಶ ತೋರಿಸಿತ್ತು. (ಆದರೆ ಅವೆರಡೂ ಪ್ರಯೋಗಗಳನ್ನು ಪ್ರಾಣಿಗಳ ಮೇಲೆ ಮಾಡಲಾಗಿತ್ತು).

ಒಂದು ವೈರಸ್‌ ತಾನು ಬಲಿಷ್ಠವಾಗುವುದಕ್ಕಾಗಿ ರೆಪ್ಲಿಕೇಟ್‌ ಆಗುತ್ತದೆ (ತನ್ನದೇ ಪ್ರತಿಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ). ಈ ರೀತಿ ಆಗಲು ಕೋವಿಡ್ 19 ವೈರಸ್‌ ನಿರ್ದಿಷ್ಟ ಕಿಣ್ವವನ್ನು (ಎಂಜೈಮ್‌ಗಳ) ಬಳಸಿಕೊಳ್ಳುತ್ತವೆ.

Advertisement

ರೆಮ್‌ಡೆಸಿವಿಯರ್‌ ಔಷಧ ಕೆಲಸ ಮಾಡುವುದು ಈ ಹಂತದಲ್ಲಿ. ಅಂದರೆ, ಇದು ಆ ನಿರ್ದಿಷ್ಟ ಎಂಜೈಮ್‌ಅನ್ನು ತಡೆಯುವ ಮೂಲಕ, ವೈರಸ್‌ ಬೆಳವಣಿಗೆಗೆ ಅಡ್ಡಗಾಲಾಗಿ ಪರಿಣಮಿಸುತ್ತದೆ ಎನ್ನಲಾಗಿದೆ.

ಮೊದಲು ಸ್ಪಷ್ಟವಾಗಬೇಕು
ಲಂಡನ್‌ ಯುಸಿಎನ್‌ಎಲ್‌ ಕಾಲೇಜಿನ ಕ್ಲಿನಿಕಲ್‌ ಟ್ರಯಲ್‌ ವಿಭಾಗದ ನಿರ್ದೇಶಕ ಪ್ರೊಫೆಸರ್‌ ಮಹೇಶ್‌ ಮರ್ಮಾರ್‌ ಅವರು ‘ಇದನ್ನು ವ್ಯಾಪಕವಾಗಿ ಬಳಸುವ ಮುನ್ನ ಅನೇಕ ಸಂಗತಿಗಳು ಸ್ಪಷ್ಟವಾಗಬೇಕಿದೆ.

ಇದು ಜನರನ್ನು ಐಸಿಯು ತಲುಪುವುದರಿಂದ ತಡೆಯಬಲ್ಲದೇ? ಎಲ್ಲ ವಯೋಮಾನದವರಿಗೂ ಸೂಕ್ತವೇ? ಅಥವಾ ನಿರ್ದಿಷ್ಟ ವಯೋಮಾನದವರಿಗೆ ಸಹಾಯ ಮಾಡುತ್ತದೆಯೇ? ಎನ್ನುವುದೆಲ್ಲ ಸ್ಪಷ್ಟವಾಗಬೇಕಿದೆ” ಎನ್ನುತ್ತಾರೆ.

ಈಗ ಹೇಗೆ ನಡೆಯಿತು ಪರೀಕ್ಷೆ?
ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಈ ಔಷಧದ ಮೇಲೆ ಟ್ರಯಲ್‌ ನಡೆಸಿದ್ದು, ಈ ಪರೀಕ್ಷೆಯಲ್ಲಿ 1063 ಜನ ಸೋಂಕಿತರು ಭಾಗಿಯಾಗಿದ್ದರು.

ಇವರಲ್ಲಿ ಕೆಲವರಿಗೆ ರೆಮ್‌ಡಿಸಿವಿಯರ್‌ ಔಷಧ ಕೊಡಲಾಯಿತು. ಈ ಔಷಧ ಪಡೆಯದವರು 15 ದಿನಗಳನಂತರ ಚೇತರಿಸಿಕೊಂಡರೆ, ರೆಮ್‌ಡಿಸಿವಿಯರ್‌ ಪಡೆದವರು ಸರಾಸರಿ 11 ದಿನಗಳಲ್ಲೇ ಚೇತರಿಸಿಕೊಂಡಿದ್ದಾರೆ.

ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗ ತಡೆ ಸಂಸ್ಥೆಯ ಮುಖ್ಯಸ್ಥ ಡಾ. ಆ್ಯಂಥನಿ ಫಾಚಿ ಅವರ ಪ್ರಕಾರ, ರೆಮ್‌ಡೆಸಿವಿಯರ್‌ ಔಷಧವು, ಕೋವಿಡ್ ಸೋಂಕಿತರನ್ನು ಗುಣಪಡಿಸುವಲ್ಲಿ ಪ್ರಭಾವಿಯೆಂದು ಸಾಬೀತಾಗಿದೆ.

ಗಮನಿಸಬೇಕಾದ ಸಂಗತಿಯೆಂದರೆ, ಸೋಂಕು ನಿವಾರಣೆಯ ವಿಚಾರದಲ್ಲಿ ಇದು ವೈರಸ್‌ಗೆ ತಡೆಯಾಗುತ್ತಿದೆಯಾದರೂ, ಮರಣ ಪ್ರಮಾಣದ ಸಂಖ್ಯೆಯಲ್ಲೇನೂ ಹೆಚ್ಚು ಅಂತರ ಕಾಣುತ್ತಿಲ್ಲ.

ಚೀನದಲ್ಲಿ ಫೇಲ್‌ ಆಗಿತ್ತು
ಇತ್ತ ಅಮೆರಿಕವು ರೆಮ್‌ಡಿಸಿವಿಯರ್‌ ಬಗ್ಗೆ ಸಕಾರಾತ್ಮಕ ಸೂಚನೆ ಕೊಡುತ್ತಿದ್ದರೆ, ಇತ್ತೀಚೆಗಷ್ಟೇ ಚೀನ ಇದೇ ಔಷಧದ ಮೇಲೆ ನಡೆಸಿದ ಪರೀಕ್ಷೆಯ ವರದಿಯು ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಚೀನ ರೆಮ್‌ಡೆಸಿವಿಯರ್‌ ಅನ್ನು ‘ಅಪ್ರಭಾವಿ’ ಎಂದು ಕರೆದಿದೆ.

ಆದರೆ, ಅಮೆರಿಕನ್‌ ತಜ್ಞರು, ಚೀನ ತನ್ನಲ್ಲಿ ಬೃಹತ್‌ ಪ್ರಮಾಣದಲ್ಲಿ ರೋಗಿಗಳು ಇದ್ದಾಗ ಈ ಪರೀಕ್ಷೆ ನಡೆಸಿದ್ದರೆ ಫ‌ಲಿತಾಂಶ ಹೆಚ್ಚು ಸ್ಪಷ್ಟವಾಗುತ್ತಿತ್ತು, ಈಗ ಅದರ ಬಳಿ ಕಡಿಮೆ ರೋಗಿಗಳಿರುವುದರಿಂದ ಫ‌ಲಿತಾಂಶ ಫ‌ಲಪ್ರದವಾಗಿಲ್ಲ ಎನ್ನುತ್ತಾರೆ.

ಚೀನ ಕೇವಲ 237 ರೋಗಿಗಳ ಮೇಲಷ್ಟೇ ಪ್ರಯೋಗ ನಡೆಸಿತ್ತು, ಅದರ ಗುರಿಯಿದ್ದದ್ದು 453 ಜನರ ಮೇಲೆ ಪ್ರಯೋಗ ಮಾಡಬೇಕು ಎಂಬುದಾಗಿತ್ತು. ಹೀಗಾಗಿ, ರೋಗಿಗಳ ಅಲಭ್ಯತೆಯ ಕಾರಣದಿಂದಾಗಿ, ಅವಧಿಗಿಂತ ಪೂರ್ವದಲ್ಲೇ ಪರೀಕ್ಷೆ ಮುಗಿಸಲಾಯಿತು.

ವಿಶ್ವಾದ್ಯಂತ ಪ್ರಯೋಗಗಳ ಅಲೆ
ಜಗತ್ತಿನಾದ್ಯಂತ ಆರ್ಥಿಕತೆಗಳನ್ನು ಕಟ್ಟಿಹಾಕಿರುವ ಕೋವಿಡ್ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡು ಹಿಡಿಯುವುದಕ್ಕಾಗಿ ವೈಜ್ಞಾನಿಕ ವಲಯ ಪ್ರಯತ್ನಿಸುತ್ತಿದೆ.

ವೈರಸ್‌ ನಿಯಂತ್ರಣಕ್ಕೆ ವಿಶ್ವಾದ್ಯಂತ 11ಕ್ಕೂ ಅಧಿಕ ಸಂಭಾವ್ಯ ಚಿಕಿತ್ಸಾ ಕ್ರಮಗಳನ್ನು ಹಾಗೂ 137ಕ್ಕೂ ಅಧಿಕ ಸಂಭಾವ್ಯ ಲಸಿಕೆಗಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ.

ಬಹುತೇಕ ದೇಶಗಳಲ್ಲಿ ವೈರಾಣು ವಿರೋಧಿ ಔಷಧಗಳ ಮೇಲೆ ಪರೀಕ್ಷೆ ನಡೆಸಲಾಗುತ್ತಿದೆ. ಯುರೋಪ್‌ನ ಕೆಲವು ದೇಶಗಳಲ್ಲೀಗ Acetemra ಎನ್ನುವ ಔಷಧವನ್ನು ಕೋವಿಡ್ ಸೋಂಕು ಪೀಡಿತರಿಗೆ ಕೊಡಲಾಗುತ್ತಿದೆ.

ಈ ಔಷಧವನ್ನು ರುಮೆಟೈಡ್‌ ಆರ್ಥರೈಟಿಸ್‌ ರೋಗಿಗಳಿಗೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಲಕ್ಷಣಗಳ ನಿವಾರಣೆಗಾಗಿ ಬಳಸುತ್ತಾ ಬರಲಾಗಿತ್ತು. ಫ್ರಾನ್ಸ್‌ನ ಆಸ್ಪತ್ರೆ ಸಮೂಹವೊಂದು, ಈ ಔಷಧ ಪರಿಣಾಮಕಾರಿ ಫ‌ಲಿತಾಂಶ ತೋರಿಸುತ್ತಿದೆ ಎಂದು ಹೇಳಿದೆ.

ಇನ್ನು Kevzara ಎನ್ನುವ ಔಷಧದಿಂದಲೂ ಆರಂಭದಲ್ಲಿ ಪರೀಕ್ಷೆಗಳು ನಡೆದವಾದರೂ, ಗಮನಾರ್ಹ ಫ‌ಲಿತಾಂಶವೇನೂ ಅದು ನೀಡಲಿಲ್ಲ ಎಂದು ಈ ಔಷಧಿಯ ಉತ್ಪಾದಕ ಕಂಪೆನಿಗಳೇ ಹೇಳಿವೆ.

ಕೆಲ ಸಮಯದ ಹಿಂದೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಭಾರತದಿಂದ ಹೈಡ್ರಾಕ್ಸಿಕ್ಲೊರೊಕ್ವಿನ್‌ ಆಮದು ಮಾಡಿಕೊಂಡವು. ಟ್ರಂಪ್‌ ಹೈಡ್ರಾಕ್ಸಿಕ್ಲೊರೊಕ್ವಿನ್‌ ಬಗ್ಗೆ ಎಷ್ಟು ಆಶಾಭಾವನೆ ವ್ಯಕ್ತಪಡಿಸಿದರೆಂದರೆ, ವಿಶ್ವಾದ್ಯಂತ ಇದರ ಬೇಡಿಕೆ ಅಧಿಕವಾಗಿಬಿಟ್ಟಿತು. (ಭಾರತವೇ ಜಗತ್ತಿಗೆ 70 ಪ್ರತಿಶತ ಪೂರೈಸುತ್ತದೆ).

ಆದರೆ ಭಾರತ ಇದರ ಮೇಲೆ ಇನ್ನೂ ಪ್ರಯೋಗಗಳು ನಡೆಯುತ್ತಿವೆಯೆಂದೂ, ನಿರ್ದಿಷ್ಟ ವ್ಯಕ್ತಿಗಳಿಗೆ (ವೈದ್ಯರು, ತೀವ್ರ ಸೋಂಕಿತರು ಹಾಗೂ ಸೋಂಕಿನ ಸಂಭಾವ್ಯತೆ ಹೆಚ್ಚು ಇರುವವರಿಗೆ) ಅಷ್ಟೇ ಬಳಸುತ್ತಿದೆ. ಈ ಔಷಧದ ಸೈಡ್‌ಎಫೆಕ್ಟ್ ಗಳೂ ಕೂಡ ಅಪಾಯಕಾರಿಯಾಗಿದ್ದು, ಅಂಕೆ ತಪ್ಪದಂತೆ ಎಚ್ಚರಿಕೆ ವಹಿಸಲಾಗುತ್ತದೆ.

ಇದಷ್ಟೇ ಅಲ್ಲದೆ, ಈಗ ನಮ್ಮ ದೇಶದಲ್ಲಿ 20ಕ್ಕೂ ಅಧಿಕ ಔಷಧಗಳ ಮೇಲೆ ಟ್ರಯಲ್ಸ್‌ ನಡೆಸಲು ತಯ್ನಾರಿ ನಡೆದಿದೆ. ಇದರಲ್ಲಿ Favipiravir ನಂಥ ಆ್ಯಂಟಿವೈರಲ್‌ ಡ್ರಗ್‌ಗಳೂ ಇವೆ. ಇನ್ನು ಚಿಕಿತ್ಸಾ ವಿಧಾನಗಳ ವಿಷಯಕ್ಕೆ ಬಂದರೆ, ಪ್ಲಾಸ್ಮಾ ಥೆರಪಿ ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿದೆ.

ಕೆಲವರು ಪ್ಲಾಸ್ಮಾ ಥೆರಪಿಯನ್ನು ರಾಮಬಾಣ ಎಂದು ಕರೆದರೆ, ಉಳಿದವರು ಅಪಾಯಕಾರಿ ಪ್ರಯೋಗ ಎನ್ನುತ್ತಿದ್ದಾರೆ. ಭಾರತ ಸರಕಾರ ಕೂಡ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕ ಹಂತಕ್ಕೆ ಮೀಸಲಿರಿಸಿದೆಯೇ ಹೊರತು, ಅಧಿಕೃತ ಒಪ್ಪಿಗೆ ನೀಡಿಲ್ಲ. ಅಲ್ಲದೇ ಇದು ಅಪಾಯಕಾರಿಯಾಗಬಲ್ಲದು ಎಂದೂ ಎಚ್ಚರಿಸಿದೆ.  ಈಗ, ಹಠಾತ್ತನೆ ಜಗತ್ತಿನ ಚಿತ್ತ ರೆಮಿಡ್‌ಸಿವಿಯರ್‌ನತ್ತ ಹರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next