Advertisement

ಭಾರತ ಮೂಲದ 15 ವರ್ಷದ ಸಂಶೋಧಕಿಗೆ ಟೈಮ್ಸ್‌  ಪುರಸ್ಕಾರ

11:21 PM Dec 04, 2020 | mahesh |

ಟೈಮ್ಸ್‌ ನಿಯತಕಾಲಿಕವು ಇದೇ ಮೊದಲ ಬಾರಿ ಪರಿಚಯಿಸಿರುವ ಪ್ರತಿಷ್ಠಿತ “ಕಿಡ್‌ ಆಫ್ ದಿ ಇಯರ್‌’ ಪುರಸ್ಕಾರಕ್ಕೆ ಭಾರತ ಮೂಲದ ಸಂಶೋಧಕಿ 15 ವರ್ಷದ ಗೀತಾಂಜಲಿ ರಾವ್‌ ಆಯ್ಕೆಯಾಗಿದ್ದಾರೆ. ಈ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದ 5 ಸಾವಿರ ಮಕ್ಕಳಲ್ಲಿ ಗೀತಾಂಜಲಿ ಆಯ್ಕೆಯಾಗಿರುವುದು ವಿಶೇಷ. ಕಲುಷಿತ ನೀರಿನ ಶುದ್ಧೀಕರಣ, ಮಾದಕ ವ್ಯಸನದಿಂದ ಮುಕ್ತವಾಗುವುದು ಮತ್ತು ಸೈಬರ್‌ ಬುಲ್ಲೀಯಿಂಗ್‌(ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆ)ನಂಥ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶಿಷ್ಟ ಸಂಶೋಧನೆ ಕೈಗೊಂಡಿದ್ದಾರೆ ಗೀತಾಂಜಲಿ. ಹಾಲಿವುಡ್‌ನ‌ ಖ್ಯಾತ ನಟಿ ಏಂಜಲಿನಾ ಜೋಲಿ ಈ ನಿಟ್ಟಿನಲ್ಲಿ ಗೀತಾಂಜಲಿಯೊಂದಿಗೆ ವರ್ಚುವಲ್‌ ಸಂದರ್ಶನ ನಡೆಸಿದ್ದು, ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

 ವಿಜ್ಞಾನದಲ್ಲಿ ನಿನಗೆ ಒಲವು ಇದೆ ಎಂದು ಯಾವಾಗ ಅರಿವಾಯಿತು?
ಇದು ಒಂದೇ ದಿನಕ್ಕೆ ಆಗಿದ್ದಲ್ಲ. ಜನರ ಮುಖದ ಮೇಲೆ ಮಂದಹಾಸ ಮೂಡಿಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಈ ಭಾವನೆಯೇ ಮುಂದೆ ನಾವಿರುವ ಜಾಗದಲ್ಲಿ, ಸಮುದಾಯದಲ್ಲಿ ಗುಣಾತ್ಮಕತೆಯನ್ನು ತರುವುದು ಹೇಗೆ ಎನ್ನುವ ಪ್ರಶ್ನೆಯಾಗಿ ಬದಲಾಯಿತು. ಈ ಬದಲಾವಣೆಯನ್ನು ತರಲು ವಿಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಲಾರಂಭಿಸಿದೆ. ನನ್ನ 10ನೇ ವಯಸ್ಸಿನಲ್ಲಿ ಅಪ್ಪ ಅಮ್ಮನಿಗೆ ಹೇಳಿದೆ- ನನಗೆ ಕಾರ್ಬನ್‌ ನ್ಯಾನೋಟ್ಯೂಬ್‌ ಸೆನ್ಸರ್‌ ಟೆಕ್ನಾಲಜಿಯಲ್ಲಿ ಸಂಶೋಧನೆ ಮಾಡಲು ಆಸಕ್ತಿ ಇದೆ ಎಂದು. ಇದನ್ನು ಕೇಳಿ ನನ್ನ ಅಮ್ಮ ಕೇಳಿದಳು- ಹಂಗಂದ್ರೆ ಏನು?!(ನ್ಯಾನೋಟ್ಯೂಬ್‌ ಸೆನ್ಸರ್‌ಗಳು ನೀರಿನಲ್ಲಿನ ರಾಸಾಯನಿಕಗಳನ್ನು ಪತ್ತೆ ಹಚ್ಚಲು ಸಹಕರಿಸುತ್ತವೆ). ಈ ಕೆಲಸವನ್ನು ಯಾರೂ ಮಾಡಲಿಲ್ಲ ಅಂದರೆ, ನಾನು ಮಾಡುತ್ತೇನೆ!

 ನಿನ್ನ ಹೊಸ ಸಂಶೋಧನೆ “ಕೈಂಡ್ಲಿ’ ಆ್ಯಪ್‌, ಸೈಬರ್‌ ನಿಂದನೆಯನ್ನು ತಡೆಯಲು ಸಹಕರಿಸುವುದೇ?
ಈ ಆ್ಯಪ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಆಧರಿಸಿ ಕೆಲಸ ಮಾಡುತ್ತದೆ. ಯಾವ ಪದಗಳು ನಿಂದನೀಯವಾಗಿರುತ್ತವೆ, ಅವಾಚ್ಯವಾಗಿರುತ್ತವೆ ಎನ್ನುವುದನ್ನೆಲ್ಲ ಸಂಗ್ರಹಿಸಿ ಕೋಡ್‌ ಮಾಡುತ್ತಾ ಹೋದೆ. ನೀವು ಸಂದೇಶ ಟೈಪ್‌ ಮಾಡುವಾಗ ಆ ಪದಗಳನ್ನು ಬಳಸಿದಿರಿ ಎಂದುಕೊಳ್ಳಿ. ಆಗ ಈ ಆ್ಯಪ್‌ ನೀವು ಬಳಸುವ ಪದ ಅವಾಚ್ಯವಾಗಿದೆಯೇ, ನಿಂದನೆ ಮಾಡುವಂತಿದೆಯೇ ಎನ್ನುವುದನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಹದಿಹರೆಯದವರು ಸಿಟ್ಟಿನ ಭರದಲ್ಲಿ ಏನೇನೋ ಬರೆದುಬಿಡುತ್ತಾರೆ. ಈ ಆ್ಯಪ್‌ ಅವರಿಗೆ ಇನ್ನೊಮ್ಮೆ ಯೋಚಿಸುವಂತೆ ಸಲಹೆ ನೀಡುತ್ತದೆ.

 ಸಂಶೋಧನೆಯಲ್ಲಿ ಆಸಕ್ತಿಯಿರುವ ಮಕ್ಕಳಿಗಾಗಿ ಕಾರ್ಯಾಗಾರಗಳನ್ನೂ ನಡೆಸುತ್ತಿರುವೆ. ಈ ಬಗ್ಗೆ ಹೇಳು?
ಶಾಂಘೈ ಇಂಟರ್‌ನ್ಯಾಶನಲ್‌ ಸೈನ್ಸ್‌ ಗ್ರೂಪ್‌, ಲಂಡನ್‌ನ ರಾಯಲ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ ಸಹಭಾಗಿತ್ವದಲ್ಲಿ ಸಂಶೋಧನ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿದ್ದೇನೆ. ಇದರಲ್ಲಿ ಇದುವರೆಗೂ 30 ಸಾವಿರ ಮಕ್ಕಳು ಭಾಗವಹಿಸಿದ್ದಾರೆ. ಅವರು ಅಲ್ಲಿ ತಮ್ಮ ಐಡಿಯಾಗಳನ್ನು ಹೇಳುತ್ತಾರೆ. ತಜ್ಞರು ಮಾರ್ಗದರ್ಶನ ನೀಡುತ್ತಾರೆ.

 ಈಗ ಮತ್ಯಾವ ಸಂಶೋಧನೆಯಲ್ಲಿ ತೊಡಗಿರುವೆ?
ನೀರಿನಲ್ಲಿನ ಜೈವಿಕ ಮಾಲಿನ್ಯಕಾರಕಗಳನ್ನು ಸುಲಭವಾಗಿ ಪತ್ತೆ ಹಚ್ಚುವ ಮಾರ್ಗವನ್ನು ಅನ್ವೇಷಿಸುತ್ತಿದ್ದೇನೆ. ತೃತೀಯ ರಾಷ್ಟ್ರಗಳು ತಮ್ಮ ನೀರಿನಲ್ಲಿ ಮಾಲಿನ್ಯಕಾರಕಗಳನ್ನು ಖಚಿತವಾಗಿ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಪತ್ತೆಹಚ್ಚುವಂತಾಗಬೇಕು ಎನ್ನುವುದು ನನ್ನ ಆಸೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next